ಹರಿಹರ : ರಾಜಕೀಯವಾಗಿ ಪಂಚಮಸಾಲಿ ಸಮುದಾಯದ ಮುಖಂಡರಿಗೆ ಅನ್ಯಾಯವಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಆರೋಪ ಮಾಡಿದ್ದಾರೆ.
ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳರು ಮಾಜಿ ಕೇಂದ್ರ ಸಚಿವ ದಿ.ಅನಂತ ಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಜೊತೆ ಸೈಕಲ್ ತುಳಿದು ರಾಜ್ಯದಲ್ಲಿ ಪಕ್ಷ ಕಟ್ಟಿದ್ದರೆ, ಆದರೂ ಅವರನ್ನು ಪಂಚಮಸಾಲಿ ಸಮುದಾಯದವರು ಎಂಬ ಕಾರಣದಿಂದ ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ.
ಸೈಕಲ್ ಮೇಲೆ ರಾಜ್ಯ ಸುತ್ತಿ ಬಿಜೆಪಿ ಪಕ್ಷ ಕಟ್ಟಿದ ಯತ್ನಾಳರನ್ನು ಗುರುತಿಸಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸ್ತಾನ ನೀಡಲಾಗಿತ್ತು, 20 ವರ್ಷಗಳ ಹಿಂದೆಯೆ ಕೇಂದ್ರ ನಾಯಕರಾಗಿದ್ದರು, ಈಗಲೂ ಅವರು ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿರಬೇಕಿತ್ತು, ಅಂತಹ ಯತ್ನಾಳರನ್ನು ಒಂದು ತಾಲ್ಲೂಕು ಮಟ್ಟಕ್ಕೆ ಸೀಮಿತವಾಗಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ಅರ್ಹತೆ ಇದ್ದರೂ ಯಡಿಯೂರಪ್ಪರ ನಂತರದ ಅವಧಿಯಲ್ಲಿ ಮುಖ್ಯಮಂತ್ರಿಯಾಗುವುದು, ಇತ್ತೀಚಿಗೆ ವಿರೋಧ ಪಕ್ಷದ ನಾಯಕನಾಗುವ, ಪಕ್ಷದ ರಾಜ್ಯಾಧ್ಯಕ್ಷನಾಗುವ ಅವಕಾಶ ತಪ್ಪಿಸಲಾಯಿತು. ಅವರು ಪಂಚಮಸಾಲಿ ಸಮುದಾಯದವರೆಂದು ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.