ಹರಿಶಂಕರ ಸೊಂಡೂರಿನ ಪ್ರಮುಖ ತೀರ್ಥ ತೊರೆ
ಸೊಂಡೂರಿನ ಪರಿಸರ ಬಹು ಸೂಕ್ಷ್ಮವಾಗಿದೆ.ಇಂತಹ ವಲಯದ ಸುತ್ತಲಿನ ಎರಡು ಕಿಲೋಮೀಟರಿನಷ್ಟು ದೂರದವರೆಗಾದರೂ ಗಣಿಗಾರಿಕೆ ನಿಷೇಧಿಸುವಂತೆ ಹಲವು ಹೋರಾಟಗಳೂ ನಡೆದಿವೆ.ಪತ್ರ ವ್ಯವಹಾರಗಳು ನಡೆದು,ಅಂತಿಮವಾಗಿ ತಜ್ಞರ ತಂಡವೊಂದು ಗಣಿ ಲಾಬಿಯ ಪರ ನಿಂತ ಪರಿಣಾಮ ಜನ ಅಸಹಾಯಕರಾದರು.
ಹರಿಶಂಕರದ ನೀರನ್ನು ಅತ್ಯಂತ ಪರಿಶುದ್ಧ ದೇವರ ತೀರ್ಥವೆಂದೇ ನಂಬಿದ್ದ ಜನರ ನಂಬಿಕೆಗಳಿಗೂ ಈಗ ಧಕ್ಕೆ ಬಂದಿದೆ.ಆ ನೀರು ಕೂಡ ಅದಿರುಯುಕ್ತ ಪುಡಿ ಮಿಶ್ರಣವಾಗಿ ಹರಿಯುತ್ತಿದೆ.ನೆಲದೊಳಗಿಂದಲೇ ಹರಿದುಬರುವ ಹರಿಶಂಕರದ ತೀರ್ಥ ಗಂಗೆಯಷ್ಟೆ ಪವಿತ್ರವೆಂಬುದು ಇಲ್ಲಿನ ಜನರ ನಂಬಿಕೆಯಾಗಿತ್ತು.
ಬೆಟ್ಟದ ಶಿಲಾಪದರುಗಳ ಆಳದಿಂದ ನಿರಂತರವಾಗಿ ವರ್ಷವಿಡೀ ಬರುವ ನೀರನ್ನು ಒಂದು ದಿನ ಸಂಗ್ರಹಿಸಿಟ್ಟು ನೋಡಿದರೆ, ಕಬ್ಬಿಣದ ಪುಡಿ ನೀರಿನ ತಳಭಾಗದಲ್ಲಿ ಶೇಖರಣೆಯಾಗುತ್ತದೆ. ಹರಿಶಂಕರದ ಮೇಲಿನ ಬೆಟ್ಟಗಳಲ್ಲಿ ಗಣಿ ಸ್ಫೋಟದಿಂದಾಗಿ ಕಬ್ಬಿಣದ ಅದಿರಿನ ಅಂಶ ನೀರಿನಲ್ಲಿ ಸೇರಿಕೊಂಡು ಹೊರಬರುತ್ತಿದೆ . ಇದೇ ರೀತಿ ಗಣಿಗಾರಿಕೆ ಮುಂದುವರೆದರೆ, ಶಿಲಾಪದರಗಳು ಕಳಚಿ ಜಲಮಾರ್ಗಕ್ಕೆ ಬಿದ್ದರೆ ಹರಿಶಂಕರದಲ್ಲಿ ಶಾಶ್ವತವಾಗಿ ನೀರು ಇಲ್ಲವಾಗುವುದು ಅಥವಾ ಈ ಜಲಮಾರ್ಗ ಮತ್ತೆಲ್ಲಿಗೋ ಬೇರೆ ಭಾಗದಲ್ಲಿ ಚಿಮ್ಮಬಹುದು.
ಇಡೀ ಉತ್ತರಕರ್ನಾಟಕದ ಆಕ್ಸಿಜನ್ ಉತ್ಪಾದನೆಯ ಹೃದಯ ಭಾಗದ ಅರಣ್ಯ ಕೂಡ ಗಣಿಗಾರಿಕೆಗೆ ತುತ್ತಾಗಿರುವುದು ದುರಂತವೆ ಸರಿ. ಗಣಿಲಾಬಿಯ ಮುಂದೆ ಹರಿಯೂ ಶಂಕರನೂ ಕೂಡ ಕಣ್ಣೀರು ಸುರಿಸುತ್ತಿರುವ ಹಾಗೆ ಭಾಸವಾಗುತ್ತಿದೆ.
ಬಿ.ಶ್ರೀನಿವಾಸ