ದಾವಣಗೆರೆ (Davangere) : ಜ್ಞಾನಾರ್ಜನೆಯ ಜೊತೆಗೆ ಮಾನಸಿಕ ಆರೋಗ್ಯದ ಉದ್ದೇಶಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ ಬಿ.ಡಿ ಕುಂಬಾರ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಎಸ್.ಆರ್ ರಂಗನಾಥನ್ ಅವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕುಂಠಿತವಾಗುತ್ತಿದೆ. ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ, ಅಧ್ಯಯನ ಮಹತ್ವವನ್ನು ತಿಳಿಯುವ ಪ್ರಯತ್ನವೂ ಆಗುತ್ತಿಲ್ಲ. ಇದು ಆತಂಕಕಾರಿ ಸಂಗತಿ. ಪ್ರಸ್ತುತ ಜಗತ್ತು ಜ್ಞಾನಾಧಾರಿತವಾಗಿದೆ. ಅಧ್ಯಯನಶೀಲ ಗುಣವು ವ್ಯಕ್ತಿತ್ವದ ವಿಕಸನಕ್ಕೆ ನೆರವಾಗುತ್ತದೆ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ತಮ್ಮ ಜೀವದ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೀವನದ ಗುರಿಯನ್ನು ಸಾಧಸುವಲ್ಲಿ ಗ್ರಂಥಾಲಯವು ಪ್ರಮುಖ ಪಾತ್ರ ವಹಿಸುತ್ತದೆ. ಮಹಾನ್ ವ್ಯಕ್ತಿಗಳಾದ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್ ಅಂಬೇಡ್ಕರ್, ರಾಧಾಕೃಷ್ಣನ್ ಹಾಗೂ ಡಾ. ಎಸ್.ಆರ್ ರಂಗನಾಥನ್ ಅವರ ಜೀವನದ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇತಿಹಾಸ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೋ ವೆಂಕಟರಾವ್ ಪಲಾಟೆ ಮಾತನಾಡಿ, ಕಲಿತ ವಿದ್ಯೆ ಮತ್ತು ಅನುಭವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಗ್ರಂಥಾಲಯವು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ಸೇರಿದಂತೆ ಶೈಕ್ಷಣಿಕ ಕೇಂದ್ರಗಳ ಆತ್ಮವಿದ್ದಂತೆ. ವಿದ್ಯಾರ್ಥಿಗಳು ಓದಿನ ಅಭಿರುಚಿ ಬೆಳೆಸಿಕೊಂಡು, ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ವಿನಿಯೋಗಿಸಿದರೆ ಭವಿಷ್ಯವು ಉತ್ತಮವಾಗಿರುತ್ತದೆ ಎಂದು ಹೇಳಿದರು.
Read also : Davangere news : ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೋ .ಮಹಾಲಿಂಗಪ್ಪ ಅವರು ಭಾರತದ ಗ್ರಂಥಾಲಯ ಪಿತಾಮಹ ಡಾ.ರಂಗನಾಥನ್ ಅವರ ‘ದಿ ಫೈವ್ ಲಾಸ್ ಆಫ್ ಲೈಬ್ರರಿ’ ಕುರಿತು ವಿವರಿಸಿದರು. ಸಹಾಯಕ ಗ್ರಂಥಪಾಲಕಿ ಡಾ.ಜಿ.ನೀಲಮ್ಮ ಸ್ವಾಗತಿಸಿದರು. ಸಹಾಯಕ ಗ್ರಂಥಪಾಲಕ ಡಾ.ನಾಗರಾಜ್ ವಂದಿಸಿದರು. ಬೋರಣ್ಣ ಕಾರ್ಯಕ್ರಮ ನಿರೂಪಿಸಿದರು.