ದಾವಣಗೆರೆ ಮಾ.15
ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಮತ್ತು ಸರಾಸರಿ ಲಿಂಗಾನುಪಾತವನ್ನು ಕಾಪಾಡಲು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯು ಜಾರಿಯಲ್ಲಿದ್ದು ಕಾಯಿದೆಯ ಮಾರ್ಗಸೂಚಿ ಉಲ್ಲಂಘನೆ ಮಾಡುವ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ನಿರ್ಣಯಿಸಿದೆ ಎಂದು ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ ತಿಳಿಸಿದರು.
ಶುಕ್ರವಾರ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಿಸಿ ಮತ್ತು ಪಿಎನ್‍ಡಿಟಿ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 116 ಸ್ಕ್ಯಾನಿಂಗ್, ಆಲ್ಟ್ರಾಸೌಂಡ್ಸ್ ಸೆಂಟರ್‍ಗಳಿಗೆ ಅನುಮತಿ ನೀಡಿದ್ದು ಇದರಲ್ಲಿ 16 ಸೆಂಟರ್‍ಗಳು ಸ್ಥಗಿತಗೊಂಡಿದ್ದು 100 ಸೆಂಟರ್‍ಗಳು ಜಿಲ್ಲೆಯಲ್ಲಿ ಚಾಲ್ತಿಯಲ್ಲಿವೆ. ಇದರಲ್ಲಿ 93 ಖಾಸಗಿ ಮತ್ತು ಪಶು ಸಂಗೋಪನಾ ಇಲಾಖೆ 2 ಸೇರಿ 7 ಸರ್ಕಾರಿ ಸೆಂಟರ್‍ಗಳು ಇವೆ. ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ರೆಡಿಯೋಲಾಜಿಸ್ಟ್, ಕಾರ್ಡಿಯಾಲಾಜಿಸ್ಟ್, ಪ್ರಸೂತಿ ತಜ್ಞರಾಗಿದ್ದಲ್ಲಿ 6 ತಿಂಗಳ ತರಬೇತಿ ಹೊಂದಿರುವುದು ಕಡ್ಡಾಯವಾಗಿದ್ದು ಇವರು ಕೆ.ಪಿ.ಎಂ.ಇ ಕಾಯ್ದೆಯಡಿ ನೊಂದಣಿಯಾಗಿರಬೇಕು.
ರೆಫರಲ್ ಕಡ್ಡಾಯ; ಸ್ಕ್ಯಾನಿಂಗ್ ಮಾಡಲು ಕೇಂದ್ರಗಳಲ್ಲಿ ತಪಾಸಣೆ ಮಾಡಿದ ವೈದ್ಯರ ಶಿಫಾರಸು ಕಡ್ಡಾಯವಾಗಿ ಇಟ್ಟುಕೊಂಡು ಸ್ಕ್ಯಾನಿಂಗ್ ಮಾಡಿದವರ ಸಂಪೂರ್ಣ ವಿವರ ಇರಬೇಕು. ಸ್ಕ್ಯಾನಿಂಗ್ ಕೇಂದ್ರಗಳಿಗೆ ಅನಿರೀಕ್ಷಿತವಾಗಿ ಭೇಟಿ ಮಾಡಿದ ವೇಳೆ ಮಾರ್ಗಸೂಚಿ ಪಾಲನೆ ಮಾಡದ 14 ಕೇಂದ್ರಗಳಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದರು.
