ದಾವಣಗೆರೆ ಫೆ.20 : ಕಳೆದ ಮೂರು ದಿನಗಳಿಂದ ದಾವಣಗೆರೆ ಜಿಲ್ಲೆಯಾದ್ಯಂತ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನೀರಿಕ್ಷಿತ ಭೇಟಿ ನೀಡಿ, ಆಹಾರ ಮತ್ತು ಪೌಷ್ಟಿಕಾಂಶ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದ್ದು ಜಿಲ್ಲೆಯಲ್ಲಿನ ಆಹಾರ ಭದ್ರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಭದ್ರತೆ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ತಿಳಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಆಯೋಗದ ತಂಡವು ಜಿಲ್ಲೆಯ ಅಕ್ಕಿ ಗೋದಾಮುಗಳು, ನ್ಯಾಯಬೆಲೆ ಅಂಗಡಿಗಳು, ಸರ್ಕಾರಿ ಹಾಸ್ಟೆಲ್ಗಳು, ಬಿಸಿಯೂಟದ ಶಾಲೆಗಳು, ಎಂ.ಎಸ್.ಪಿ (MSP) ಖರೀದಿ ಕೇಂದ್ರಗಳು, ಅಂಗನವಾಡಿಗಳು, ನಿರಾಶ್ರಿತರ ಪರಿಹಾರ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು ಮತ್ತು ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪರಿಶೀಲನೆಯ ವೇಳೆ ಕಂಡುಬಂದ ನ್ಯೂನತೆಗಳಿಗೆ ಸಂಬಂಧಿಸಿದಂತೆ ಆಹಾರ ಇಲಾಖೆ, ಗೋದಾಮು ವ್ಯವಸ್ಥಾಪಕರು ಸೇರಿದಂತೆ ಒಟ್ಟು ಏಳು ಅಧಿಕಾರಿ, ಸಿಬ್ಬಂದಿಗಳಿಗೆ ಆಯೋಗವು ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದರು.
ನಗರ ಮತ್ತು ಗ್ರಾಮೀಣ ಭಾಗದ ಗೋದಾಮುಗಳಲ್ಲಿ ಭೌತಿಕ ದಾಸ್ತಾನು ಮತ್ತು ಕಂಪ್ಯೂಟರ್ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರವಾದ ಮೊಟ್ಟೆ, ಅಕ್ಕಿ ಇತ್ಯಾದಿ ವಿತರಣೆಯಲ್ಲಿ ಕೆಲವು ಕಡೆ ವ್ಯತ್ಯಾಸಗಳು ಕಂಡುಬಂದಿವೆ. ತಿಂಗಳಿಗೆ 24 ಮೊಟ್ಟೆಗಳನ್ನು ನೀಡುವ ನಿಯಮವಿದ್ದರೂ, ಕೆಲವು ಕಡೆ ಕಡಿಮೆ ವಿತರಣೆಯಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಆಸ್ಪತ್ರೆಗೆ ದಾಖಲಿಸಲು ಮತ್ತು ಅಂತಹ ಮಕ್ಕಳ ಪೋಷಕರಿಗೆ 15 ದಿನಗಳಿಗೆ ಪ್ರತಿದಿನ ₹370 ಭತ್ಯೆಯನ್ನು ತಕ್ಷಣವೇ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
Read also : ಯುವ ಮಾನವ ಸಂಪತ್ತು ಅಭಿವೃದ್ದಿಯಿಂದ ದೇಶಾಭಿವೃದ್ದಿ ಸಾಧ್ಯ:ನ್ಯಾ.ಮಹಾವೀರ ಎಂ. ಕರೆಣ್ಣವರ
ಆಹಾರ ವಿತರಣೆಯಲ್ಲಿ ಭ್ರಷ್ಟಾಚಾರ ಅಥವಾ ಪಡಿತರ ಅಕ್ಕಿಯನ್ನು ಮರುಮಾರಾಟ ಮಾಡುವಂತಹ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಆಯೋಗದ ಗಮನಕ್ಕೆ ಲಿಖಿತ ರೂಪದಲ್ಲಿ ಅಥವಾ ಮೊಬೈಲ್ ಸಂಖ್ಯೆ 94448 46609 ಗೆ ದೂರನ್ನು ನೀಡಬಹುದು. ಜಿಲ್ಲೆಯ ಎಲ್ಲಾ 14 ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ, ಸರ್ಕಾರದ ಸೌಲಭ್ಯಗಳು ಪ್ರಾಮಾಣಿಕವಾಗಿ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಆಹಾರ ಭದ್ರತಾ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ , ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣ, ಕೆ.ಎಸ್. ವಿಜಯಲಕ್ಷ್ಮಿ, ರೋಹಿಣಿ ಪ್ರಿಯಾ, ಸದಸ್ಯ ಕಾರ್ಯದರ್ಶಿ ಮತ್ತು ಅಪರ ನಿರ್ದೇಶಕರಾದ ಸುಜಾತಾ ಹೊಸಮನಿ ಈ ವೇಳೆ ಉಪಸ್ಥಿತರಿದ್ದರು.
