ದಾವಣಗೆರೆ (Davanagere): ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಸಲು ಸಂಘಟಿತರಾಗಿ ಹೋರಾಡೋಣ ಎಂದು ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಕರೆ ನೀಡಿದರು.
ನಗರದ ಕೆಟಿಜೆ ನಗರದ 8 ನೇ ತಿರುವಿನಲ್ಲಿರುವ ವೇದಿಕೆಯ ಜಿಲ್ಲಾ ಕಚೇರಿ ಮುಂಭಾಗದಲ್ಲಿ ನಡೆದ 69 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜೋರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಪರಂಪರೆ ಐತಿಹಾಸಿಕ ಹಿನ್ನೆಲೆ ಇದೆ. ಇಂದಿನ ದಿನಗಳಲ್ಲಿ ಕನ್ನಡದಲ್ಲಿ ಮಾತನಾಡಲು ಹಿಂದೇಟು ಹಾಕುವಂಥ ಪರಿಸ್ಥಿತಿ ಇದ್ದು, ಇದು ತೊಲಗಬೇಕು ಎಂದು ಹೇಳಿದರು.
ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಬೆಂಗಳೂರಿನಂಥ ಮಹಾನಗರಗಳಲ್ಲಿ ಕನ್ನಡದ ಬಗ್ಗೆ ತಾತ್ಸಾರ ಮನೋಭಾವನೆ ಕಂಡು ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಅವಹೇಳನ ನಡೆಯುತ್ತಿದೆ. ಇದಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗೋಣ. ಕನ್ನಡ ನಾಡು, ಕನ್ನಡ ಭಾಷೆ ಉಳಿವಿಗೆ ಪಣ ತೊಡೋಣ ಎಂದು ಸಲಹೆ ನೀಡಿದರು.
ಬೇರೆ ಭಾಷೆಗಳಿಗಿಂತ ಕನ್ನಡ ಭಾಷೆ ತುಂಬಾನೇ ಶ್ರೀಮಂತ ಪ್ರಾಚೀನ. ಕನ್ನಡ ನುಡಿ ಆಡುವುದೇ ಒಂದು ರೀತಿಯ ಖುಷಿ. ಈ ಭಾಷೆಯಲ್ಲಿರುವಷ್ಟು ಪ್ರೌಢಿಮೆ, ಸಂಸ್ಕೃತಿ, ಮಹತ್ವ ಬೇರೆ ಯಾವ ಭಾಷೆಯಲ್ಲೂ ಸಿಗದು. ಹಾಗಾಗಿ, ಎಲ್ಲಾ ಭಾಷೆಗಳಿಗೆ ಹೋಲಿಸಿದರೆ ಕನ್ನಡಕ್ಕೆ ತನ್ನದೇ ಆದ ವೈಶಿಷ್ಟ್ಯ ಮತ್ತು ಇತಿಹಾಸ ಇದೆ. ಕನ್ನಡ ನಾಡು ಮತ್ತಷ್ಟು ಬಲಿಷ್ಠವಾಗಿಸೋಣ. ನಾಡು, ನುಡಿಗೆ ಧಕ್ಕೆ ಬಂದರೆ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ವೇದಿಕೆಯ ರಾಜ್ಯಾಧ್ಯಕ್ಷ ಮೊಹಮ್ಮದ್ ಟಾರ್ಗೆಟ್ ಅಸ್ಲಾಂ, ಯಾಕೂಬ್ ಕೊಟ್ಟೂರು, ತಾಲೂಕು ಘಟದ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹ್ಮದ್ ಮತ್ತಿತರರು ಹಾಜರಿದ್ದರು.