ದಾವಣಗೆರೆ (Davamagere ) : ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ಧ ಸಂದೇಶ ಸಾರುವ ನಿಟ್ಟಿನಲ್ಲಿ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮಸ್ಜಿದ್- ಎ- ಮಹಮ್ಮದಿಯ ಮಸೀದಿಯಲ್ಲಿ ಏರ್ಪಡಿಸಿದ್ದ “ನೋಡು ಬಾ ನಮ್ಮೂರ ಮಸೀದಿ” ಮಸೀದಿ ಸಂದರ್ಶನ ಕಾರ್ಯಕ್ರಮ ಸೌಹಾರ್ಧತೆಗೆ ಸಾಕ್ಷಿಯಾಗಿತ್ತು.
ದಾವಣಗೆರೆ ಸುತ್ತ ಮುತ್ತಲಿನ ವಿವಿಧ ಸಮುದಾಯದ ಧರ್ಮದ ಜನರು ಮಸೀದಿಗೆ ಭೇಟಿ ನೀಡಿ ಅಲ್ಲಿ ಮಸೀದಿಯ ಆಚಾರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮಸೀದಿಯ ಕಮಿಟಿಯವರು ಸ್ವಯಂಸೇವಕರು ಬರುವವರಿಗೆ ಸ್ವಾಗತಿಸಿ, ಮಸ್ಜಿದ್‍ನ ಒಳಗಡೆ ಪ್ರಾರ್ಥನಾಲಯದಲ್ಲಿ ಇಸ್ಲಾಂ ಎಂದರೇನು, ಅಲ್ಲಾಹ್ ಎಂದರೆ ಯಾರು, ಇಸ್ಲಾಂನ ಅರ್ಥವೇನು? ಎಂಬುದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಇಸ್ಲಾಂ ಎಂದರೆ ಶಾಂತಿ, ಮುಸ್ಲಿಮ್ ಎಂದರೆ ಶರಣಾಗತಿ ಬಯಸುವವನು ಇನ್ನಿತರ ಫಲಕಗಳು ಮತ್ತು ಅಜಾನ್ ಬಗೆಗಿನ ವಿವರ ಮತ್ತು ಕುರಾನ್ ವಿವಿಧ ಅಂಶಗಳನ್ನು ಅಲ್ಲಿನ ಪ್ರದರ್ಶನ ಫಲಕಗಳಲ್ಲಿ ಪ್ರದರ್ಶಿಸುವ ಹಾಗೂ ಮಸೀದಿ ಸಂದರ್ಶನಕ್ಕೆ ಬಂದವರಿಗೆ ಆತ್ಮೀಯವಾಗಿ ಬರಮಾಡಿಕೊಂಡರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ಮಸೀದಿ ಸಂದರ್ಶನ ಒಂದು ಅತ್ಯುತ್ತಮ ನಡೆಯಾಗಿದ್ದು, ಇದರಿಂದ ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಸೌಹಾರ್ದತೆ ಭಿತ್ತಲು ಸಾಧ್ಯವಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ಎಲ್ಲಾ ಭಾಗಗಳನ್ನು ನಡೆಯಬೇಕು. ಮಹಿಳೆಯರು ಸೇರಿದಂತೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಬೇಕು ಎಂದರು.
Read also : Davanagere judegement news | ಚಾಕು ಇರಿದ ಆರೋಪಿಗೆ 2 ವರ್ಷ ಸಜೆ
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಂಜುನಾಥ್ ಕುಂದವಾಡ ಮಾತನಾಡಿ. ಇಲ್ಲಿಗೆ ಭೇಟಿ ನೀಡಿ ಇಸ್ಲಾಂ ಧರ್ಮದ ಬಗೆಗಿನ ಅರ್ಥ , ಅಲ್ಲಾಹನ ಅರ್ಥಗಳನ್ನು ತಿಳಿದು ಕೊಂಡಂತಾಗಿದೆ ಮತ್ತು ಎಲ್ಲಾ ಧರ್ಮಗಳ ಸಾರಗಳು ಒಂದೇ ಯಾವ ಧರ್ಮಗಳನ್ನು ಮೇಲು ಕೀಳಲ್ಲ, ಎಲ್ಲರೂ ಇಲ್ಲಿನ ಸಹೋದರತೆಯ ಭಾವನೆಯಿಂದ ಬಾಳಬೇಕು. ಮಸೀದಿ ಸಂದರ್ಶನ ಕಾರ್ಯಕ್ರಮವು ಒಂದು ಮಾದರಿ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿಯ ಇನ್ನೊಬ್ಬ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ಇದು ಮಾದರಿ ಕಾರ್ಯಕ್ರಮವಾಗಿ ಎಲ್ಲೆಡೆ ನಡೆಯಬೇಕು ಎಂದು ಹೇಳಿದರು.
