ದಾವಣಗೆರೆ (Davanagere): ವೃದ್ಧೆಯನ್ನು ಅತ್ಯಾಚಾರ ಮಾಡಿದ್ದ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ., ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.
ರವಿ (30 ವರ್ಷ) ಶಿಕ್ಷೆಗೊಳಗಾದ ಅಪರಾಧಿ. ಕಳೆದ 2022ರ ಡಿಸೆಂಬರ್ 3 ರಂದು ಹೊನ್ನಾಳಿಯ 80 ವರ್ಷ ವಯಸ್ಸಿನ ವೃದ್ಧೆಯ ಮನೆಗೆ ಬೆಳಗಿನ ಜಾವ ಅಕ್ರಮವಾಗಿ ಪ್ರವೇಶ ಮಾಡಿ ಅತ್ಯಾಚಾರ ಮಾಡಿದ್ದ. ವೃದ್ಧೆ ಕಿರುಚಿಕೊಂಡಾಗ ನೆರೆಹೊರೆಯವರು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ನೀಡಿದ ದೂರಿನನ್ವಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್.ಎಂ. ಸಿದ್ದೇಗೌಡ ನಡೆಸಿದ ತನಿಖೆಯಲ್ಲಿ ಕೃತ್ಯ ಎಸಗಿರುವುದು ದೃಢಪಟ್ಟಿರುವುದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಆರೋಪಿತನ ಮೇಲೆ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಆರೋಪಿತನಿಂದ ವಸೂಲು ಮಾಡಿದ ದಂಡದ ಮೊತ್ತವನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಪರ‍್ಯಾದಿಯವರ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ನ್ಯಾಯ ಮಂಡಿಸಿದ್ದಾರೆ.
Read also : Harihar | ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ನಿಲ್ಲದ ಅಕ್ರಮ ಮಣ್ಣು ಗಣಿಗಾರಿಕೆ : ಡಿಎಸ್‌ಎಸ್ ಆರೋಪ