“ದುಡುದ್ವಿ ಸಾರ್,ಹಗಲೂ ರಾತ್ರಿ ಕೂಡ ದುಡುದ್ವಿ ನಾನ್ ಇಲ್ಲಾ ಅಂಬಕುಲ್ಲ…ರಕ್ಕ ಹೆಂಗ್ ಬಂದ್ವು,ಹಾಂಗಾ ಹೋದ್ವು…!
ದೊಡ್ಡೋರ್ ಹೇಳೋದ್ ಸತ್ಯ ಸರ್
ದೊಡ್ಡೋರ್ ಹೇಳೋದ್ ಸತ್ಯ ಸರ್,ಮಣ್ಣನ್ನ,ಗಂಗಮ್ಮನ್ನ,ಮತ್ತೆ ಕಲ್ಲುನ ಮಾರಿಕ್ಯಾಬಾರದು. ಮಾರಿಕ್ಯಂಡನು ಉದ್ಧಾರ ಆಗಾಂಗಿಲ್ಲ … ಯಾಕಂದ್ರ ನಾವಿದೀವಲ್ಲ …ಅಷ್ಟಾಕಂದು ರಕ್ಕ ಇಟಕಂಡೂ, ನಾಕು ಟಾಟಾ ಟಿಪ್ಪರ್ ಗಾಡಿಗುಳು,ಕೈತುಂಬಾ ರಕ್ಕ , ಎಲ್ಲ ಇದ್ವು.ಆದ್ರೇನಾತು ಇವತ್ತಿಂದಿಸ ಹುಡುಕ್ಯಾಡಿದ್ನಪ ಅಂದ್ರೆ ಐಪಸ ಸೈತ ಇಲ್ಲ.” ಎಂದು ನಕ್ಕು, ಹೇಳುತ್ತಿದ್ದವನನ್ನೆ ನೋಡಿದೆ. ಕಾಲದ ಕರಾಳ ಅನುಭವಗಳು ಮೂವತ್ತರ ಆ ಹುಡುಗನನ್ನು ಮಾಗಿಸಿದಂತಿದ್ದವು.
ಚೈತನ್ಯ ಶೀಲ ಸಮಾಜವೊಂದು ಮನುಷ್ಯನಿಗೆ ಇರುವ ಅಗಾಧ ಸಾಧ್ಯತೆಗಳನ್ನು ರೂಪಿಸಬಲ್ಲುದು ಎಂಬುದೇನೋ ನಿಜ.ಚೈತನ್ಯವೇ ಉಡುಗಿಹೋದ ಸಮಾಜಗಳ ಚಿಕಿತ್ಸೆ ಮಾಡುವುದು ಹೇಗೆ? ಇಂಥದ್ದೇ ವಿವರಗಳನ್ನು ಆತ ಒಂದೊಂದಾಗಿ ನೀಡುತ್ತಿದ್ದ.ಅದೊಂದು ಊರು. ಹೆಸರಿನಲ್ಲಿಯೇ ಪಾಪವನ್ನು ಹೊತ್ತ ಪುಟ್ಟ ಹಳ್ಳಿ.ಒಂದು ಕಾಲದಲ್ಲಿ ಆ ಊರಿನಲ್ಲಿ ಮನುಷ್ಯರಿಗಿಂತ ಟಾಟಾ ಟಿಪ್ಪರುಗಳೇ ಜಾಸ್ತಿಯಿದ್ದುವಂತೆ.ಹೊಸಪೇಟೆಯಿಂದ ಕೇವಲ ಹತ್ತು ಕಿಲೋ ಮೀಟರ್ ದೂರದ ಈ ಹಳ್ಳಿಯ ಮನೆ ಮನೆಗೂ ಒಂದೊಂದು ಟಾಟಾ ಟಿಪ್ಪರುಗಳಿದ್ದುವಂತೆ!.
