ದಾವಣಗೆರೆ: ರಾಜ್ಯದಲ್ಲಿ ವಿಜೃಂಭಿಸುತ್ತಿರುವ ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳ ಭರಾಟೆಯಲ್ಲಿ ಕನ್ನಡ ಭಾಷೆ ನಶಿಸುತ್ತಿದ್ದು, ಕನ್ನಡ ಭಾಷೆ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರು,ಕಾದಂಬರಿಕಾರರಾದ ನಾಡೋಜ ಡಾ.. ಕುಂ.ವೀರಭದ್ರಪ್ಪ ಕರೆ ನೀಡಿದರು.
ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಸೋಮವಾರ ಕನ್ನಡ ಯುವಶಕ್ತಿ ಕೇಂದ್ರದ ವತಿಯಿಂದ ಆಂಜನೇಯ ದೇವಸ್ಥಾನದ ವೃತ್ತದಲ್ಲಿ ಆಯೋಜಿಸಿದ್ದ “ನಮ್ಮೂರ ಕನ್ನಡ ಸುಗ್ಗಿ ಸಂಭ್ರಮ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆ ರಾಜ್ಯಗಳ ಜನರಲ್ಲಿ ಇರುವ ಮಾತೃಭಾಷೆಯ ಅಭಿಮಾನ ನಮ್ಮ ರಾಜ್ಯದ ಜನರಲ್ಲೂ ಬರಬೇಕು. ಸರ್ಕಾರಿ ಕಚೇರಿ, ಖಾಸಗಿ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಅನುಷ್ಠಾನಗೊಳ್ಳಬೇಕು. ಹೊರ ರಾಜ್ಯಗಳಿಂದ ಬರುವ ಜನರು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಮಾತನಾಡಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಯಲಿದೆ ಎಂದರು.
ಭಾರತ ಸರ್ವ ಜನಾಂಗದ ಶಾಂತಿಯ ತೋಟ, ಪ್ರತಿ ಭಾಷೆ ಕಲೆ ಸಂಸ್ಕೃತಿ ಸಾಹಿತ್ಯವನ್ನು ದೇಶದ ಉದ್ದಗಲಕ್ಕೂ ವ್ಯಾಪಿಸಿದೆ, ಹಾಗೂ ಕನ್ನಡ ನಾಡು ನುಡಿ ಸಂಸ್ಕೃತಿ ಭಾರತ ಹಾಗೂ ವಿಶ್ವದಲ್ಲಿ ಮಾದರಿಯಾಗಿದೆ ಆದ್ದರಿಂದ ಪ್ರತಿ ಕನ್ನಡಿಗನು ಸಹ ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಪ್ರತಿ ಮಕ್ಕಳ ಪೋಷಕರು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಶಿಕ್ಷಣ ಕೊಡಿಸುವುದರೊಂದಿಗೆ ಕನ್ನಡದ ಅಸ್ಮಿತೆಯನ್ನು ಉಳಿಸಬೇಕು ಮತ್ತು ಸರ್ಕಾರ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚದೆ ಕನ್ನಡವನ್ನು ಉಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕನ್ನಡ ಬಿಟ್ಟು ಆಂಗ್ಲ ಭಾಷೆ ವ್ಯಾಮೋಹಕ್ಕೆ ಬಿದ್ದರೆ ಮಕ್ಕಳು ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುವುದು ತಪ್ಪುವುದಿಲ್ಲ, ಈ ಹಿಂದಿನ ದಿನಗಳಲ್ಲಿ ದೇಶದಲ್ಲಿ 712 ಅನಾಥಾಶ್ರಮಗಳಿದ್ದವು ಆದರೆ ಪ್ರಸ್ತುತ 22,ಸಾವಿರ ಅನಾಥಾಶ್ರಮಗಳು ತಲೆ ಎತ್ತುವೆ ಇಷ್ಟಕ್ಕೆಲ್ಲಾ ಕಾರಣ ಪೋಷಕರ ಆಂಗ್ಲ ಮಾಧ್ಯಮದ ವ್ಯಾಮೋಹ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ದೇಶದ ಯಾವುದೇ ರಾಜ್ಯಗಳಿಗೆ ಹೋದರೆ ಅಲ್ಲಿನ ಜನರು ನಮ್ಮೊಂದಿಗೆ ಆ ರಾಜ್ಯಗಳ ಮಾತೃಭಾಷೆಯಲ್ಲೇ ಮಾತನಾಡುತ್ತಾರೆ. ಅದೇ ರೀತಿ, ನಮ್ಮ ರಾಜ್ಯಕ್ಕೆ ಹೊರ ರಾಜ್ಯಗಳಿಂದ ಯಾರೇ ಬಂದರೂ ನಮ್ಮ ಮಾತೃಭಾಷೆಯಲ್ಲೇ ಮಾತನಾಡಿದಾಗ ಮಾತ್ರ ಕನ್ನಡ ಭಾಷೆಯ ಅಸ್ತಿತ್ವ ಉಳಿಯಲಿದೆ ಎಂದು ಅಭಿಪ್ರಾಯ ಪಟ್ಟರು.
