ಶಿವಮೊಗ್ಗ, ಜು. 19: ಭದ್ರಾ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಇದರಿಂದ ಡ್ಯಾಂ ಒಳಹರಿವಿನಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರಲಾರಂಭಿಸಿದೆ. ಇದರಿಂದ ಕಳೆದ ಒಂದೇ 24 ಗಂಟೆಗಳ ಅವಧಿಯಲ್ಲಿ, ಡ್ಯಾಂನಲ್ಲಿ 4 ಅಡಿಯಷ್ಟು ನೀರು ಸಂಗ್ರಹವಾಗಿದೆ!
ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 49,555 ಕ್ಯೂಸೆಕ್ ಗೆ ಏರಿಕೆಯಾಗಿದೆ. 181 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂನಲ್ಲಿ 157. 11 (ಗರಿಷ್ಠ ಮಟ್ಟ : 186) ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 141. 7 ಅಡಿ ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂನಲ್ಲಿ ಸುಮಾರು 16 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.
ಉಳಿದಂತೆ ತುಂಗಾ ಜಲಾಶಯದ ಒಳಹರಿವಿನಲ್ಲಿ ತುಸು ಇಳಿಕೆ ಕಂಡುಬಂದಿದೆ. 68,895 ಕ್ಯೂಸೆಕ್ ಒಳಹರಿವಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟವಾದ 588. 24 ಮೀಟರ್ ತಲುಪಿರುವುದರಿಂದ 64,312 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಮಳೆ ವಿವರ : ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಶಿವಮೊಗ್ಗ 37. 80 ಮಿ.ಮೀ., ಭದ್ರಾವತಿ 27. 10 ಮಿ.ಮೀ., ತೀರ್ಥಹಳ್ಳಿ 83. 60 ಮಿ.ಮೀ., ಸಾಗರ 97. 20 ಮಿ.ಮೀ., ಶಿಕಾರಿಪುರ 52. 60 ಮಿ.ಮೀ., ಸೊರಬ 77. 40 ಮಿ.ಮೀ. ಹಾಗೂ ಹೊಸನಗರದಲ್ಲಿ 102 ಮಿ.ಮೀ. ವರ್ಷಧಾರೆಯಾಗಿದೆ.