ದಾವಣಗೆರೆ (Davanagere) : ಸತ್ಯ, ಅಹಿಂಸೆ, ಪ್ರಾಮಾಣಿಕತೆಯ ಸಂದೇಶಗಳು ಮಹಾತ್ಮ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತಿç ಅವರ ಆದರ್ಶ ತತ್ವ ಸಂದೇಶಗಳಾಗಿವೆ. ಇವುಗಳ ಪಾಲನೆಯೊಂದೇ ಪ್ರಸ್ತುತ ಸಮಾಜದಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಲು ಇರುವ ಪರಿಹಾರ ಮಾರ್ಗ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹದ್ದೂರ ಶಾಸ್ತ್ರೀ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಾಂಧೀಜಿ ಮತ್ತು ಶಾಸ್ತ್ರೀ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವುಗಳ ಸ್ಮರಣೆಗಷ್ಟೇ ಸೀಮಿತವಾಗದೇ ಅವರಲ್ಲಿದ್ದ ಸದ್ಗುಣ, ಸಮಾಜಮುಖಿ ಸೇವೆಗಳು ಮತ್ತು ಸತ್ಯ ಶುದ್ಧ ಪ್ರಾಮಾಣಿಕ ಜೀವನ ಶೈಲಿಯನ್ನು ಮಾದರಿಯಾಗಿ ಇಟ್ಟುಕೊಂಡು ಬದುಕುವುದನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ನುಡಿದರು.
‘ನಾವು ಮಾಡುವ ಕೆಲಸದಲ್ಲಿ ತೋರುವ ಪ್ರಾಮಾಣಿಕ ನಡೆಯೇ ಮಹಾತ್ಮರ ಆದರ್ಶ ಪಾಲನೆಯಾಗಿವೆ. ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್ ಅವರ ಜೀವನಾದರ್ಶಗಳು ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಪ್ರೇರಣೆಯಾಗಿವೆ. ಇನ್ನೊಬ್ಬರ ಕೆಲಸವನ್ನು ಪ್ರಶ್ನಿಸುವ ಬದಲು, ಆತ್ಮಾವಲೋಕನ ಮಾಡಿಕೊಂಡು ಜವಾಬ್ದಾರಿ ನಿರ್ವಹಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಮಹಾತ್ಮ ಗಾಂಧಿ ಅವರನ್ನು ಕುರಿತು ಮಾತನಾಡಿದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಯರಾಮಯ್ಯ, ಹಲವಾರು ಸಮಸ್ಯೆಗಳನ್ನು ಎದುರಿಸಿ, ಸವಾಲುಗಳಿಗೆ ಎದುರಾಗಿ ಸಮಾಜ ಕಟ್ಟಿದ ರೀತಿ ಮತ್ತು ದೇಶದ ಜನರನ್ನು ಒಗ್ಗೂಡಿಸಿ ಶೈಲಿಯು ಗಾಂಧೀಜಿ ಅವರನ್ನು ಜಗತ್ತು ಮಹಾತ್ಮ ಎಂದು ಕರೆಯಿತು. ರಾಷ್ಟ್ರಪಿತರಾಗಿ ದೇಶದ ಎಲ್ಲ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಗೊಳ್ಳುವಂತಾಗಿದೆ ಎಂದು ಹೇಳಿದರು.
ಲಾಲ್ ಬಹದ್ದೂರು ಶಾಸ್ತ್ರೀ ಅವರನ್ನು ಕುರಿತು ಮಾತನಾಡಿದ ಸಹಾಯಕ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಶಿ, ಆತ್ಮಸ್ಥೈರ್ಯ ಮತ್ತು ಪ್ರಾಮಾಣಿಕ ನಡೆ ನುಡಿಗಳ ಮೂಲಕ ಜಗತ್ತನ್ನು ಗೆದ್ದ ಮಹಾನ್ ವ್ಯಕ್ತಿ. ಜೈಜವಾನ್, ಜೈಕಿಸಾನ್ ಎಂಬ ಘೋಷಣೆಯೊಂದಿಗೆ ದೇಶದ ರೈತರು ಮತ್ತು ಸೈನಿಕರಿಗೆ ಗೌರವ ನೀಡಿದ ಶ್ರೇಷ್ಠ ಪ್ರಧಾನಿ. ಅವರ ಆತ್ಮವಿಶ್ವಾಸದಿಂದಾಗಿ ಭಾರತವು ಶತೃ ರಾಷ್ಟçಗಳನ್ನು ಯುದ್ಧದಲ್ಲಿ ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಜಗತ್ತಿನಲ್ಲಿ ಭಾರತ ತಲೆಎತ್ತಿ ನಿಲ್ಲುವಂತಾಯಿತು ಎಂದು ತಿಳಿಸಿದರು.
ಕುಲಸಚಿವ ಪ್ರೊ.ಆರ್.ಶಶಿಧರ್ ಉಪಸ್ಥಿತರಿದ್ದರು. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಘಟಕದ ಸಂಚಾಲಕ ಡಾ.ನಾಗಭೂಷಣಗೌಡ ಸ್ವಾಗತಿಸಿದರು. ಡಾ. ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ವಿಶ್ವವಿದ್ಯಾನಿಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.