ಶಿವಮೊಗ್ಗ, ಜು. 26: ಮಲೆನಾಡಿನಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆ ಮುಂದುವರಿದಿದೆ. ಮತ್ತೆ ಕೆರೆಕಟ್ಟೆ, ನದಿಗಳು ಉಕ್ಕಿ ಹರಿಯುತ್ತಿವೆ. ಮತ್ತೊಂದೆಡೆ, ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.
ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ, ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾದ ಭದ್ರಾ ಡ್ಯಾಂನ 35,318 ಕ್ಯೂಸೆಕ್ ಗೆ ಏರಿಕೆಯಾಗಿದೆ. 202 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಗುರುವಾರ ಡ್ಯಾಂನ ಒಳಹರಿವು 26,044 ಕ್ಯೂಸೆಕ್ ಇತ್ತು.
ಡ್ಯಾಂನ ನೀರಿನ ಮಟ್ಟ 174 ಅಡಿ 3 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 155. 3 ಅಡಿಯಿತ್ತು. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂನಲ್ಲಿ ಸರಿಸುಮಾರು 19 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಶುಕ್ರವಾರ ಕೂಡ ಭಾರೀ ಮಳೆ ಮುಂದುವರಿದಿದೆ. ಇದರಿಂದ ಡ್ಯಾಂನ ಒಳಹರಿವಿನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇದೇ ರೀತಿ ಮಳೆ ಮುಂದುವರಿದರೆ ಶೀಘ್ರದಲ್ಲಿಯೇ ಭದ್ರಾ ಜಲಾಶಯ ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ.