ದಾವಣಗೆರೆ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಹದಡಿ ರಸ್ತೆಯಲ್ಲಿರುವ ಎಸ್.ಎಸ್. ಕಲ್ಯಾಣ ಮಂದಿರದ ಬಳಿ ಮ್ಯಾನ್‌ಹೋಲ್ ಒಂದು ಕಳೆದ ಕೆಲವು ದಿನಗಳಿಂದ ಉಕ್ಕಿ ಹರಿಯುತ್ತಿದ್ದು, ರಸ್ತೆಯಲ್ಲೆಲ್ಲಾ ಕೊಳಚೆ ನೀರು ಹರಡಿಕೊಂಡಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಯಾಣ ಮಂದಿರದಲ್ಲಿ ನಡೆಯುವ ಸಮಾರಂಭಗಳ ನಂತರ ಉಳಿದ ಆಹಾರ ಪದಾರ್ಥಗಳನ್ನು ನೇರವಾಗಿ ಒಳಚರಂಡಿಗೆ ಬಿಡುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಘನತ್ಯಾಜ್ಯ ಮತ್ತು ಆಹಾರದ ಅವಶೇಷಗಳಿಂದ ಮ್ಯಾನ್‌ಹೋಲ್ ಕಟ್ಟಿಕೊಂಡಿದ್ದು, ಗಬ್ಬು ವಾಸನೆ ಬೀರುತ್ತಿದೆ. ಇದು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಕೂಡ ಹುಟ್ಟುಹಾಕಿದೆ.
”ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಜನರು ಸಂಚರಿಸುತ್ತಾರೆ. ರಸ್ತೆಯ ತುಂಬಾ ಕೊಳಚೆ ನೀರು ನಿಂತಿದ್ದು, ವಾಹನಗಳು ಚಲಿಸುವಾಗ ಪಾದಚಾರಿಗಳ ಮೇಲೆ ಈ ಗಲೀಜು ನೀರು ಸಿಡಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು,” ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಪಾಲಿಕೆ ಅಧಿಕಾರಿಗಳು ಮತ್ತು ಕಲ್ಯಾಣ ಮಂದಿರದ ಮಾಲೀಕರು ಈ ಬಗ್ಗೆ ತುರ್ತು ಕ್ರಮ ಕೈಗೊಂಡು, ಮ್ಯಾನ್‌ಹೋಲ್ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಶಾಮನೂರು ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂದಿರ ಸೇರಿದಂತೆ ನಗರದ ಎಲ್ಲ ಕಲ್ಯಾಣ ಮಂದಿರಗಳಲ್ಲಿ ಕೂಡ ಕಾರ್ಯಕ್ರಮಗಳ ನಂತರ ಉಳಿದ ಆಹಾರ ಪದಾರ್ಥಗಳನ್ನು ಇದೇ ರೀತಿ ಒಳಚರಂಡಿಗೆ ಬಿಡುತ್ತಿರುವುದು ಗಂಭೀರ ಸಮಸ್ಯೆಗೆ ಕಾರಣವಾಗುವ ಆತಂಕ ಎದುರಾಗಿದೆ.
