ಸೊಂಡೂರಿನ ಸುತ್ತಲೂ ಹರಡಿಕೊಂಡಿರುವ ಬೆಟ್ಟಗಳು ಆನೆಯ ಸೊಂಡಿಲಿನಂತೆ ಕಾಣುವುದರಿಂದ ಸೊಂಡಿಲ ಊರು ಬರು ಬರುತ್ತಾ ಸೊಂಡೂರು ಆಗಿರುವುದೆಂದು ಹೇಳುತ್ತಾರೆ. ಈ ಪರಿಸರದಲ್ಲಿರುವ ಅರಣ್ಯಗಳು,ವಿವಿಧ ಕಾಡುಪ್ರಾಣಿಗಳು,ಪಕ್ಷಿಗಳು,ಝರಿಗಳು ನೀರೂ,ಹಳ್ಳಗಳಿಂದಾಗಿ,ಜಲ ನೆಲಗಳೆರೆಡೂ ಸಮೃದ್ಧಿಯಾಗಿತ್ತು.
ಕುಮಾರಸ್ವಾಮಿ ಇಲ್ಲಿನ ಜನರ ಆರಾಧ್ಯದೈವ.ಸ್ಕಂದ ಎಂಬ ಹೆಸರಿನ ಈ ದೇವರ ಹೆಸರಿನ ಕಥೆಗಳು ಜನರ ಬಾಯಿಯಲ್ಲಿ ಇವೆ.ಇಂತಹ ಪ್ರಕೃತಿಯ ರಮ್ಯ ತಾಣಗಳನ್ನು ಪುರಾಣ ಕಾಲದಿಂದಲೂ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ.
ತ್ರೇತಾಯುಗದಲ್ಲಿ ಸ್ವರ್ಣಗಿರಿ
ಸೊಂಡೂರಿನ ಪರ್ವತ ಶ್ರೇಣಿಗಳಿಗೆ ದೇವಗಿರಿ ಎಂದೂ, ತ್ರೇತಾಯುಗದಲ್ಲಿ ಸ್ವರ್ಣಗಿರಿ ಎಂದು, ದ್ವಾಪರಯುಗದಲ್ಲಿ ದಿವ್ಯಾಚಲ ಎಂದೂ ಕಲಿಯುಗದಲ್ಲಿ’ ಲೋಹಾಚಲ ‘ಎಂದು ಕರೆಯುತ್ತಿದ್ದುದನ್ನು ಜನರ ಬಾಯಿಂದಲೇ ಕೇಳಬಹುದು.ತಾರಕಾದಿ ಅಸುರರ ಸಂಹಾರಕ್ಕಾಗಿ ನವಿಲು ಸ್ವಾಮಿ ಅಂದರೆ ಕುಮಾರಸ್ವಾಮಿ -ಕಾರ್ತಿಕೇಯ ಈ ಬೆಟ್ಟದಲ್ಲಿ ನೆಲೆಸಿದನಂತೆ.
‘ಷಣ್ಮುಖ ಕಾಪಾಡಪ್ಪಾ
ಇಂತಹ ನವಿಲು ಸ್ವಾಮಿ ಬೆಟ್ಟದ ಕಡೆಗೆ ಜನರು ಈಗಲೂ ಬೆಳಗ್ಗೆದ್ದು ಮೊದಲು ಕೈ ಮುಗಿದೇ ಮುಂದಿನ ಕೆಲಸಕ್ಕೆ ಹೋಗುತ್ತಾರೆ.ರಾತ್ರಿ ವೇಳೆ ಕೂಡ ‘ಷಣ್ಮುಖ ಕಾಪಾಡಪ್ಪಾ ‘ ಎಂದು ಹೇಳಿ ಆ ಬೆಟ್ಟದ ಕಡೆಗೆ ತಲೆ ಮಾಡಿಯೆ ಮಲಗುತ್ತಾರೆ. ಜೋ..ಜೋ…ಲಾಲೀ ನನ್ ಬಂಗಾರ….ಅಲ್ನೋಡ್ ಅಲ್ನೋಡು ,ನವಿಲಿನ ಮ್ಯಾಲೆ ಕುತ್ಕೊಂಡು ನಮ್ ಪಾಪೂನ ಕುಂದ್ರಿಸಿಕಂಡು ಆ ದೇಶ… ಈ ದೇಶನೆಲ್ಲ ಸುತ್ತಿಸ್ಕಂಡು …ಈ ಗುಡ್ಡ ಆ ಬೆಟ್ಟದ ,ಕೈಲಾಸ,ವೈಕುಂಠಗಳನೆಲ್ಲಾ ತೋರಿಸ್ಕಂಡು ಬರ್ತಾನೆ ಸ್ವಾಮೀ…
………..ಲಾಲೀ… ಲಾಲಿ…ಲಾಲೀ
ಅರೆ ಕ್ಷಣದ ಹೊತ್ತು ಅವಳ ಮಾತನ್ನೆ ಕೇಳುತ್ತಿದ್ದ ಮಗು ಮತ್ತೆ ಅಳತೊಡಗುತ್ತದೆ. ಆಕೆ… ಅಳಬ್ಯಾಡ ಪಾಪೂ… ಗಂಡಿ ನರಸಿಂಹ ಮೀಸೆ ಬಿಟ್ಕೊಂಡು ಬಂದು ಕುಂಡಿ ಚಿವುಟ್ತಾನೆ . ಗಪ್ ಚುಪ್…. ಸುಮ್ನೆ ಮಕ್ಕಾ…. ಲಾಲೀ ಲಾಲೀ….ನನ ಬಂಗಾರ ಇಲ್ಲೋಗಪ ನಮ್ ಪಾಪೂ ಸುಮ್ನೆ ಮಲಗ್ಯಾನ ಹೋಗ್ ಹೋಗು ಸ್ವಾಮಿ,ಕಣ್ ಮುಚ್ಚಿ ಮಲಕಂಡಾನ… ಹೂ ಮುತ್ತನೊಂದಿತ್ತು ಮಲಗಿಸಿದ ಅವ್ವಂದಿರ ಹಾಡುಗಳು,ಕಥೆಗಳೀಗ ಕೇಳಿಸುತ್ತಿಲ್ಲ.
