ದಾವಣಗೆರೆ : ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಲಿದ್ದಾರೆ. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 2.20 ಕ್ಕೆ ಹೊರಟು ಸಂಜೆ 5.48 ಕ್ಕೆ ದಾವಣಗೆರೆಗೆ ಆಗಮಿಸಿ ರಾತ್ರಿ 10.40 ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿಯಿಂದ ಪ್ರತಿದಿನ ಬೆಳಗ್ಗೆ 5.20 ಕ್ಕೆ ಹೊರಟು ದಾವಣಗೆರೆಗೆ ಬೆಳಗ್ಗೆ 9.25 ಕ್ಕೆ ತಲುಪಿ ಮಧ್ಯಾಹ್ನ 1.50 ಕ್ಕೆ ಬೆಂಗಳೂರಿಗೆ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತಲುಪಲಿದೆ. ದಾವಣಗೆರೆಯಲ್ಲಿ ಈ ನೂತನ ರೈಲಿನ ಸ್ವಾಗತ ಕಾರ್ಯಕ್ರಮವನ್ನು ಆಗಸ್ಟ್ 10 ರಂದು ಮಧ್ಯಾಹ್ನ 2 ಗಂಟೆಗೆ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದೆ.
ಈಗಾಗಲೇ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪ್ರತಿನಿತ್ಯ ದಾವಣಗೆರೆ ಮಾರ್ಗವಾಗಿ ಬೆಂಗಳೂರು-ಧಾರವಾಡ, ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು ಎರಡನೇ ನೂತನ ರೈಲು ಸೇವೆ ಆಗಸ್ಟ್ 10 ರಿಂದ ಸಂಚಾರ ಆರಂಭಿಸಲಿದೆ.
ದಾವಣಗೆರೆ ಜನತೆಗೆ ವ್ಯಾಪಾರ ವಹಿವಾಟು, ಐಟಿ, ಬಿಟಿ ವಲಯದ ಉದ್ಯೋಗಿಗಳಿಗೆ, ತುರ್ತು ಸಂದರ್ಭದಲ್ಲಿ ಸಂಚಾರದಲ್ಲಿ ಸಮಯದ ಉಳಿತಾಯದ ಜೊತೆಗೆ ವಾಹನ ದಟ್ಟಣೆಯು ತಗ್ಗಲಿದೆ.