ನ್ಯೂನ್ಯತೆಗಳು ಕಂಡು ಬಂದ ಆಸ್ಪತ್ರೆಗಳ ವಿವರ
ಡಾ; ಮಂಜುನಾಥ ಆಲೂರು, ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಹಾಸ್ಪಿಟಲ್, ಡಾ; ಕೆ.ಸಿ.ನಟರಾಜ, ಕೆ.ಸಿ ಮೆಮೋರಿಯಲ್ ಹಾಸ್ಪಿಟಲ್, ಡಾ; ವಿಜಯಕುಮಾರ್ ಎಸ್. ಶಿವಲೀಲಾ ಸ್ಕ್ಯಾನ್ ಸೆಂಟರ್, ಡಾ; ರಾಜಶೇಖರ್ ಜಿ.ಎಂ, ಸೌಂಡ್ ಹೆಲ್ತ್ ಡಯಾಗ್ನೋಸ್ಟಿಕ್ ಅಲ್ಟ್ರಾಸೌಂಡ್ ಕ್ಲಿನಿಕ್, ಡಾ; ಎಂ.ಶಿವಕುಮಾರ್, ಆಶ್ರಯ ಹಾಸ್ಪಿಟಲ್, ಡಾ; ಅಭಿಜಿತ್ ಎಸ್.ಎಂ. ಆಶ್ರಯ ಡಯಾಗ್ನೋಸ್ಟಿಕ್, ಡಾ; ರವಿಕುಮಾರ್ ಟಿ.ಜಿ. ಆರೈಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಡಾ; ಬಿ.ಎಸ್.ಶ್ರೀನಿವಾಸನ್, ಅನುಗ್ರಹ ಹಾಸ್ಪಿಟಲ್, ಡಾ; ಅಶ್ವಿನ್ ಕುಮಾರ್ ಪಾಟೀಲ್, ಕೃಪಾನಂದ ಡಯಾಗ್ನೋಸ್ಟಿಕ್, ಡಾ; ಗುರುಪ್ರಸಾದ್ ಎಸ್.ಪೂಜಾರ್, ರಿನ್ಯೂ ಹೆಲ್ತ್‍ಕೇರ್, ಡಾ; ಅರುಣ್ ಕೆ.ಎಂ, ತಾರು ಮಕ್ಕಳ ಹೃದಯ ಕೇಂದ್ರ, ವೈದ್ಯಕೀಯ ಅಧೀಕ್ಷಕರು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ದಾವಣಗೆರೆ, ಜನನಿ ನರ್ಸಿಂಗ್ ಹೋಂ, ಹರಿಹರ, ಶ್ರೇಯಾ ಹಾಸ್ಪಿಟಲ್, ಹರಿಹರ ಇವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿ ಮಾರ್ಗಸೂಚಿ ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾಹಿತಿ ಪ್ರದರ್ಶನಕ್ಕೆ ಸೂಚನೆ
ಸ್ಯ್ಕಾನಿಂಗ್ ಹಾಗೂ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡುವುದಿಲ್ಲ, ಭ್ರೂಣಲಿಂಗ ಪತ್ತೆ ನಿಷೇಧ ಎಂಬ ಬಗ್ಗೆ ಸಾರ್ವಜನಿಕರಿಗೆ ಕಾಣುವ ಸ್ಥಳದಲ್ಲಿ ಪ್ರದರ್ಶನ ಮಾಡಬೇಕು ಮತ್ತು ಸ್ಕ್ಯಾನಿಂಗ್‍ಗೆ ಬರುವಾಗ ಯಾವ ಯಾವ ದಾಖಲೆಗಳನ್ನು ಇಟ್ಟುಕೊಂಡಿರಬೇಕೆಂದು ಹಾಗೂ ದರದ ಮಾಹಿತಿಯ ವಿವರ ಪ್ರದರ್ಶನ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಸಮಿತಿ ನಿರ್ಣಹಿಸಿತು.
ಹೊಸದಾಗಿ ನೊಂದಣಿಗೆ ಸಲ್ಲಿಸಿದ 5, ನವೀಕರಣಕ್ಕಾಗಿ ಸಲ್ಲಿಸಿದ 9 ಮತ್ತು ಹಳೆ ಉಪಕರಣ ಮಾರಾಟ, ಖರೀದಿ, ಸ್ಥಳಾಂತರಕ್ಕೆ ಸಲ್ಲಿಸಿದ 7 ನೊಂದಣಿಗೆ ಸಮಿತಿಯು ಅನುಮೋದನೆ ನೀಡಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ.ಎಸ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಪಿ.ಸಿ.ಪಿಎನ್‍ಡಿಟಿ ನೋಡಲ್ ಅಧಿಕಾರಿ ಡಾ; ರುದ್ರಸ್ವಾಮಿ, ಸಮಿತಿ ಸದಸ್ಯರಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಪ್ರಸೂತಿ ತಜ್ಷೆ ಡಾ; ಎಸ್.ಜಿ.ಭಾರತಿ, ಚಿಗಟೇರಿ ಆಸ್ಪತ್ರೆ ರೇಡಿಯಾಲಾಜಿಸ್ಟ್ ಡಾ; ಸುಮಿತ್ರ.ಎಲ್, ಹಿಮೋಪೋಲಿಯೋ ಸೊಸೈಟಿ ಡಾ; ಮೀರಾ ಹನಗವಾಡಿ, ಎಂ.ಜಿ.ಶ್ರೀಕಾಂತ್ ಉಪಸ್ಥಿತರಿದ್ದರು.