Kannada News | Sanduru Stories | Dinamaana.com | 21-06-2024
ಮುಚ್ಚಿದ ಶಾಲೆಗಳ ಮೌನ ಎದೆ ಕಲಕುತ್ತದೆ (Sanduru Stories)
ಆರು ದಶಕಗಳಿಗೂ ಹೆಚ್ಚು ಕಾಲ ಲಕ್ಷಾಂತರ ಎದೆಗಳಿಗೆ ಅಕ್ಷರಗಳನುಣಿಸಿದ ಮುಚ್ಚಿದ ಶಾಲೆಗಳ ಮೌನ ಎದೆ ಕಲಕುತ್ತದೆ. ಸಂಸ್ಥೆಯ ಮಾಲೀಕರಿಗೆ ಎಜ್ಯುಕೇಶನ್ ಸೊಸೈಟಿಯಲ್ಲಿ ಲಾಭವೇನೂ ಇಲ್ಲವೆನಿಸಿತಂತೆ. ಅದಕ್ಕೆ ಮುಚ್ಚಿದರು ಎಂದು ಅಲ್ಲಿದ್ದ ಹುಡುಗನೊಬ್ಬ ಹೇಳಿದ.
ಮಾತುಗಳು ಮೌನಕ್ಕೆ ತಿರುಗುವುದೆಂದರೆ….ಹೀಗೆ…. ಆ ಬೃಹತ್ತಾದ ಯಂತ್ರಗಳು ಕೆಡವುತ್ತಿರುವ ಮನೆಗಳು ತಮ್ಮವೇ ಎಂದು ತಿಳಿದಿದ್ದರೂ…ಅದು ಕೆಡವುತ್ತಿರುವ ರೀತಿ , ಶಕ್ತಿ , ಸಾಮರ್ಥ್ಯಗಳನ್ನು ಮೂಗಿನ ಮೇಲೆ ಬೆರಳಿಟ್ಟು ಕೊಂಡು ನಿಂತು ನೋಡುವ ಜನರಿಗೆ ಅದರ ಪರಿವೆಯೂ ಇಲ್ಲ ಎಂದು ಹೇಳುವುದಾದರೂ ಹೇಗೆ?
ತೂಗುವ ತಕ್ಕಡಿಯೇತಕೆ ಮತ್ತೆ ಮತ್ತೆ ಮೋಸ ಮಾಡುತ್ತಿದೆ (Sanduru Stories)
ಉದ್ಯೋಗಖಾತ್ರಿಯ ಕೂಲಿ ಕೇಳಿದ್ದಕ್ಕೆ ಲಾಠಿಚಾರ್ಜು ಮಾಡಿ ಹೊತ್ತೊಯ್ದ ಪೊಲೀಸರ ವ್ಯಾನಿನ ಚಕ್ರಗಳ ಗುರುತು ಕಂಡು ಸಾಲಿಯಿಂದ ಬಂದ ಮಕ್ಕಳು “ಅಯ್…ಅಲ್ನೋಡಲ್ಲಿ!”ಎಂದು ಸಂಭ್ರಮಿಸಿ ಒಳಗೋಡುತ್ತವೆ. ಬೈಗು ಹೊತ್ತಾದರೂ ಬರದ ಅಪ್ಪ ಅವ್ವನ ನೆನೆದು, ಸೊಂಡೂರಿನ ಬೀದಿ ಬೀದಿಯಲ್ಲಿ ಹುಡುಕುತ್ತಿರುವುದು ಕಣ್ಮುಂದೆ ಬರುತ್ತಿದೆ. ತೂಗುವ ತಕ್ಕಡಿಯೇತಕೆ ಮತ್ತೆ ಮತ್ತೆ ಮೋಸ ಮಾಡುತ್ತಿದೆ?
ಕಣ್ಣು ಕೋರೈಸುವ ಬೆಳಕಿನ ಮನುಷ್ಯನಿರ್ಮಿತ ಪಟ್ಟಣಗಳು. ಸನಿಹದಲ್ಲಿಯೇ ಅಸ್ತಿತ್ವ ಕಳೆದುಕೊಂಡು ಬುಡ್ಡೀದೀಪದಂತಹ ಬೆಳಕಿನಲ್ಲಿ ನರಳುವ ಹಳ್ಳಿಗಳು. ತಮ್ಮದೇ ಹೊಲಗಳ ಮೇಲೆ ಧಗಧಗಿಸುವ ಫರ್ನೇಸುಗಳು, ಬಂಗಲೆಗಳು.,ವಿಮಾನ ನಿಲ್ದಾಣ… ಅಮೃತ ಶಿಲೆಯ ಮಾತನಾಡದ ಮುಗ್ಧ ಬಾಲಕರಂತಿರುವ ದೇವರುಗಳು! “ಪ್ಯಾಟ್ರಿಗುಳೂ ಆದ್ರೆ…ಎಲ್ರಿಗೂ ಕೆಲ್ಸ ಸಿಕ್ತತಪೋ” ಎಂದ ಅಪ್ಪನೂ ಇಲ್ಲ. ಆತನ ಮಾತೂ ಇಲ್ಲ.
Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 52 : ಪಾಪ ಅವರು ಹಸಿದಿದ್ದರು…
ಕಾಲಚಕ್ರ ಉರುಳುತಿದೆ (Sanduru Stories)
ದೇವರಗಂಟೆ ಮೊಳಗಿದರೆ ಏಳುತ್ತಿದ್ದ ಮುಲ್ಲಾ ಈಗಿಲ್ಲ. ಮುಲ್ಲಾ ಸಾಬನ ಕೂಗಿಗೆ ಎದ್ದು ಕೈ ಮುಗಿಯುವ ಜನಾನು ಇಲ್ಲ. ಕ್ರಿಸ್ಮಸ್ ಹಬ್ಬದ ವಿಚಿತ್ರವಾದ ಸಿಹಿತಿನಿಸಿಗಾಗಿ ಕಾದು ಕುಳಿತ ಹುಡುಗರೂ ಇಲ್ಲ.
ದೀಪಾವಳಿ-ರಮಜಾನು-ಗಣೇಶ ನಿಗೂ ಮುಂಚೆ ಪೊಲೀಸರು ಆಗಮನವಾಗುತ್ತಿದೆ. ಯಾರದೊ ರಕ್ತ ಹಣೆಗೆ ತಿಲಕವಾಗಿದ್ದಾದರೂ ಹೇಗೆ? ಗೋಲಿ ಆಡುವ ಹುಡುಗರ ಚೆಡ್ಡಿ ಜೇಬುಗಳಿಗೆ ಗುಂಡುಗಳ ತುಂಬಿದ್ದಾದರೂ ಯಾರು? ಪ್ರಶ್ನೆಗಳನ್ನೆ ಮುಖದಲ್ಲಿ ಹೊತ್ತು ನಿಂತಿರುವ,ಕಣ್ಣು ತುಂಬಿದ ನೀರಿನಲ್ಲಿ ಮನುಷ್ಯರು ಕಾಣಲಿಕ್ಕಿಲ್ಲ. ಆದರೆ…ಸಂತಾಪಕ್ಕಾದರೂ ಒಂದೆರೆಡು ಹನಿಗಳನ್ನಾದರೂ ಸುರಿಸಿ , ಋಣ ಸಂದಾಯ ಮಾಡಿ.
ಬಿ.ಶ್ರೀನಿವಾಸ