ಚಿಕ್ಕಜಾಜೂರು (ಚಿತ್ರದುರ್ಗ ಜಿಲ್ಲೆ): ಅಡಿಕೆ ಶೆಡ್ ನಿರ್ಮಿಸಲು ಕಬ್ಬಿಣದ ಕಂಬಿಯನ್ನು ಹಾಕುತ್ತಿರುವಾಗ ವಿದ್ಯುತ್ ಲೈನ್‌ಗೆ ಕಬ್ಬಿಣದ ಕಂಬಿ ತಗುಲಿ ಕಂಬಿಯನ್ನು ಹಿಡಿದಿದ್ದ ಮೂವರು ಮೃತಪಟ್ಟ ಘಟನೆ ಸಮೀಪದ ಕಾಳಘಟ್ಟ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಚಿಕ್ಕಜಾಜೂರು ಸಮೀಪದ ಗ್ಯಾರೆಹಳ್ಳಿ ಗ್ರಾಮದ ರಾಟೆರ ನಾಗರಾಜಪ್ಪ ಎಂಬುವರ ಪುತ್ರ ಜಿ.ಎನ್.ಶ್ರೀನಿವಾಸ್(35), ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಫಾರೂಕ್ (32), ನಾಸಿರ್ (34) ಮೃತಪಟ್ಟವರು.
ಘಟನೆ ವಿವರ: ಗ್ಯಾರೆಹಳ್ಳಿ ಗ್ರಾಮದ ರಾಟೆರ ನಾಗರಾಜಪ್ಪ ಎಂಬುವರು ಸಮೀಪದ ಕಾಳಘಟ್ಟ ಗ್ರಾಮದ ತಮ್ಮ ಜಮೀನಿನಲ್ಲಿ ಅಡಿಕೆ ಶೆಡ್ ನಿರ್ಮಿಸಲು ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಫೈರೂಜ್ ಎಂಬುವರಿಗೆ ಸಾಮಗ್ರಿ ಗುತ್ತಿಗೆ (ಮೆಟೀರಿಯಲ್ ಕಾಂಟ್ರ್ಯಾಕ್ಟ್) ನೀಡಿದ್ದರು. ಫೈರೂಜ್ ಶೆಡ್ ನಿರ್ಮಿಸಲು ಬುಧವಾರ ಬೆಳಗ್ಗೆ ತನ್ನ ಗ್ರಾಮದವರೇ ಆದ ಫಾರೂಕ್ ಮತ್ತು ನಾಸಿರ್ ಅವರನ್ನು ಕೆಲಸಕ್ಕೆ ಕಳುಹಿಸಿದ್ದರು.
ಅಡಿಕೆ ಶೆಡ್ ನಿರ್ಮಾಣಕ್ಕೆ ಕಬ್ಬಿಣದ ಕಂಬಿಯನ್ನು ನೆಡಲು ಗುಂಡಿ ತೋಡಿ, ಗುಂಡಿಯಲ್ಲಿ ಕಂಬಿಯನ್ನು ಹಾಕುತ್ತಿರುವಾಗ ಮೇಲೆ ಹಾದು ಹೋಗಿರುವ ವಿದ್ಯುತ್ ಪ್ರೈಮರಿ ತಂತಿಯನ್ನು ಗಮನಿಸದೆ ಮೂವರು ಕಬ್ಬಣದ ಕಂಬಿಯನ್ನು ಎತ್ತಿ ಇಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಮೂವರನ್ನು ಸಮೀಪದ ಮುತ್ತುಗದೂರು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಮೂವರನ್ನು ದಾವಣಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿಯೇ ಮೂವರು ಕೊನೆಯುಸಿರೆಳೆದಿದ್ದಾರೆ.
ವಿದ್ಯುತ್ ಅವಘಡದ ಸುದ್ದಿ ತಿಳಿಯುತ್ತಿದ್ದಮತೆ ಚಿಕ್ಕಜಾಜೂರಿನ ಬೆಸ್ಕಾಂ ಇಲಾಖೆಯ ಪ್ರಭಾರಿ ಶಾಖಾಧಿಕಾರಿ ಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಶೆಡ್ ನಿರ್ಮಿಸುವಾಗ ಕಾರ್ಮಿಕರು ಬೆಸ್ಕಾಂ ಇಲಾಖೆಗೆ ಯಾವುದೇ ಮಾಹಿತಿ ನೀಡದೆ, ಎಲ್ಸಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಶಾಖಾಧಿಕಾರಿ ಪಾಲಯ್ಯ ತಿಳಿಸಿದ್ದಾರೆ.
ದಾವಣಗೆರೆ ಆಸ್ಪತ್ರೆಯಲ್ಲಿ ಮೂವರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ನೀಡಿದ್ದಾರೆ. ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.