ಹರಿಹರ: ಗ್ರಾಮೀಣ ಭಾಗದಲ್ಲಿರುವ ಗ್ರಾಮ ಪಂಚಾಯ್ತಿಯ ಗ್ರಂಥಾಲಯಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕ್ರಮ ವಹಿಸಬೇಕೆಂದು ತಾಲ್ಲೂಕು ಪಂಚಾಯ್ತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ರಾಮಕೃಷ್ಣ ಪಿ. ಹೇಳಿದರು.
ನಗರದ ತಾಲೂಕು ಪಂಚಾಯ್ತಿ ಸಂಭಾಂಗಣದಲ್ಲಿ ನಡೆದ ತಾಲ್ಲೂಕಿನ 22 ಗ್ರಾಮ ಪಂಚಾಯ್ತಿ ಗ್ರಂಥಾಲಯಗಳ ಮೇಲ್ವಿಚಾರಕರ ಮಾಸಿಕ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದವರಿಗೆ ಜ್ಞಾನದ ಹರಿವು ಉಚಿತವಾಗಿ ಸಿಗಲಿ ಎಂಬ ಗುರಿಯೊಂದಿಗೆ ಸರ್ಕಾರ ಅಪಾರ ಅನುದಾನ ವ್ಯಯಿಸಿ ಗ್ರಂಥಾಲಯಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡುತ್ತಿದೆ. ವ್ಯಯಿಸುತ್ತಿರುವ ಈ ಅನುದಾನದ ಉಪಯೋಗವಾಗಬೇಕೆಂದರೆ ಜನರು ವಿಶೇಷವಾಗಿ ವಿದ್ಯಾರ್ಥಿಗಳು, ಯುವಕ, ಯುವತಿಯರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯನ್ನು ಸೂಕ್ತವಾಗಿ ನಡೆಸಿ, ಗುರಿಯನ್ನು ತಲುಪುತ್ತಾರೆ. ಗ್ರಂಥಪಾಲಕರ ವೃತ್ತಿಯು ಒಂದು ರೀತಿಯಲ್ಲಿ ಶಿಕ್ಷಕ ವೃತ್ತಿಯಂತೆಯೆ ಇದೆ. ಗ್ರಂಥಾಲಯದಿಂದ ಉಪಯೋಗ ಪಡೆದು ಸಾಧನೆ ಸಾಧಿಸದವರು ಮೇಲ್ವಿಚಾರಕರನ್ನು ಶಿಕ್ಷಕರಂತೆಯೆ ಸ್ಮರಿಸುತ್ತಾರೆಂದರು.
ಗ್ರಾಮಾ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಗ್ರಂಥಾಲಯಗಳಿಗೆ ಇಂಟರ್‍ನೆಟ್ ಸೌಲಭ್ಯದೊಂದಿಗೆ ಡಿಜಿಟಲ್ ಉಪಕರಣಗಳನ್ನು ಒದಗಿಸಲಾಗಿದೆ. ವಿವಿಧ ಹಂತದ ವಿದ್ಯಾರ್ಥಿಗಳು, ಸ್ಪರ್ಧಾತಮ್ಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ಇದು ಸಹಾಯಕವಾಗಿದ್ದು, ಯುವ ಜನರಿಗೆ ಇದರ ಪರಿಚಯ ಮಾಡಿಕೊಡಬೇಕಿದೆ ಎಂದರು.
ಗ್ರಂಥಾಲಯದ ಒಳಗಿನ ಹಾಗೂ ಹೊರಗಿನ ವಾತಾವರಣ ಸ್ವಚ್ಚವಾಗಿಡಬೇಕು. ಓದುಗರಿಗೆ ಸೂಕ್ತ ಟೇಬಲ್, ಕುರ್ಚಿ, ಗಾಳಿ, ಬೆಳಕಿನ ವ್ಯವಸ್ಥೆ ಮಾಡಬೇಕು. ಪುಸ್ತಕ, ದಿನ, ವಾರ, ಮಾಸಿಕ ಪತ್ರಿಕೆಗಳನ್ನು ಕಾಣುವಂತೆ ಜೋಡಿಸಿಟ್ಟಿರಬೇಕು. ಈಗಿನ ತಲೆಮಾರಿನ ಅಗತ್ಯಕ್ಕೆ ತಕ್ಕ ಪುಸ್ತಕಗಳನ್ನು ಲಭ್ಯವಾಗುವಂತೆ ಮಾಡಿಕೊಂಡಲ್ಲಿ ಗ್ರಂಥಾಲಯಗಳು ಜನರಿಂದ ತುಂಬಿ, ತುಳುಕುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಉಮೇಶ್ ಹಾಗೂ ಎಲ್ಲಾ ಗ್ರಂಥಾಲಯಗಳ ಮೇಲ್ವಿಚಾರಕರು ಭಾಗವಹಿಸಿದ್ದರು.