ಸಾವ್ಕಾರ ರತನ್ ಟಾಟಾನೇ ಊರಿಗೆ ಬಂದಿದ್ದರು
ಭಾರತದ ಮೂಲೆಯೊಂದರಲ್ಲಿ, ಇಂಥದೊಂದು ಪುಟ್ಟ ಹಳ್ಳಿಯೊಂದರಲ್ಲಿ ಇಷ್ಟೊಂದು ಪ್ರಮಾಣದ ಗಾಡಿಗಳು ಮಾರಾಟವಾಗಿದ್ವು ಎಂದರೆ, ಅದೆಂಥಹ ಊರಿರಬೇಕು ಎಂಬ ಕುತೂಹಲದೊಂದಿಗೆ ಸ್ವತಃ ಆ ಸಾವ್ಕಾರ ರತನ್ ಟಾಟಾನೇ ಕುತೂಹಲಿಯಾಗಿ ಊರನ್ನು , ಜನರನ್ನು ನೋಡಬೇಕೆಂದು ಬಂದು ಹೋದನೆಂದು ಹೇಳುತ್ತಾರೆ. ಹಾಗೆ ಹೇಳುವಾಗ ಆತನ ಕಣ್ಣುಗಳು ಇಷ್ಟಗಲ ಆಗುವುದನ್ನು ಗಮನಿಸಿ, ” ನೀವು ನೋಡಿ ಮಾತಾಡಿಸಿದಿರ?” ಕೇಳಿದೆ. “ಇಲ್ಲ ಸಾರ್….ಟಾಟಾ ಧಣಿ ವೇಷ ಮರೆಸಿಕೊಂಡು ಬಂದು ಹೋದ್ನಂತೆ” ನೋಡಲಾಗಲಿಲ್ಲವಲ್ಲ ಎಂಬ ನಿರಾಶೆಯೊಂದಿಗೆ ನುಡಿದ.
ನಾಗರಿಕ ಹಕ್ಕುಗಳು ದಮನಕ್ಕೆಈ ಊರುಗಳೇ ಸಾಕ್ಷಿ
ಅಕ್ರಮ ಗಣಿಗಾರಿಕೆಯೆನ್ನುವುದು ಒಂದು ಕಾಲಕ್ಕೆ ಮುಗಿದು ಹೋಗಿರಬಹುದು ಅಥವಾ ಇತಿಹಾಸ ಕೋಶದಲ್ಲಿ ಸೇರಿಹೋಗಿರಬಹುದು.ಆದರೆ ನಾಗರಿಕ ಹಕ್ಕುಗಳು ದಮನಗೊಳ್ಳುತ್ತಾ ಹೋದಂತೆ ಶೋಷಣೆಯೂ ಕ್ರೂರವಾಗುತ್ತ ಹೋಗುತ್ತದೆ ಎನ್ನುವುದಕ್ಕೆ ಇಂಥ ಊರುಗಳು ಸಾಕ್ಷಿಯಾಗುತ್ತವೆ.
ಮಾಡದ ತಪ್ಪಿಗೆ ಅಜೀವ ಕಾರಾಗೃಹ ಶಿಕ್ಷೆ
ದಿನದಿಂದ ದಿನಕ್ಕೆ ಕಣ್ಣಿಗೆ ಕಾಣದಂತಹ ಈ ಮಹಾರೋಗದ ಕೊಡುಗೆಯಾದ ಒಂಟಿತನ, ಕೆಲಸವಿಲ್ಲದ ಖಾಲಿತನ,..ಜನ ದಿಗ್ಭ್ರಮೆ ಯಲ್ಲಿರುವ ಹಾಗೆ ಕಾಣಿಸುತ್ತಾರೆ. ಇಡೀ ಜಗತ್ತಿನೊಂದಿಗೆ ಸಂಪರ್ಕವಿಲ್ಲದ ವರ ಹಾಗೆ ಏಕಾಂಗಿಯಾಗಿ ಭಾವ ಖಿನ್ನತೆಗೆ ಒಳಗಾಗಿದ್ದಾರೆ. ಮಾಡದ ತಪ್ಪಿಗೆ ಅಜೀವ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವವರ ಮನಃಸ್ಥಿತಿಯಿಂದ ಬಳಲುವುದು ಈ ಕಾಲದ ತಲ್ಲಣಗಳಲ್ಲೊಂದು. ಇಂಥ ಅನೇಕ ನೆನಪುಗಳು ಹಳ್ಳಿಗರಿಗೆ ಹೊಸ ದುಃಸ್ವಪ್ನ ಗಳಾಗಿ ಕಾಡುತ್ತಲೆ ಇರುತ್ತವೆ.
ಬಿ.ಶ್ರೀನಿವಾಸ