ಹರಿಹರ (Davanagere) : ಸಚಿವ ಸತೀಶ್ ಜಾರಕಿಹೊಳಿ ರವರು ಮಾನವ ಬಂಧುತ್ವ ವೇದಿಕೆಯ ಚಟುವಟಿಕೆಗಳ ಮೂಲಕ ನಾಡಿನಲ್ಲಿ ಸಾಮಾಜಿಕ ಬದಲಾವಣೆ ಮಾಡುತ್ತಿದ್ದಾರೆಂದು ಪತ್ರಕರ್ತ ಬಿ.ಎನ್.ಮಲ್ಲೇಶ್ ಹೇಳಿದರು.
ಹರಿಹರದ ಮೈತ್ರಿ ವನದಲ್ಲಿಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಗ್ರಾಮಾಡಳಿತ ಅಧಿಕಾರಿಗಳ ಸ್ಪರ್ಧಾತ್ಮಕ ಮಹಿಳಾ ಪರೀಕ್ಷಾರ್ಥಿಗಳಿಗೆ ಆಯೋಜಿಸಿದ್ದ 15 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಡವರು, ಶೋಷಿತರು ಹಾಗೂ ಜಾತಿ ಕಾರಣಕ್ಕಾಗಿ ತುಳಿತಕ್ಕೊಳಗಾದವರ ಏಳಿಗೆಗೆ ಜಾರಕಿಹೊಳಿ ಫೌಂಡೇಶನ್ ನಿರಂತರ ಶ್ರಮಿಸುತ್ತಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ವಸತಿ, ಆಹಾರ ನೀಡಿ ತರಬೇತಿ ನೀಡುತ್ತಿರುವುದು ಸಾಮಾಜಿಕ ಕಳಕಳಿಯ ಪ್ರತೀಕ ಎಂದರು.
ಶಿಬಿರಾರ್ಥಿಗಳು ಸಣ್ಣ ಗುರಿ ಇಟ್ಟುಕೊಳ್ಳದೆ ದೊಡ್ಡ ಸಾಧನೆ ಮಾಡಲು ಮುಂದಾದರೆ ಯಶಸ್ಸು ಸಾಧ್ಯ ಎಂದು ಹಲವು ಉದಾಹರಣೆಗಳನ್ನು ನೀಡಿದ ಅವರು, ಗ್ರಾಮಾಡಳಿತ ಅಧಿಕಾರಿಯಾಗಿ ಆಯ್ಕೆಯಾದರೆ ರೈತರ ಕೆಲಸಗಳಿಗೆ ಮೊದಲ ಆಧ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಪಠ್ಯವನ್ನು ಓದಿ ಹೆಚ್ಚಿನ ಅಂಕ ಪಡೆದರೆ ಸಾಲದು, ನಾಡು, ದೇಶ, ಜಾಗತಿಕ ವಿಷಯಗಳತ್ತಲೂ ಗಮನ ಹರಿಸಬೇಕೆಂದರು.
Read also : Harihara | ಹಿಂದೂ ಮಹಾಗಣಪತಿ ವಿಸರ್ಜನೆ: ಅಂಬೇಡ್ಕರ್ ಭಾವಚಿತ್ರ ಬಳಕೆಗೆ ಡಿಎಸ್‍ಎಸ್ ವಿರೋಧ
ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮತನಾಡಿ, ಸರ್ಕಾರಿ ಉದ್ಯೋಗ ಪಡೆಯಬೇಕೆಂದರೆ ತೀವ್ರ ಸ್ಪರ್ಧೆ ಇದೆ, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಶಾಲಾ, ಕಾಲೇಜು ಹಂತದಲ್ಲೆ ಸ್ಪರ್ಧೆಗಳಿಗೆ ಸಜ್ಜುಗೊಳಿಸಬೇಕು. ದಿನ ಪತ್ರಿಕೆ, ವಾರ, ಮಾಸ ಪತ್ರಿಕೆಗಳನ್ನು ನಿಯಮಿತವಾಗಿ ಓದಬೇಕೆಂದು ಕಿವಿಮಾತು ಹೇಳಿದರು,
ಸ್ವಾಗತ ಹಾಗೂ ನಿರೂಪಣೆಯನ್ನು ಮಂಜುನಾಥ್ ಉಕ್ಕಡಗಾತ್ರಿ ನೆರವೇರಿಸಿದರು. ಶಿಬಿರದ ಉಸ್ತುವಾರಿ ಶಿಲ್ಪಾ ಉಪಸ್ಥಿತರಿದ್ದರು.