ಹರಿಹರ (Davanagere) : ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮಗಿರಿ ಮಹಾರಾಜ್ ಎಂಬ ವ್ಯಕ್ತಿ ಮುಸ್ಲಿಂ ಸಮುದಾಯದವರು ಗೌರವಿಸುವ ಪ್ರವಾದಿ ಮೊಹಮ್ಮದ್ ಹಾಗೂ ಹಜರತ್ ಆಯಿಷಾ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ನಗರದಲ್ಲಿ ಸೋಮವಾರ ಅಂಜುಮನ್ ಎ ಇಸ್ಲಾಮಿಯಾ ಸಂಸ್ಥೆ ಇಲ್ಲಿನ ತಹಶೀಲ್ದಾರರಿಗೆ ಮನವಿ ನೀಡಿದರು.
ಗ್ರೇಡ್-2 ತಹಶೀಲ್ದಾರ್ ಪುಷ್ಪವತಿ ಇವರಿಗೆ ಮನವಿ ನೀಡಿದ ನಂತರ ಸಂಸ್ಥೆಯ ಅಧ್ಯಕ್ಷ ಸೈಯದ್ ಏಜಾಜ್ ಮಾತನಾಡಿ, ಪ್ರವಾದಿ ಮೊಹಮ್ಮದ್ ಹಾಗೂ ಹಜರತ್ ಆಯಿಷಾರನ್ನು ಮುಸ್ಲಿಮರು ಅತ್ಯಂತ ಗೌರವ ನೀಡುತ್ತಾರೆ. ಇಂತಹ ಧಾರ್ಮಿಕ ಮಹಾಪುರುಷರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದರು.
ಸಂಸ್ಥೆಯ ಕಾರ್ಯದರ್ಶಿ ಸೈಯದ್ ಆಸಿಫ್ ಜುನೈದಿ ಮಾತನಾಡಿ, ದೇಶದಲ್ಲಿ ವಿವಿಧ ಧರ್ಮೀಯರ ನಡುವೆ ಇರುವ ಸಾಮರಸ್ಯ ಹದಗೆಡಿಸಿ ರಾಜಕೀಯ ಲಾಭ ಪಡೆಯಲು, ತಮ್ಮ ಸ್ವಾರ್ಥ ಸಾಧನೆಗೆ ಹಲವರು ಪ್ರಯತ್ನಿಸುತ್ತಿದ್ದಾರೆ. ಈ ಸಾಲಿನಲ್ಲಿ ರಾಮಗಿರಿ ಮಹಾರಾಜ್ ಸೇರ್ಪಡೆಗೊಂಡಿದ್ದು ಇವರ ವಿರುದ್ಧ ಕಾನೂನು ಕ್ರಮಕೈಗೊಂಡು ಎಚ್ಚರಿಕೆ ಮೂಡಿಸಬೇಕಿದೆ ಎಂದರು.
ಕೊಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಡಾ.ರಾಧಾ ಗೋಬಿನಂದಾಕರ್ ಇವರ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿ ಮನವಿ ನೀಡಲಾಯಿತು.
Read also : Vijayendra | ವಿಜಯೇಂದ್ರ ವಿರುದ್ದ ಅಕ್ಟೋಬರ್ ಕ್ರಾಂತಿ?
ನಗರಸಭಾ ಸದಸ್ಯರಾದ ಎಂ.ಆರ್.ಮುಜಮ್ಮಿಲ್, ಜಾವೀದ್ ಆರ್.ಸಿ., ಸಂಸ್ಥೆ ಪದಾಧಿಕಾರಿಗಳಾದ ಫಯಾಜ್ ಅಹ್ಮದ್, ಗುತ್ತೂರು ನಾಸಿರ್ ಪೈಲ್ವಾನ್, ಎಂ.ಆರ್.ಸೈಯದ್ ಸನಾಉಲ್ಲಾ, ಮೊಹ್ಮದ್ ಸಿಬ್ಗತ್‍ಉಲ್ಲಾ ಬಿ., ಫ್ರಕ್ರುಲ್ಲಾ ಖಾನ್ ಎಚ್., ಸೈಯದ್ ಅಶ್ಫಾಖ್, ರೋಷನ್ ಜಮೀರ್ ಟಿ., ನೂರುಲ್ಲಾ ಎಚ್., ಸೈಯದ್ ರಹಮಾನ್, ಸೈಯದ್ ಬಶೀರ್ ಬಿ., ಸಾದಿಖ್‍ಉಲ್ಲಾ ಎಸ್.ಎಂ., ಮೊಹ್ಮದ್ ಅಲಿ, ಅಫ್ರೋಜ್ ಖಾನ್, ಹಾಜಿ ಅಲಿ ಖಾನ್, ಫಾರೂಖ್ ಎಂ., ಸರ್ಫರಾಜ್ ಅಹ್ಮದ್ ಕೆ., ಗೌಸ್ ಪೀರ್, ರಹಮತ್ ಉರ್ ರಹಮಾನ್ ಇದ್ದರು.