ದಾವಣಗೆರೆ (Davanagere): ಬಲವಂತದಿಂದ ಅಪ್ರಾಪ್ತೆಯ ವಿವಾಹವಾಗಿ, ಅತ್ಯಾಚಾರವೆಸಗಲು ಸಹಕರಿಸಿದ್ದನಿಗೆ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ 3 ವರ್ಷ ಕಾರಾಗೃಹ ವಾಸ ಮತ್ತು 60 ಸಾವಿರ ರೂಪಾಯಿ ದಂಡ ವಿಧಿಸಿದೆ.
ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದ ಷಣ್ಮುಖ(26) ಶಿಕ್ಷೆಗೆ ಒಳಗಾದವನು.
ಅನವೇರಿಯಲ್ಲಿ ಪ್ರಥಮ ಪಿಯು ಓದುತ್ತಿದ್ದ ಅಪ್ರಾಪ್ತೆ 2021ರ ಡಿ. 1 ರ ಸಂಜೆ ಪೆನ್ನು ತರವುದಾಗಿ ಹೇಳಿ ಹೋಗಿದ್ದವಳು ಮನೆಗೆ ವಾಪಾಸ್ ಬಂದಿರಲಿಲ್ಲ. ಬಾಲಕಿಯ ತಂದೆ ವಿಚಾರಣೆ ನಡೆಸಿ ದೊರೆತ ಮಾಹಿತಿಯಂತೆ ದೂರವಾಣಿ ಮೂಲಕ ಪ್ರಶಾಂತ್, ಆರೋಪಿ ಷಣ್ಮುಖನಿಗೆ ಸಂಪರ್ಕಿಸಿದಾಗ ನಿಮ್ಮ ಮಗಳು ನಮ್ಮ ಬಳಿ ಇದ್ದಾರೆ. ಕರೆದುಕೊಂಡು ಬರುತ್ತೇವೆ ಎಂದು ತಿಳಿಸಿದ್ದರು.
ನಂತರ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದರು. ಮಗಳು ವಾಪಾಸ್ ಬಂದಿರಲಿಲ್ಲ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪ್ರಶಾಂತ್ ಮತ್ತು ಷಣ್ಮುಖ ಅಪ್ರಾಪ್ತೆಯನ್ನ ಅಪಹರಣ ಮಾಡಿ, ಪ್ರಶಾಂತ್ ಬಲವಂತವಾಗಿ ಮದುವೆಯಾಗಲು ಹಾಗೂ ಅತ್ಯಾಚಾರ ವೆಸಗಲು ಷಣ್ಮುಖ ಸಹಕರಿಸಿರುವುದು ತನಿಖೆಯಿಂದ ತಿಳಿದು ಬಂದಿದ್ದರಿಂದ ವೃತ್ತ ನಿರೀಕ್ಷಕ ಟಿ.ವಿ. ದೇವ ರಾಜ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಮ ನಾರಾಯಣ ಹೆಗಡೆ ಪ್ರಕರಣದ ಎರಡನೇ ಆರೋಪಿ ಷಣ್ಮುಖ ಮೇಲಿನ ಆರೋಪ ಸಾಬೀತಾಗಿದ್ದರಿಂದ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 60 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಸಂತ್ರಸ್ಥೆಗೆ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಸುನಂದಾ ಮಡಿವಾಳರ್ ವಾದ ಮಂಡಿಸಿ ದ್ದರು.