Kannada News | Sanduru Stories | Dinamaana.com | 26-05-2024
ಭೀತಿ!
ಇಲ್ಲಿ ಹೆದರಿಸುವವರಾರೂ ಇಲ್ಲ.
ಮರಣದಂಡನೆ ಶಿಕ್ಷೆಗೆ ಒಳಗಾಗಿ ಗಲ್ಲಿನ ದಿನಾಂಕವನ್ನು ಎದುರು ನೋಡುತ್ತಾ ಕುಳಿತವರ ಹಾಗೆ ಕಾಣಿಸುತ್ತಾರೆ. ಹಾಗಂತ ಅವರಿಗೆ ಶತ್ರುಗಳೆಂಬುವರಾರೂ ಇಲ್ಲ. ಆದರೂ ಭೀತಿಯೆಂಬುದು ಕಣ್ಣು ತುಂಬಿ ನಿಂತಿರುತ್ತದೆ. ಇಂಥ ಭೀತಿಗೊಳಗಾದ ಎಷ್ಟೋ ಜೀವಿಗಳು ಕುಂತ್ ಕುಂತಲ್ಲೇ ಉಸಿರು ಚೆಲ್ಲಿದವರುಂಟು. ಇಂಥದೊಂದು ಭೀತಿಯ ಪರಿಸ್ಥಿತಿಗೆ ತಳ್ಳಿದ ವರಿಗೆ ಶಿಕ್ಷೆಯಾಗಲಿಲ್ಲ. ನ್ಯಾಯವಿಲ್ಲದೆ ಬದುಕಿದ್ದೂ ಏನುಪಯೋಗ? ಕೋರ್ಟು, ಪೊಲೀಸು ಸ್ಟೇಷನ್ನುಗಳಲ್ಲೂ ಧಣಿಗಳು ಬಂದರೆ ಕುರ್ಚಿ ಹಾಕಿ ಕೂಡಿಸಿ ಉಪಚರಿಸುವವರಿದ್ದಾರೆ.
ಬದುಕನ್ನು ನಿಭಾಯಿಸುವುದೇ ದೊಡ್ಡ ಸವಾಲು (Sanduru Stories)
ದಿನನಿತ್ಯವೂ ಎದುರುಗೊಳ್ಳುವ ಬದುಕನ್ನು ನಿಭಾಯಿಸುವುದೇ ದೊಡ್ಡ ಸವಾಲು. ಒಂದು ಕಾಲದ ಹತ್ತು ಗಾಲಿಗಳ ಟಿಪ್ಪುವಿನ ಒಡೆಯ, ಗಣಿಗಾರಿಕೆ ಜೋರಾಗಿ ನಡೆಯುತ್ತಿದ್ದಾಗ ಸಾಲಸೋಲ ಮಾಡಿ ಒಂದೇ ಬಾರಿಗೆ ಟಿಪ್ಪರುಗಳ ಕೊಂಡುಕೊಂಡ. ಆತನ ಹೆಸರು ಲಕ್ಷ್ಮಣ. ತುಂಬಾ ಸ್ಫುರದ್ರೂಪಿಯಾಗಿದ್ದ, ಮೃದು ಭಾಷಿ. ಸುತ್ತಲಿನ ಹಳ್ಳಿಗಳ ಜನರು ಕಣ್ಣಲ್ಲಿ ಒಳ್ಳೆಯ ವ್ಯಕ್ತಿ ಎನಿಸಿಕೊಂಡಿದ್ದ. ಅದನ್ನು ಗುರುತಿಸಿದ ರಾಜಕೀಯ ಪಕ್ಷವೊಂದು ಆತನಿಗೆ ತಾಲೂಕಿನ ರಾಜಕೀಯ ಉಸ್ತುವಾರಿ ನೀಡಿತ್ತು. ಬದುಕಿಗಾಗಿ ಸೊಂಡೂರಿನಲ್ಲಿ ಹಾರ್ಡ್ ವೇರ್ ಶಾಪ ಒಂದನ್ನು ತೆರೆದಿದ್ದ. ಐದು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡುಮಕ್ಕಳನ್ನು ಹೊಂದಿದ್ದ ಆತನದು ತೃಪ್ತಿಯ ಬದುಕು ಆಗಿತ್ತು.
