Kannada News | Sanduru Stories | Dinamaana.com | 29-05-2024
ಗಣಿಧೂಳು ಏಳಬಾರದೆಂದು ರಸ್ತೆಗೆ ಹಾಕಿದ್ದ ನೀರು ಕುಡಿದು ಚಿರತೆಯೊಂದು ದಣಿವಾರಿಸಿಕೊಂಡಿದೆ. ಆ ಚಿತ್ರವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆಯಂತೆ.!
ಹಸಿವಿನ ಸಂಕಟ ಮನುಷ್ಯರಿಗೆ ಅರ್ಥವಾಗಲ್ಲ (Sanduru Stories)
ದರೋಜಿ ಕರಡಿ ಧಾಮದಲ್ಲಿ ಕರಡಿಯೊಂದು ಇಲಾಖೆಯವರು ಬಂಡೆಗೆ ತಿಕ್ಕಿದ ಜೋನಿಬೆಲ್ಲವನ್ನು ನಾಲಿಗೆಯಿಂದ ನೆಕ್ಕುವುದನ್ನು ಬೈನಾಕ್ಯುಲರನಲ್ಲಿ ನೋಡಿ ನಾವು ಆನಂದಿಸುತ್ತೇವೆ. ಹಗಲು ಹೊತ್ತಿನಲ್ಲಿ ಕಣ್ಣು ಮಂಜಾಗುವ ಕರಡಿಗಳಿಗೆ,ರಾತ್ರಿ ಓಡಾಡುವ ಲಾರಿ,ಟಿಪ್ಪರುಗಳ ಸದ್ದಿಗೆ ಬೆಚ್ಚಿ ಬಿದ್ದು ಹಸಿವಿನಿಂದ ಬಳಲುವ ಸಂಕಟ ಮನುಷ್ಯರಾದ ನಮಗೆ ಅರ್ಥವಾಗುವುದಿಲ್ಲ.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?
ಅತಿ ಸೂಕ್ಷ್ಮ ಮತ್ತು ಕುಟುಂಬ ಮೋಹಿ ತಾಯಿ ಕರಡಿ ತನ್ನ ಶಬ್ದ ಮಾತ್ರದಿ ಮರಿ ಕರಡಿಗಳಿಗೆ ಸಂದೇಶ ರವಾನಿಸಬಲ್ಲುದು.ವಾಸನೆ ಮತ್ತು ಸೂಕ್ಷ್ಮ ಶಬ್ದ ಅವಲೋಕಿಸಿ ತನ್ನ ನಿರ್ಧಾರ ಪ್ರಕಟಿಸುವ ಮತ್ತು ತನ್ನ ಸಂಕುಲಕ್ಕೆ ಅಪಾಯವೆಂದು ಗ್ರಹಿಸಿದರೆ ಮಾತ್ರ ಅದು ಮನುಷ್ಯರ ಮೇಲೆ ದಾಳಿ ಮಾಡುತ್ತದೆ.
ಅನಿಲ್ ಕುಂಬ್ಳೆ ರಂಗಪ್ರವೇಶ (Sanduru Stories)
ಕವಳಿಹಣ್ಣು,ಕಾರೆಹಣ್ಣು,ಬಿಕ್ಕೆಹಣ್ಣುಗಳೇ ಅದರ ಮುಖ್ಯ ಆಹಾರವಾಗಿದ್ದ ಕಾಲವೊಂದಿತ್ತು.ಅಂತಹ ಸಮೃದ್ಧಿ ಕೂಡ ಇಲ್ಲಿನ ಕಾಡುಗಳಲ್ಲಿತ್ತು. ಈಗ ಬೆಚ್ಚಿ ಬೀಳುವ ಕ್ರಷಿಂಗ್ ಮಿಷೀನುಗಳ ಕ್ವಾರಿಗಳ ಭಯಂಕರ ಸದ್ದು ನಿಲ್ಲಿಸಲು ಸ್ವತಃ ಕ್ರಿಕೆಟಿಗ ಅನಿಲ್ ಕುಂಬ್ಳೆ ರಂಗಪ್ರವೇಶ ಮಾಡಬೇಕಾಯಿತು.ಆದರೆ ಗಣಿ ಸದ್ದನ್ನು ನಿಲ್ಲಿಸುವ ವ್ಯಾಪ್ತಿ ಬಹು ವಿಶಾಲವಾಗಿತ್ತಾದ್ದರಿಂದ ಅದು ನಿಲ್ಲಲಿಲ್ಲ.ಕರಡಿಗಳ ನೆಮ್ಮದಿಗೆ ಭಂಗ ತರುವುದನ್ನು ನಿಲ್ಲಿಸುವ ಗೋಜಿಗೆ ಮತ್ಯಾರೂ ಕೈ ಹಾಕಲಿಲ್ಲ.