ನಿರ್ಜನ ಬೀದಿಗಳು.
ಸ್ಥಬ್ದಗೊಂಡ ಬೆಟ್ಟಗಳು ಬಿಕ್ಕುಗಳ ಹೊರತು ಬೇರೆ ಸದ್ದೇ ಇಲ್ಲ..ಸದ್ಧಿಲ್ಲ,ಪದ್ದಿಲ್ಲ …ಸುಡುಗಾಡು ಮೌನ! ಊರ ತುಂಬಾ ಆವರಿಸಿಬಿಟ್ಟಿದೆ. ಇಂತಹ ಊರುಗಳಿಗೆ ಮೊದಲಿನಂತೆ ಜನ ಕೂಡ ಬರುತ್ತಿಲ್ಲ.ಮದುವೆ ಮುಂಜಿಗಳೂ ನಡೆದರೆ ತಾನೆ ಬರೋದು ? ಬೀಗರು,ನೆಂಟರುಗಳೂ ಇತ್ತ ತಿರುಗಿನೋಡುವುದಿಲ್ಲ. ತೀರಾ ಅನಿವಾರ್ಯವಾದ ಕೆಲಸವಿದ್ದರೆ ಮಾತ್ರ ಬರುತ್ತಾರೆ. ಆಗ ಆತ ಬಂದೇ ಬಿಡುತ್ತಾನೆ !
ನೀವು ಬರೋದೊಂದು ಬಾಕಿಯಿತ್ತು
ಓಹೋ….ಈಗ ಬಂದಿರೇನ್ರೀ ? ಎಲ್ಲಾ ಮುಗಿದೈತೆ, ನೀವು ಬರೋದೊಂದು ಬಾಕಿಯಿತ್ತು.ನಿಮ್ಮನ್ನೇ ಕಾಯುತ್ತ ಕುಳಿತಿದ್ವಿ.ಈಗಾಗಲೇ ಎರಡು ಬಾರಿ ಹಲಿಗೆ ಬಾರಿಸಿದ್ದಾಗಿದೆ. ಇನ್ನೊಂದು ಲಾಸ್ಟನೇದು ಬಾರಿಸಿಬಿಟ್ಟರೆ ಮೂರಕ್ಕೆ ಮುಕ್ತಾಯ ಆದಂಗಾತು.ಎಲ್ಲ ಮುಗೀತಲ್ಲ.ಇನ್ನು ತಡ ಮಾಡಂಗಿಲ್ಲ.ಆರಾಮಿದ್ದುದಾದರೆ ರಾತ್ರಿ ಭಜನೆ ಗಿಜನೆ ಇಟ್ಕೋಂಡು ನಾಳೆ ಮಾಡಬೋದಿತ್ತು,ಮೈ ತುಂಬಾ ರಣಗಾಯ,ಕೀವು ಎಲ್ಲಾ ಸೋರುತ್ತಿತ್ತು.ಇಟ್ಕಣಾಕ ಬರದಿಲ್ರೀ…. ಇಳಿದು ಬರುವಾಗಿನಿಂದ ಹಿಡಿದು, ದಾರಿಯುದ್ದಕ್ಕೂ ಅವನು ಹೀಗೆ ಮಾತನಾಡುತ್ತಲೇ ಇರುತ್ತಾನೆ. ಬಸ್ಸಿಳಿದು ಯಾರೇ ಬಂದರೂ ಅವನದು ಇದೇ ಮಾತು..ಮಾತು.
ಯಾರೋ ಗದರಿಸಿದರು.
ಆದರೂ ಬಿಡದೆ ಹೇಳಿದ.
“ಇದೂ …ಊರಂತರೇನ್ರೀ? ಊರಾಗ ಯಾರನ ಬದುಕ್ಯಾರೇನ್ರಿ ?”
ಅಡ್ಡಗಟ್ಟಿ ಕೇಳಿದ ಆತನನ್ನು ಹುಚ್ಚನೆಂದು ಹೇಗೆ ಕರೆಯಲಿ ?
ಬಿ.ಶ್ರೀನಿವಾಸ