ನಾವು ನಮ್ಮ ರಾಜ್ಯ ಬಿಟ್ಟು ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ಸ್ಥಳೀಯ ಭಾಷೆಯಲ್ಲೇ ಮಾತನಾಡುವ ಅವರ ಮಾತೃಭಾಷೆಯ ಗಟ್ಟಿತನವನ್ನು ತೋರಿಸುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಆ ಗಟ್ಟಿತನ ಇಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡದ ಜಿಲ್ಲೆಯಿದ್ದರೆ ಅದು ನಮ್ಮ ದಾವಣಗೆರೆ ಜಿಲ್ಲೆಯಾಗಿದೆ ಎಂದರು.
ಕನ್ನಡ ಉಳಿದಿದೆ, ಬೆಳೆದಿದೆ ಎಂದರೆ ಅದು ಮಧ್ಯೆ ಕರ್ನಾಟಕದ ದಾವಣಗೆರೆಯಲ್ಲಿ ಮಾತ್ರ. ನಾನು ಕೂಡ ಕನ್ನಡ ಹಬ್ಬದಲ್ಲಿ ಭಾಗವಹಿಸಬೇಕೆಂಬ ಏಕೈಕ ಉದ್ದೇಶದಿಂದ ಬೆಳಗಾವಿಯಲ್ಲಿ ಅಧಿವೇನವಿದ್ದರೂ ನಾನಿಲ್ಲಿ ಬಂದು ಭಾಗವಹಿಸಿದ್ದೇನೆ. ಇಂತಹ ಗಟ್ಟಿತನವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕೆಂದರು.
ನಾಡು-ನುಡಿಯ ವಿಚಾರ ಬಂದಾಗ ನಮ್ಮನ್ನು ನಾವು ಅವಲೋಕಿಸಬೇಕು. ಕನ್ನಡ ಮತ್ತು ಸಂಸ್ಕೃತಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಆಕ್ಷೇಪ ಎಲ್ಲಿಯೂ ಕೇಳಿ ಬರದಂತೆ ನಿಭಾಯಿಸಬೇಕು. ಕನ್ನಡವೇ ಸರ್ವಸ್ವವಾಗಿ ಸ್ವೀಕರಿಸಿದ ನಾಡಿನಲ್ಲಿ ಪರಭಾಷೆಗಳ ಸ್ಥಾಪನೆಗೆ ಅವಕಾಶ ನೀಡಬಾರದು. ನೆರೆಯ ರಾಜ್ಯಗಳ ಜನರು ನಮ್ಮ ರಾಜ್ಯಕ್ಕೆ ಬಂದಾಗ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು. ಆ ಸ್ವಾಭಿಮಾನ ಬೆಳೆಸಿಕೊಳ್ಳಬೇಕೆಂದರು.
ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿಯಿಟ್ಟುಕೊಂಡವರು ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಭಾಷೆಗಳು ಎಷ್ಟೇ ನಮ್ಮ ಮೇಲೆ ಪ್ರಭಾವ ಬೀರಿದರೂ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ಅನಿವಾರ್ಯ ಎಂಬ ಭಾವನೆಯಲ್ಲಿ ಭಾಷೆಯನ್ನು ಬಳಸಿ ಬೆಳೆಸಿದಾಗ ಖಂಡಿತ ಕನ್ನಡ ಉಳಿಯುತ್ತದೆ’ ಎಂದು ಅವರು ಹೇಳಿದರು.
ಮಾಯಕೊಂಡ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅನುದಾನ ತರುವ ಮೂಲಕ ಹಂತ ಹಂತವಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಗ್ರಾಮಸ್ಥರು ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಕೇಳಿದ್ದು, ಮುಂದಿನ ದಿನಗಳಲ್ಲಿ ಅನುದಾನ ನೀಡುವ ಮೂಲಕ ಕನ್ನಡ ಬನವನ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ ವಾಮದೇವಪ್ಪ ಮತ್ತು ಡಾ. ಎಂ ಕೆ. ರಮೇಶ್, ಎಡಿಎ ಡಿಎಂ ಶ್ರೀಧರ ಮೂರ್ತಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಕಮ್ಮಲಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಾಮದೇವಪ್ಪ ,ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷರಾದ ಮಂಜುನಾಥ್ ಸಂಡೂರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಿವಮ್ಮ ಮಲ್ಲಿಕಾರ್ಜುನ್ , ಪಂಚಾಯತ್ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
