ದಾವಣಗೆರೆ ಜ.25 : ಇಂದು ನಾವು ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಸೂರ್ಯ, ಸೂರ್ಯನಿಂದಲೇ ಮಳೆ, ಬೆಳೆ, ಆಹಾರ, ನೀರು, ಬಟ್ಟೆ, ಹೆಚ್ಚೇಕೆ? ಉಸಿರಾಡುವ ಆಮ್ಲಜನಕವೂ ಅವನ ಶಕ್ತಿಯಿಂದ ಉತ್ಪತ್ತಿಯಾಗುವುದು. ಜಗತ್ತಿನ ಅಸ್ತಿತ್ವಕ್ಕೆ ಸೂರ್ಯನ ಕೊಡುಗೆ ಅಪಾರವಾದದ್ದು. ಆದ್ದರಿಂದ ನಾವು ಸೂರ್ಯದೇವನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದು ಹಿರಿಯ ಪ್ರವಚನಕಾರರೂ, ವಾಗ್ಮಿಗಳೂ, ಜ್ಯೋತಿಷಿ, ಪುರೋಹಿತರೂ ಆದ ಪೂಜ್ಯ ಶ್ರೀ ವೇ|| ಪಂ|| ಶ್ರೀ ಗೋಪಾಲಾಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್ನಲ್ಲಿರುವ ಆದರ್ಶಯೋಗ ಪ್ರತಿಷ್ಠಾನ (ರಿ) ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೆಂದ್ರ ಇಲ್ಲಿ ರಥ ಸಪ್ತಮಿ ನಿಮಿತ್ತ ಆಯೋಜಿಸಲಾಗಿದ್ದ ಸೂರ್ಯ ನಮಸ್ಕಾರ ಯೋಗ ಯಜ್ಞ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ವಿಶೇಷ ಉಪನ್ಯಾಸ ನೀಡಿದರು.
ರಥ ಸಪ್ತಮಿಯು ಭಾರತೀಯರಿಗೆ ಒಂದು ವಿಶೇಷವಾದ ಶುಭ ದಿನ. ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿಯಂದು ಸೂರ್ಯ ದೇವನು ಅರುಣ ಎಂಬ ಸಾರಥಿಯೊಂದಿಗೆ 7 ಕುದುರೆಗಳುಳ್ಳ ಕುದುರೆಯನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸುತ್ತಾನೆ. ಭೂಮಿಗೆ ಸ್ವಲ್ಪ ಸಮೀಪ ಬರುವುದರಿಂದ ಬಿಸಿಲು ಹೆಚ್ಚಾಗುತ್ತದೆ. ಆದ್ದರಿಂದ ನಾವು ಸೂರ್ಯನನ್ನು ವಿಶೇಷವಾಗಿ ಸ್ವಾಗತಿಸಿ ಪೂಜಾ, ಪಾರಾಯಣ ಅಘ್ರ್ಯ ಪ್ರಧಾನ ಮಾಡುವುದು ಹಾಗೂ ಸೂರ್ಯ ನಮಸ್ಕರಾದಿಯನ್ನು ಅವಶ್ಯವಾಗಿ ಮಾಡಬೇಕು. ಕಾರಣ ಸೂರ್ಯ ನಮಸ್ಕಾರವು ಸೂರ್ಯದೇವರಿಗೆ ಅತ್ಯಂತ ಪ್ರಿಯವಾದುದು. ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ದಿನದ ವಿಶೇಷವೇ ರಥಸಪ್ತಮಿ ಆಗಿದೆ ಎಂದು ರಥಸಪ್ತಮಿಯ ದಿನದಂದು ನಾವು ಮನೆಯಲ್ಲಿ ಮಾಡಬೇಕಾದ ಸರಳವಾದ ಪೂಜೆಯ ವಿಧಾನವನ್ನು ವಿವರವಾಗಿ ತಿಳಿಸಿಕೊಟ್ಟರು.
ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮ, ಯೋಗಗುರು ಡಾ|| ರಾಘವೇಂದ್ರ ಗುರೂಜಿಯವರು ನಡೆಸಿಕೊಟ್ಟರು. ನಂತರ ಸೂರ್ಯಾಷ್ಟೋತ್ತರ, ಶತನಾಮಾವಳಿಗಳೊಂದಿಗೆ ಶಾಸ್ತ್ರೋಕ್ತವಾಗಿ 108 ಸುತ್ತಿನ ಸೂರ್ಯ ನಮಸ್ಕಾರ ಯೋಗ ಪದ್ಧತಿಯನ್ನು ಪ್ರತಿಷ್ಠಾನದ ಯೋಗ ಸಾಧಕರು ಮತ್ತು ಆಸಕ್ತ ಯೋಗ ಬಂಧುಗಳು 5 ವರ್ಷದ ಮಕ್ಕಳಾದಿಯಾಗಿ 76 ವರ್ಷದ ವಯೋವೃದ್ಧರು ನಿರಾಯಾಸವಾಗಿ ಮಾಡಿ ಭಕ್ತಿ ಸಮರ್ಪಣೆ ಮಾಡಿದರು. ಸೂರ್ಯ ಮಂಡಲ ಪೂಜಾ ಕೈಂಕರ್ಯವನ್ನು ಪೂಜ್ಯ ಶ್ರೀ ವೇ|| ಪಂ|| ಶ್ರೀ ಗೋಪಾಲಾಚಾರ್ ಮಣ್ಣೂರ್ ಇವರ ಮಾರ್ಗದರ್ಶನದಲ್ಲಿ ದಂಪತಿಗಳಾದ ಪ್ರಸನ್ನಕುಮಾರ್ ಎಸ್.ಆರ್., ಜಿಲ್ಲಾ ಸಹಾಯಕ ಔಷಧಿ ನಿಯಂತ್ರಣಾಧಿಕಾರಿಗಳು ಮತ್ತು ಮಾನಸ ಎನ.ಜಿ. ಇವರು ವಿಧಿ-ವಿಧಾನಗಳೊಂದಿಗೆ ನೆರವೇರಿಸಿದರು.
ದೊಡ್ಡಬಾತಿ ಅಂಚೆ ಇಲಾಖೆಯ ವೇದಾವತಿ ಡಿ.ಎಂ.ಎಸ್. ಹಾಗೂ ಹಣಕಾಸು ಸಲಹೆಗಾರರಾದ ಮಂಜುನಾಥ್ ಹೆಚ್., ಸುಮಂಗಲ ಬಿ.ಕೆ. ಶೇಷಾದ್ರಿ, ಶಂಕರ್ ಎಲ್.ಹೆಚ್. ಪ್ರಸಾದ ಸೇವೆ, ಶ್ರೀ ಲಕ್ಷ್ಮಣ್ ಹೆಚ್.ಎನ್. ಅಭಿಯಂತರರು ಪುಷ್ಪಾಲಂಕಾರ ಸೇವೆ, ಶ್ರೀಮತಿ ಜ್ಯೋತಿ ಲಕ್ಷ್ಮೀ ವಾಸುದೇವ್ ರಂಗೋಲಿ ಸೇವೆ, ಬಾಳೆಯೆಲೆ ರುದ್ರೇಶ್ ಕೆ.ಆರ್. ಮಾರ್ಕೇಟ್, ಬಾಳೆಕಂದು ಸೇವೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಂತೋಷ್ ಹೆಚ್., ಮಾಸ್ಟರ್ ತನ್ಮಯಿ, ಮಾಸ್ಟರ್ ಷಣ್ಮಖ ಎಸ್.ವಿ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
Read also : ದಾವಣಗೆರೆ:16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾಕ್ಕೆ ಚಾಲನೆ
ಸೂರ್ಯ ಮಂಡಲ ಪೂಜಾ ಸುಸಂದರ್ಭದಲ್ಲಿ ಜಿಲ್ಲಾ ಔಷಧಿ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ಎಸ್.ಆರ್. ಹಾಗೂ ಬ್ಯಾಡ್ಮಿಂಟನ್ ಕ್ರೀಡಾಪಟು ಮಾನಸ ಎನ್.ಜಿ. ದಂಪತಿಗಳನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಯೋಗ ಶಿಕ್ಷಕ, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ಸಂಯೋಜಕ ಲಲಿತ್ಕುಮಾರ್ ವಿ. ಜೈನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಯೋಗ ಸಾಧಕರುಗಳಾದ ಮಹಂತೇಶ್, ಆಸಕ್ತ ಯೋಗ ಬಂಧುಗಳು, ಇನ್ನಿತರರು ಭಾಗವಹಿಸಿದ್ದರು. ಮಹಾಮಂಗಳಾರತಿ, ತೀರ್ಥ ಪ್ರಸಾದ, ದೇಶಿ ಪಾನಿಯ, ಉಪಹಾರ ಸೇವನೆಯೊಂದಿಗೆ ರಥ ಸಪ್ತಮಿ ಕಾರ್ಯಕ್ರಮವು ಸಂಪನ್ನಗೊಂಡಿತು.
