ದಾವಣಗೆರೆ : ಮಾಟ-ಮಂತ್ರದ ಹೆಸರಿನಲ್ಲಿ ನಂಬಿಸಿ ಬಂಗಾರ ದೋಚಿ, ಬರೋಬ್ಬರಿ ಮೂರು ದಶಕಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಎಲ್‌ಪಿ ಆರ್ ಪ್ರಕರಣದ ಆರೋಪಿಯನ್ನು ಹರಿಹರ ಗ್ರಾಮಾಂತರ ಪೊಲೀಸರು ಅಂತಿಮವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ: 1993 ರ ಅಕ್ಟೋಬರ್ 1 ರಂದು ಹರಿಹರದ ಬಜಾರ್ ಮೊಹಲ್ಲಾದ ಅಬ್ದೂಲ್ ಜಬ್ಬಾರ್ ಎಂಬುವವರ ಮನೆಗೆ ಬಂದಿದ್ದ ಆರೋಪಿ ಅಕ್ಬರ್ ಬಿನ್ ಖಾಸಿಂ ಸಾಬ್, ತನಗೆ ದೈವದ ಶಕ್ತಿ ಇದೆ ಎಂದು ನಂಬಿಸಿದ್ದನು. “ನಿಮ್ಮ ಮನೆಯಲ್ಲಿ ಪೂಜೆ ಮಾಡಿದರೆ ಕಷ್ಟಗಳು ದೂರಾಗುತ್ತವೆ, ಒಡವೆಗಳನ್ನು ಪೆಟ್ಟಿಗೆಯಲ್ಲಿಟ್ಟು ಪೂಜಿಸಿದರೆ ಅವು ಡಬಲ್ ಆಗುತ್ತವೆ” ಎಂದು ನಂಬಿಸಿ, ದೂರುದಾರರ ಮತ್ತು ಅವರ ಪತ್ನಿಯ ಮೈಮೇಲಿದ್ದ ಸುಮಾರು 7 ಗ್ರಾಂ ಚಿನ್ನಾಭರಣಗಳನ್ನು ಪೆಟ್ಟಿಗೆಯಲ್ಲಿ ಹಾಕಿಸಿದ್ದನು. ಬಳಿಕ ಕುಡಿಯಲು ನೀರು ತರಲು ಕಳುಹಿಸಿ, ಪೆಟ್ಟಿಗೆಯೊಂದಿಗೆ ಪರಾರಿಯಾಗಿದ್ದನು.
ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಅಂದಿನ ಪೊಲೀಸರು ಈತನನ್ನು ದಸ್ತಗಿರಿ ಮಾಡಿ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಣೆ ಪಟ್ಟಿ ಸಲ್ಲಿಸಿದ್ದರು. ಆದರೆ, 1995 ರಿಂದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದನು. ಇದರಿಂದಾಗಿ 1997 ರಲ್ಲಿ ನ್ಯಾಯಾಲಯವು ಈತನನ್ನು ಎಲ್‌ಪಿಆರ್ ಆರೋಪಿ ಎಂದು ಘೋಷಿಸಿತ್ತು.
ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅಕ್ಬರ್ ಬೆಂಗಳೂರು, ಹೊನ್ನಾಳಿ, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದನು. ಇತ್ತೀಚೆಗೆ ಹರಿಹರಕ್ಕೆ ವಾಪಸ್ ಬಂದಿದ್ದ ಖಚಿತ ಮಾಹಿತಿ ಮೇರೆಗೆ, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶ್ರೀಮತಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಜನವರಿ 28, 2026 ರಂದು ಈತನನ್ನು ಬಂಧಿಸಿದೆ.
ಕಾರ್ಯಾಚರಣೆ ತಂಡ: ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ಬಿ.ಎಸ್. ಬಸವರಾಜ ಮತ್ತು ಸಿಪಿಐ ಸುರೇಶ ಸಗರಿ ನೇತೃತ್ವದಲ್ಲಿ, ಪಿಎಸ್‌ಐಗಳಾದ ಯುವರಾಜ ಕಂಬಳಿ, ಮಂಜುಳಾ ಡಿ ಮತ್ತು ಸಿಬ್ಬಂದಿಗಳಾದ ರಾಜಶೇಖರಯ್ಯ, ಪ್ರಸನ್ನಕಾಂತ ಹಾಗೂ ಷಣ್ಮುಖಪ್ಪ ಅವರನ್ನೊಳಗೊಂಡ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