ಜಲಾಶಯಕ್ಕೆ ಹೈಟೆಕ್ ಸ್ಪರ್ಶ (Sanduru Stories)
ಸೊಂಡೂರಿನ ತಾರಾನಗರದ ಸುಂದರ ಜಲಾಶಯಕ್ಕೆ ಹೈಟೆಕ್ ಸ್ಪರ್ಶ ನೀಡುವ ಕುರಿತು ಸಭೆಗಳ ಮೇಲೆ ಸಭೆಗಳಾಗುತ್ತಿವೆಯಂತೆ. ಸುಂದರ ಉದ್ಯಾನ, ಲೈಟಿಂಗ್ ವ್ಯವಸ್ಥೆ,ಬಣ್ಣ ಬಣ್ಣದ ಸಂಗೀತ ಕಾರಂಜಿ, ಪ್ರವಾಸೋದ್ಯಮದ ಆಕರ್ಷಣೆಗೆ ಏನೇನು ಬೇಕೋ ಎಲ್ಲಾ ನಡೆಯುತ್ತಿವೆ.ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ ಎಂದಿರಾ? ಇದ್ದೇ ಇದೆಯಲ್ಲ ಡಿ.ಎಂ.ಎಫ್.!
ಡಿಸ್ಟ್ರಿಕ್ಟ್ ಮೈನಿಂಗ್ ಫಂಡ್…! (Sanduru Stories)
ಜಿಲ್ಲಾ ಖನಿಜ ನಿಧಿಯು ಗಣಿಬಾಧಿತ ಜನರ ಸಂಕಷ್ಟಗಳಾದ ಕುಡಿಯುವ ನೀರು,ಆರೋಗ್ಯ ಶಿಕ್ಷಣ , ಮತ್ತು ಪರಿಸರ ಸಂರಕ್ಷಣೆಯಂತಹ ಕೆಲಸಗಳಿಗಾಗಿ ಮೀಸಲಾಗಿರುವಂತಹದು.ಆದರೆ , ಬಳಕೆಯಾಗುತ್ತಿರುವುದು ಮಾತ್ರ ಬೇರೆ ಕಾರಣಗಳಿಗಾಗಿ.
ಜಲಾಶಯದ ಸುತ್ತ ಒಂದೇ ಒಂದು ಪಕ್ಷಿ ಇಲ್ಲ
ಎಲ್ಲಿ ಶುದ್ಧ ನೀರು ಮತ್ತು ಗಾಳಿ ಇರುತ್ತದೋ ಅಂತಹ ಯಾವುದೇ ಜಲಾಶಯವಿರಲಿ, ಹೊಳೆ,ಹಳ್ಳ, ಕೊಳ್ಳಗಳೇ ಇರಲಿ, ಅಲ್ಲಿ ಪಕ್ಷಿಗಳ ಕಲರವ ಇದ್ದೇ ಇರುತ್ತದೆ. ಆದರೆ, ತಾರಾನಗರದ ಜಲಾಶಯದ ಸುತ್ತ ಒಂದೇ ಒಂದು ಪಕ್ಷಿ ಯಾಕೆ ಹಾರಾಡುತ್ತಿಲ್ಲ? ಯಾಕೆ ಹಾರಾಡುವುದಿಲ್ಲ? ಎದೆಯ ಮೌನದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮುನ್ನವೇ ಲಾರಿಗಳ “ದಢಾರ್” ಎಂಬ ಸದ್ದು ನಮ್ಮನ್ನು ಯೋಚಿಸದಂತೆ ತಡೆಯುತ್ತದೆ.
ಬಿ.ಶ್ರೀನಿವಾಸ