ದಾವಣಗೆರೆ.ಸೆ.13. ಅನಧಿಕೃತ ಪಡಿತರ ಚೀಟಿದಾರರನ್ನು ಪತ್ತೆಹಚ್ಚಿ ಅರ್ಹ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ದಾವಣಗೆರೆಯ ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲಾ ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಮಿತಿ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 4 ಲಕ್ಷ ಪಡಿತರ ಕಾರ್ಡ್ ಗಳಿದ್ದು ಸುಮಾರು 15 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಪಡಿತರ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 729 ನ್ಯಾಯಬೆಲೆ ಅಂಗಡಿಗಳನ್ನು ಹೊಂದಿದ್ದು, ಒಳ ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಅಕ್ರಮವಾಗಿ ಹೊಂದಿರುವ ಅನರ್ಹ ಪಡಿತರ ಕಾರ್ಡುಗಳನ್ನು ಪತ್ತೆ ಹಚ್ಚುವುದರೊಂದಿಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಪಡಿತರ ಕಾರ್ಡ್ ವಿತರಿಸಲು ಕ್ರಮ ವಹಿಸುತ್ತಿದ್ದು ತಾವು ಅರ್ಹರನ್ನು ಗುರುತಿಸಲು ಸೂಚನೆ ನೀಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ತೂಕ ಮತ್ತು ಅಳತೆಯ ಗುಣಮಟ್ಟವನ್ನು ಕಾಪಾಡುವಂತೆ ಗಮನವಹಿಸಿ ಪೆಟ್ರೋಲ್ ಬಂಕ್ ಗಳಲ್ಲಿ ನಾಗರಿಕರಿಗೆ ಯಾವುದೇ ಮೋಸವಾಗದಂತೆ ನಿಗಾವಹಿಸಬೇಕು, ಹಾಗೆಯೇ ಅಂಗಡಿಗಳಲ್ಲಿ ತೂಕದ ಮೆಷಿನ್ ಗಳನ್ನು ತಪಾಸಣೆ ಮಾಡಿ ಸತ್ಯಾಪಣ ಮತ್ತು ಮುದ್ರೆಯ ಮಾಡಿ ಪ್ರಮಾಣಪತ್ರ ವಿತರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಉಪ ನಿರ್ದೇಶಕರಾದ ಮಧು ಸೂದನ್ ಹಾಗೂ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ವೆಂಕಟೇಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.