Read Also: ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು
ಸಾಲ ಮಾಡಿ ಹೊಸ ಹೊಸ ಟಿಪ್ಪರ್ ಗಳನ್ನು ಖರೀದಿ (Sanduru Stories)
ಎಲ್ಲರ ಹಾಗೆ, ತಾನೂ ಸಹ ಮೈನ್ಸ್ ನ ಸಣ್ಣಪುಟ್ಟ ಕೆಲಸಗಳ ಕಾಂಟ್ರಾಕ್ಟ್ ಗಳನ್ನು ತೆಗೆದುಕೊಂಡು ಹೇಗೋ ಸಾಲಸೋಲ ಮಾಡಿ ಸಾಲ ಮಾಡಿ ಹೊಸ ಹೊಸ ಟಿಪ್ಪರ್ ಗಳನ್ನು ಖರೀದಿಸಿದ. ಲಕ್ಷ್ಮಣನಂತೆಯೇ ಊರಿನ ಇತರರೂ ಹೀಗೆಯೇ ಮಾಡುತ್ತಿದ್ದರು. ಹಾಗೆಯೇ ದುಡಿಮೆ ಕೂಡ ಇತ್ತು. ಇದ್ದಕ್ಕಿದ್ದ ಹಾಗೆ, ನ್ಯಾಯಾಲಯಕ್ಕೆ ಹೋದ ಗಣಿಗಾರಿಕೆಯ ಕರಾಳ ಅಕ್ರಮಗಳು ಒಂದೊಂದಾಗಿ ಹೊರಬರತೊಡಗಿದವು. ಕೆಲ ಧಣಿಗಳು ನ್ಯಾಯಾಲಯಗಳ ಆದೇಶಕ್ಕೆ ತಡೆಯಾಜ್ಞೆ ತಂದರು. ಆದರೂ ತಡೆ ನೀಡಲಾಗದ ಕೆಲವು ಕೇಸುಗಳಲ್ಲಿ ಗಣಿ ಧಣಿಗಳನ್ನು ಪೊಲೀಸರು ಹಿಡಿದುಕೊಂಡು ಹೋದರು.
Audio Book: ಸೊಂಡೂರಿನ ಕಗ್ಗತ್ತಲೆಯ ಕಥನಗಳು
ನಂತರ ಜಾಮೀನಿನ ಮೇಲೆ ಹೊರಬಂದರು. ಟಿಪ್ಪರುಗಳು ಮನೆಗಳು ಮುಂದೆ ಮೌನವಾಗಿ ರೋದಿಸುತ್ತ ನಿಂತವು.
ಸಾಲಗಾರರ ಕಾಟಕ್ಕೆ ಎಷ್ಟೋ ಜನ ಕಂಟ್ರಾಕ್ಟುದಾರರು ನೇಣಿಗೆ ಶರಣಾದರು. ಲಕ್ಷ್ಮಣನ ಹೃದಯ ಕೂಡ ಒಂದಿನಾ ಇದ್ದಕ್ಕಿದ್ದಂತೆ ಸ್ತಬ್ಧವಾಯಿತು. ಅದೇ ದಿನಗಳಲ್ಲಿ ಶ್ಯೂರಿಟಿಗೆಂದು ಇದ್ದ ಆಸ್ತಿಗಳೆಲ್ಲವೂ ಹರಾಜಾದವು.
ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದವು
ಅಕ್ಷರಶಃ ಇಂತಹ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದವು. ಕೆಲ ಹೆಣ್ಣು ಮಕ್ಕಳಂತೂ ಶಾಂತಿಯನ್ನರಸುತ್ತ ಯಾವುದೋ ಓಂ ಶಾಂತಿ ಎನ್ನುತ್ತಾ ಬಿಳಿ ಸೀರೆ ಧರಿಸಿ ನಿಂತರು. ಲಕ್ಷ್ಮಣರ ಎರಡನೆಯ ಮಗಳು ಅಪ್ಪ… ಅಪ್ಪಾ… ಎನ್ನುತ್ತಾ ಖಿನ್ನತೆಯಿಂದಲೇ ನೇಣಿಗೆ ಶರಣಾದಳು.
ಇದ್ದ ಗಂಡುಮಕ್ಕಳ ಪೈಕಿ, ಒಬ್ಬ ಮಗ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋದವನು ಸಿಟಿ ಬಸ್ಸಿನಲ್ಲಿಯೇ ರಕ್ತಕಾರಿ ಸತ್ತನಂತೆ. ಮತ್ತೊಬ್ಬ ಮಗ ಜಿಂದಾಲ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಸೇರಿದ್ದವನು ಹೆಚ್ಚಿನ ಸಂಬಳದ ಆಸೆಗೆ ಹೊಸ ಕಂಪೆನಿ ಸೇರಿದವನು ಅಲ್ಲಿನ ಕೆಲಸದ ಒತ್ತಡಕ್ಕೆ ಒಳಗಾಗಿ ಮುವ್ವತ್ತರ ಹರೆಯದಲ್ಲಿಯೇ ಹೃದಯಸ್ತಂಭನಕ್ಕೊಳಗಾದ.
ಮನೆಯ ಯಜಮಾನಿ ಅಕ್ಷರಶಃ ಬೀದಿಪಾಲಾಗಿದ್ದಳು.
ಕೊಲ್ಲುವ ಏಕಾಂಗಿತನವನ್ನು ಎದುರಿಸುತ್ತಾ,ಅವರಿವರ ಮನೆಗಳಲ್ಲಿ ಮುಸುರೆ ತಿಕ್ಕುತ್ತಾ ಕಾಲ ನೂಕುವ ಆಕೆಯನ್ನು,”ಒಂದು ಕಾಲದ ಧಣಿ , ಸೌಕಾರನ ಹೇಣ್ತಿ”ಎಂದು ಯಾರೂ ಗುರುತಿಸುವುದಿಲ್ಲ. ಕಾಲನನ್ನು ಎದುರು ನೋಡುತ್ತಿರುವ ಆಕೆಯ ಮುಖಭಾಲದಲ್ಲೀಗ ಯಾವ ಭಾವರೇಖೆಗಳೂ ಇಲ್ಲ.
ಬಿ.ಶ್ರೀನಿವಾಸ
English Summary: Sanduru Stories- mining tragedy in Sandur