ದಾವಣಗೆರೆ : ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಕೊಲೆ ಮಾಡಿದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಇಲ್ಲಿನ ಕಬ್ಬರೂ ಬಸಪ್ಪನಗರದ ಎಂ.ರಾಕೇಶ್ (27), ಪ್ರಶಾಂತ್ ಪತ್ನಿ ರೇಣುಕಾ (26) ಶಿಕ್ಷೆಗೊಳಗಾದ ಆರೋಪಿಗಳು.
ಪ್ರಶಾಂತ್ (24) ಎಂಬುವರನ್ನು 2023ರ ಫೆ.28ರಂದು ಕೊಲೆ ಮಾಡಿದ್ದರು. ಮೊದಲ ಅಪರಾಧಿಗೆ 20,000 ರೂ. ಮತ್ರು 2ನೇ ಅಪರಾಧಿಗೆ 10,000 ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎಂ.ಎಚ್. ಅಣ್ಣಯ್ಯ-ನವರ್ ಆದೇಶ ಹೊರಡಿಸಿದ್ದಾರೆ.
ರೇಣುಕಾ ಮತ್ತು ಪ್ರಶಾಂತ್ 7 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಪ್ರಶಾಂತ್ ಸ್ನೇಹಿತ ರಾಕೇಶ್ ಜೊತೆಗೆ ರೇಣುಕಾಗೆ ಅನೈತಿಕ ಸಂಬಂಧವಿತ್ತು. ಈ ವಿಚಾರವಾಗಿ ದಂಪತಿಯ ನಡುವೆ ಆಗಾಗ ಗಲಾಟೆ ನಡೆದಿತ್ತು. ಕೊಲೆ ಮಾಡುವ ಉದ್ದೇಶದಿಂದ ಕೋಳಿ ಕೊಡಿಸುವ ನೆಪದಲ್ಲಿ ಪ್ರಶಾಂತ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ರಾಕೇಶ್, ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದನು.
ಪ್ರಕರಣ ದಾಖಲಿಸಿಕೊಂಡ ಆರ್‌ಎಂಸಿ ಠಾಣೆಯ ಪೊಲೀಸರು ಸಿಪಿಐ ಎಲ್. ರಾಜಶೇಖರ್ ನೇತೃತ್ವದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳ ವಿರುದ್ಧ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಕೀಲ ಕೆ.ಎಸ್.ಸತೀಶ್ ವಾದ ಮಂಡಿಸಿದ್ದರು.