ದಾವಣಗೆರೆ : ಜಿಲ್ಲೆಯಲ್ಲಿ 38 ಕುಷ್ಠರೋಗ ಪ್ರಕರಣಗಳಿದ್ದು, ಕುಷ್ಠರೋಗ ನಿರ್ಮೂಲನೆಗೆ ಹಾಗೂ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆಯ ಎಲ್ಲಾ ವೈದ್ಯಾಧಿಕಾರಿಗಳು ಕ್ರಮ ವಹಿಸು ವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ ತಿಳಿಸಿದರು.
ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ -2026 ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನವರಿ 30 ರಿಂದ ಫೆಬ್ರವರಿ 13 ರವರೆಗೆ 13 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸಂಪರ್ಕ ಸಭೆ ಗಳಲ್ಲಿ, ಇಲಾಖೆಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಪೋಸ್ಟರ್ ಗಳ ಮೂಲಕ ಪ್ರಚಾರ ಮಾಡಲು ಕ್ರಮವಹಿಸಬೇಕು. 2016-17 ನೇ ಸಾಲಿನಿಂದ ಪ್ರಸಕ್ತ ಸಾಲಿನವರಿಗೆ ಗಮನಿಸಿದಲ್ಲಿ ಈ ಬಾರಿ ಶೇ. 21 ರಷ್ಟು ಕಡಿಮೆ ಪ್ರಮಾಣ ದಾಖಲಾಗಿದ್ದು, ಶೇಕಡವಾರು ಇನ್ನು ಕಡಿಮೆ ಮಾಡಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.
Read also : SC -ST ಯುವಜನರಿಗೆ ಉಚಿತ ಜಿಮ್ಫಿಟ್ನೆಸ್ ತರಬೇತಿ
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಮುರಳೀಧರ್ ಅವರು ಮಾತನಾಡಿ, ಕುಷ್ಠರೋಗವು ಬ್ಯಾಕ್ಟಿರೀಯಾದಿಂದ ಬರುವಂತಹ ಖಾಯಿಲೆ, ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ, ನಮ್ಮ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಚತೆ ಇರುವಂತೆ ನೋಡಿಕೊಳ್ಳಬೇಕು. ಈ ಖಾಯಿಲೆಯು ಚರ್ಮ ಮತ್ತು ನರ ಮಧ್ಯೆ ಇರುತ್ತದೆ, ಚರ್ಮದ ಭಾಗದಲ್ಲಿ ಸ್ಪರ್ಶ ಜ್ಞಾನ ಇರುವುದಿಲ್ಲ , ಸುಮಾರು 400 ರಿಂದ 500 ವರ್ಷ ಗಳ ಇತಿಹಾಸವಿರುವ ಹಿಂದಿನ ಖಾಯಿಲೆಯಾಗಿದ್ದು ಪ್ರಾಥಮಿಕ ಹಂತದಲ್ಲಿಯೇ ಸರಿಯಾದ ಚಿಕಿತ್ಸೆಯನ್ನು ಪಡೆದಲ್ಲಿ ಗುಣಮುಖರಾಗಬಹುದು. ಸಾಮಾನ್ಯವಾಗಿ 5 ರಿಂದ 10 ವರ್ಷಗಳ ಚಿಕಿತ್ಸೆಯ ಅಗತ್ಯತೆ ಇರುತ್ತದೆ , ಪ್ರತಿ ರೋಗಿಗೆ ಪ್ರತಿ ಮಾಹೆ ರೂ. 12000/- ಗಳನ್ನು ನೀಡಲಾಗುತ್ತದೆ. ರೋಗಿಗಳಿಗೆ ಉಚಿತ ಔಷಧಿಗಳು ಮತ್ತು ಕಿಟ್ ನೀಡಲಾಗುವುದು. ಈ ಹಿಂದೆ ಸರ್ಕಾರಿ ಕೆಲಸವನ್ನು ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಕುಷ್ಠರೋಗದ ಬಗ್ಗೆ ಗ್ರಾಮಗಳಲ್ಲಿ ಅರಿವು ಮೂಡಿಸಲು ಆಶಾ ಕಾರ್ಯಕರ್ತೆಯರಿಗೆ ತರಬೇತಿಯನ್ನು ನೀಡಲಾಗಿದೆ. ಒಬ್ಬ ಕುಷ್ಟರೋಗಿಯನ್ನು ಪತ್ತೆ ಹಚ್ಚಿದಲ್ಲಿ ಆಶಾ ಕಾರ್ಯಕರ್ತಕೆ ರೂ. 600/- ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ಪರ್ಶ ಕುಷ್ಠರೋಗ ನಿರ್ಮೂಲನೆ ಕುರಿತು ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
