ದಾವಣಗೆರೆ: ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಸಲು ಟೆಂಡರ್ ಪಡೆದ ಗುತ್ತಿಗೆದಾರ ಆಹಾರ ಸಾಮಾಗ್ರಿ ಸರಬರಾಜು ಮಾಡದೆ, ಮನಸಿಗೆ ಬಂದ ದಿನಸಿ ಅಂಗಡಿಗಳಲ್ಲಿ ಖರೀದಿಸುವಂತೆ ವಾರ್ಡನ್ ಗಳಿಗೆ ಸೂಚಿಸಿ ಸರ್ಕಾರಕ್ಕೆ ಮೋಸ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಪಂ ಇಒ,ಜಿಪಂ ಉಪಕಾರ್ಯದರ್ಶಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ತಾಲೂಕು ಪಂಚಾಯತ್ ವತಿಯಿಂದ ಮಾಯಕೊಂಡ ಕ್ಷೇತ್ರದ 2025 -26 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತಾಲೂಕು ಮಟ್ಟದ 2 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಡಿ ನಡೆಯುತ್ತಿರುವ ವಿದ್ಯಾರ್ಥಿಗಳ ನಿಲಯಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಪ್ರತಿವರ್ಷ ಸರ್ಕಾರ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುತ್ತಿದೆ. ಆದರೆ ಇಲ್ಲಿ ಟೆಂಡರ್ ಪಡೆದ ಗುತ್ತಿಗೆದಾರ ಸರ್ಕಾರದ ನಿಯಮ ಪ್ರಕಾರ ತಾನು ಆಹಾರ ಸಾಮಾಗ್ರಿಗಳನ್ನು ಖರೀದಿಸಿ ಪೂರೈಸದೆ ಹಾಸ್ಟೆಲ್ ವಾರ್ಡನ್ ಗಳಿಗೆ ನಿಮಗೆ ಇಷ್ಟ ಬಂದ ದಿನಸಿ ಅಂಗಡಿಗಳಲ್ಲಿ ಖರೀದಿಸಿ ತಿಂಗಳಿಗೊಮೆ ನಮಗೆ ಬಿಲ್ ಕೊಡಿ ಎಂದು ಸೂಚಿಸುತ್ತಾರೆ.
ವಾರ್ಡನ್ ಗಳು ತಮಗೆ ಇಷ್ಟ ಬಂದ ದಿನಸಿ ಅಂಗಡಿಗಳಲ್ಲಿ ಅಲ್ಪಸ್ವಲ್ಪ ಸಾಮಾಗ್ರಿ ಖರೀದಿಸಿ ತಿಂಗಳಿಗೊಮ್ಮೆ ಗುತ್ತಿಗೆದಾರನಿಗೆ ಬಿಲ್ ಕೊಟ್ಟ ಮೇಲೆ ಅವರು ತಾಲೂಕು ಅಧಿಕಾರಿಗಳಿಂದ ಬಿಲ್ ಪಾಸ್ ಮಾಡಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ. ಇದರಲ್ಲಿ ಹಾಸ್ಟೆಲ್ ವಾರ್ಡನ್ ಗಳು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ದೂರುಗಳು ಇವೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ತಾಪಂ ಇಒ ರಾಮಭೋವಿ ಮತ್ತು ಜಿಪಂ ಉಪಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶಗಳ ಬಡವರು, ಕೂಲಿ ಕಾರ್ಮಿಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ಸರ್ಕಾರಿ ಹಾಸ್ಟೆಲ್ ಗಳಿಗೆ ಕಳುಹಿಸುತ್ತಾರೆ. ಆದರೆ ಹಾಸ್ಟೆಲ್ ಗಳಲ್ಲಿ ಮೆನು ಪ್ರಕಾರ ಊಟ ಕೊಡುತ್ತಿಲ್ಲ, ಕಳಪೆ ಆಹಾರ ಕೊಡುತ್ತಾರೆ ಎಂಬ ಆರೋಪಗಳೇ ಹೆಚ್ಚು ಕೇಳಿ ಬರುತ್ತಿವೆ. ಹಾಸ್ಟೆಲ್ ಮಕ್ಕಳಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಹಾಸ್ಟೆಲ್ ವಾರ್ಡನ್ ಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಗುತ್ತಿಗೆದಾರ ಸೂಚಿಸಿದ ದಿನಸಿ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳನ್ನು ಖರೀದಿಸಿ ಬಿಲ್ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ.
ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮೊಟ್ಟೆ ವಿತರಣೆಯಲ್ಲೂ ಲೋಪ: ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ವಾರದಲ್ಲಿ ಆರು ದಿನ ಮೊಟ್ಟೆ ಕೊಡಬೇಕು. ಆದರೆ ಎರಡ್ಮೂರು ದಿನ ಮಾತ್ರ ಮೊಟ್ಟೆ ಕೊಡಲಾಗುತ್ತಿದೆ ಎಂಬ ದೂರುಗಳು ಇವೆ. ಅಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಪ್ರಮಾಣದಲ್ಲಿದ್ದರೂ ಪೂರ್ಣ ಪ್ರಮಾಣದ ಹಾಜರಾತಿ ತೋರಿಸಿ ಬಿಲ್ ಮಾಡಲಾಗುತ್ತಿದೆ ಎಂಬ ದೂರುಗಳು ಇವೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆಯೂ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಗ್ರಾಮೀಣ ಜನರಿಗೆ ಸಿಗುತ್ತಿಲ್ಲ ಜೆಜೆಎಂ ನೀರು: ಗ್ರಾಮೀಣ ಪ್ರದೇಶಗಳಲ್ಲಿ ಜೆಜೆಎಂ ಯೋಜನೆಯಡಿ ಪೂರೈಸುವ ನೀರು ಒಂದು ಹನಿ ಬರುತ್ತಿಲ್ಲ ಎಂದು ದೂರುಗಳು ಆಂಜನೇಯನ ಬಾಲ ಬೆಳೆದಂತೆ ಬೆಳೆಯುತ್ತಿವೆ. ಇದಕ್ಕೆಲ್ಲ ಕಳಪೆ ಕಾಮಗಾರಿಯೇ ಕಾರಣ. ಜೆಜೆಎಂ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಗ್ರಾಪಂ ಪಿಡಿಒಗಳು ಎನ್ ಒಸಿ ನೀಡಿ ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪವಿದೆ. ಮೇಲಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ.ಎಸ್ ಬಸವಂತಪ್ಪ ನವರು ತಮ್ಮ ಮತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಿದರು.
ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳು, ನೀರು,ಬೆಳಕು,ರಸ್ತೆ ಸೇರಿದಂತೆ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದ ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಿದ್ದು, ಮಕ್ಕಳ ಶಿಕ್ಷಣ ,ಆರೋಗ್ಯಕ್ಕೆ ಹೆಚ್ಚು ಒತ್ತು, ವಸತಿಯುತ ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವುದು, ಕರ್ತವ್ಯಲೋಪ ಕಂಡು ಬಂದ ಅಧಿಕಾರಿಗಳ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತಾ ಹೊಸ ಗೌಡರ್, ತಹಸೀಲ್ದಾರ್ ಎಂ. ಬಿ. ಅಶ್ವತ್ಥ್, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ರಾಮಭೋವಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
