ದಾವಣಗೆರೆ (Davanagere ) : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ನಾಯಕರು ಎಡಿಜಿಪಿ ಆರ್. ಹಿತೇಂದ್ರ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅವರನ್ನು ಭೇಟಿ ಮಾಡಿ ದಾವಣಗೆರೆ ನಗರದಲ್ಲಿ ಆಶಾಂತಿ ಸೃಷ್ಟಿಸಿದವರನ್ನು ಶೀಘ್ರವಾಗಿ ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಯಾವುದೇ ಅಮಾಯಕರನ್ನು ಬಂಧಿಸದೆ ಕೇವಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನಗರದಲ್ಲಿ ಶಾಂತಿ ಕಾಪಾಡಬೇಕು ಎಂದು ಮನವಿ ಸಲ್ಲಿಸಿದರು.
ಸೆ.15ರಂದು ಅಹ್ಮದ್ ನಗರದಲ್ಲಿ ಬಾವುಟ ಕಟ್ಟುವ ವಿಚಾರದಲ್ಲಿ ನಡೆದ ಗಲಾಟೆಯ ವಿಚಾರವನ್ನು ಪೊಲೀಸರು ದೂರು ದಾಖಲಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಆದರೆ ಮರುದಿನ ನಗರದ ಮಹಾನಗರ ಪಾಲಿಕೆ ಎದುರು ನಡೆದ ಪ್ರತಿಭಟನೆಯಲ್ಲಿ ಸತೀಶ್ ಪೂಜಾರಿ ಹಾಗೂ ಇತರರು ಒಂದು ಕೋಮಿನ ವಿರುದ್ಧ ನೀಡಿದ ಹೇಳಿಕೆ ವಿಡಿಯೋ ವೈರಲ್ ಆದ ನಂತರ ಮುಸ್ಲಿಂ ಮುಖಂಡರು, ಮಂಡಕ್ಕಿ ಭಟ್ಟಿಗಳ ಅಧ್ಯಕ್ಷರು ಓಟ್ಟುಗೂಡಿ ದಾವಣಗೆರೆ ನಗರದ ಅಜಾದ್ ನಗರ ಮತ್ತು ಪಿಜೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು. ಪೊಲೀಸ್ ಅಧಿಕಾರಿಗಳು ಕಾನೂನು ಕ್ರಮಕೈಗೂಳ್ಳುವ ಆಶ್ವಾಸನೆ ನೀಡಿದ್ದರು ಎಂದು ಮುಖಂಡರು ಹೇಳಿದರು.
ಇದೇ ವೇಳೆ ಮರುದಿನ ಬೇತೂರು ರಸ್ತೆಯಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲೂ ಸತೀಶ್ ಪೂಜಾರಿ ಕಾಣಿಸಿಕೊಂಡಾಗ ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡಲು ಬಂದಿದ್ದಾನೆಂದು ತಿಳಿದು ಹಾಗೂ ಕೋಮು ಸಂಘರ್ಷವನ್ನು ಉಂಟು ಮಾಡುವ ಹೇಳಿಕೆ ನೀಡಿದ ಮೇಲೆ ಎಫ್.ಐ.ಆರ್ ಆದರೂ ಅವನನ್ನು ಬಂಧಿಸದೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೆಲವರ ಮೇಲೆ ಹಲ್ಲೆಗಳು ನಡೆದಿದ್ದವು ಎಂದಿದ್ದಾರೆ.
Read also : Davanagere | ಮದ್ಯ ಮಾರಾಟ ನಿಷೇಧ
ನಂತರ ಪೊಲೀಸ್ ಇಲಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದೆ. ಆದಕಾರಣ ತಾವುಗಳು ಈ ಕೂಡಲೇ ಕೋಮು ಸೌಹಾರ್ದ ಕೆಡಿಸುವಂತಹ ಸನ್ನಿವೇಶ ಸೃಷ್ಟಿಯಾಗಲು ಕಾರಣರಾದ, ಪ್ರಚೋದನಕಾರಿ ಹೇಳಿಕೆ ನೀಡಿರುವಂತಹ ಸತೀಶ್ ಪೂಜಾರಿ ಹಾಗೂ ದಾವಣಗೆರೆಯ ಶಾಂತಿಗೆ ಭಂಗ ತಂದತಹ ಪ್ರತಿಭಟನೆ ಗೆ ನೇತೃತ್ವ ವಹಿಸಿದ್ದ ಎಸ್ ಟಿ ವೀರೇಶ್, ರಾಜನಹಳ್ಳಿ ಶಿವಕುಮಾರ್, ಜೋಳ್ಳಿಗುರು, ಎಂ.ವೀರೇಶ್, ಲೋಕಿಕೆರೆ ನಾಗರಾಜ್ ಮತ್ತು ಇತರರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಅಮಾಯಕರನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಯಹಿಯಾ, ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ಜಬಿವುಲ್ಲಾ, ಮನ್ಸೂರ್ ಆಲಿ, ಹಾಗೂ 2ನೇ ವಾರ್ಡಿನ ಕಾರ್ಪೊರೇಟರ್ ದಾದಾಪೀರ್ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಏಜಾಜ್ ಅಹಮದ್, ಕಾರ್ಯದರ್ಶಿ ಇಸಾಕ್ ಅಹಮದ್, ಮತ್ತು ಹರಿಹರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಮಿಉಲ್ಲಾ ಮುಜಾವರ್, ಪದಾಧಿಕಾರಿಗಳಾದ ರಫೀಕ್, ಶಫಿ ಮತ್ತು ಇತರರು ಉಪಸ್ಥಿತರಿದ್ದರು.