ದಾವಣಗೆರೆ ವಿಶ್ವಮಾನವ ಮಂಟಪದ ರುದ್ರಮುನಿ ಆವರಗೆರೆ ಮಾತನಾಡಿ, ಪ್ರಪಂಚದಲ್ಲಿನ ಎಲ್ಲಾ ಧರ್ಮಗಳು ಒಂದೇ, ಎಲ್ಲಾ ಮಾನವರು ಒಂದೇ, ಹಾಗಾಗಿ ಎಲ್ಲರೂ ಸಮಾಜದಲ್ಲಿನ ಮೇಲು ಕೀಳು ತೊರೆದು ಸಹೋದರತೆಯಿಂದ ಮಾಡಬೇಕು ಎಂದು ಹೇಳಿದರು.
ಬೆಂಗಳೂರಿನಿಂದ ಮಸೀದಿ ನೋಡಲು ಆಗಮಿಸಿದ್ದ ವೈದ್ಯೆ ಡಾ. ಸ್ವಾತಿ ಮಾತನಾಡಿ, ಸಾಮರಸ್ಯ ಕೆಟ್ಟು ಹೋಗಿರುವ ಇಂದಿನ ಸಮಾಜದಲ್ಲಿ ಇದೊಂದು ಉತ್ತಮವಾದ ಕಾರ್ಯಕ್ರಮವಾಗಿದ್ದು. ರಾಜಕೀಯವಾಗಿ ಇಂದಿನ ಪರಿಸ್ಥಿತಿಯಲ್ಲಿ ಇಸ್ಲಾಂ ಎಂದರೆ ಭಯ, ದ್ವೇಷ ಮಾಡುವಂತಹದ್ದು ಎನ್ನುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದೆ. ನಾನು ಮೊದಲ ಬಾರಿಗೆ ಮಸೀದಿ ಒಳಗಡೆ ಬಂದು ಇಲ್ಲಿನ ವಾತಾವರಣವನ್ನು ಗಮನಿಸುತ್ತಿದ್ದೇನೆ ಮತ್ತು ಇಸ್ಲಾಂ ಎಂದರೆ ಶರಣಗತಿ ಶಾಂತಿ ಎಂಬ ಅರಿವು ತಿಳಿದಂತಾಗಿದೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಮಾಡಬೇಕು ಮತ್ತು ಎಲ್ಲರೂ ಇಲ್ಲಿಗೆ ಬರಬೇಕು ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ರೈತ ಸಂಘದ ಅರುಣ್ ಕುಮಾರ್ ಕುರುಡಿ, ಬಲ್ಲೂರ್ ರವಿಕುಮಾರ್, ಜಬೀನಾಖಾನಂ, ಕರಿಬಸಪ್ಪ, ಅಲ್ಲಾಭಕ್ಷ್, ಸಾಜಿದ್, ಶೋಯಬ್, ತಾರಿಕ್, ಮಸೀದಿ ಕಮಿಟಿಯ ಅಧ್ಯಕ್ಷ ಸೈಯದ್ ಮನ್ಸೂರ್, ನ್ಯಾಮೇತುಲ್ಲ, ರಫೀಕ್, ಸೈಯದ್ ನಯಾಜ್, ನೂರುಲ್ಲಾ, ಉಮರ್ ಫಾರೂಕ್ ಮೌಲಾನ್, ಸೈಯದ್, ಉಬೇಧುಲ್ಲ, ಯಾಕೂಬ್, ಆಟೋ ರಫೀಕ್ ಸೇರಿದಂತೆ ಸಾವಿರಾರು ಜನರು ಮಸೀದಿ ದರ್ಶನ ಮಾಡಿದರು.