ದಾವಣಗೆರೆ : “ಗು” ಎಂದರೆ ಅಜ್ಞಾನ, “ರು” ಎಂದರೆ ಹೊಡೆದೋಡಿಸುವುದು ಎಂದರ್ಥ. ಅಜ್ಞಾನವನ್ನು ಹೊಡೆದೋಡಿಸುವವರೇ ಗುರು. ಗುರು ಎನ್ನುವುದು ಶಕ್ತಿ, ಸಿದ್ಧಾಂತವಾಗಿದೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿರುವ ಎಸ್‌ಜೆಎಂ ಶಾಲೆಯಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯಿಂದ ಗುರುಪೌರ್ಣಿಮೆ ಅಂಗವಾಗಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮ ಹಾಗೂ ಅಕಾಡೆಮಿಯ ಘಟಕ ಸ್ಥಾಪನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಶ್ರೀಗಳು ಮಾತನಾಡಿದರು.
ಮಾನವನ ಜೀವನದ ಗುರಿಯನ್ನು ತಿಳಿಸಲು ಜೀವನದಲ್ಲಿ ಗುರು ಬೇಕು. ಬಹಳ ಜನರಿಗೆ ನಾವು ಏತಕ್ಕಾಗಿ ಮನುಷ್ಯರಾಗಿ ಹುಟ್ಟಿದ್ದೇವೆ ಎಂಬುದೇ ಗೊತ್ತಿಲ್ಲ. ಈ ಮಾನವ ಜನ್ಮ ಇರುವುದೇ ಖುಷಿಯಾಗಿದ್ದು, ಸಂತೋಷದಿಂದ ಇದ್ದು ಹೋಗಲು ಎಂದು ತಿಳಿದುಕೊಂಡಿದ್ದಾರೆ. ಖುಷಿಯಾಗಿ ಜೀವನ ಸಾಗಿಸಿ ಆದರೆ ಜೊತೆಗೆ ಧರ್ಮದ, ಪುಣ್ಯದ ಒಳ್ಳೆಯ ಕಾರ್ಯಗಳನ್ನು ಮಾಡಿರಿ. ಜೀವನ ಎಂಬುದು ನೀರ ಮೇಲಿನ ಗುಳ್ಳಿಯಿಂದ್ದoತೆ. ಗಾಳಿಗೆ ಹಚ್ಚಿಟ್ಟ ದೀಪದಂತೆ. ಬೀದಿ, ಗಾಳಿಯಲ್ಲಿ ದೀಪ ಹಚ್ಚಿಟ್ಟರೆ ಅದು ಯಾವಾಗ ಆರುತ್ತೆ ಎಂಬುದು ಗೊತ್ತಿಲ್ಲ. ಹಾಗೆಯೇ ಮಾನವನ ಆಯುಷ್ಯ ಎಂಬುದು ಯಾವಾಗ ದೇವರು ನಮ್ಮನ್ನು ಕರೆದುಕೊಳ್ಳುತ್ತಾನೆ ಎಂಬುದು ಗೊತ್ತಿಲ್ಲ. ಇರುವುದರೊಳಗೆ ಒಳ್ಳೆಯ ಸತ್ಕಾರ್ಯಗಳನ್ನು ಮಾಡಬೇಕು. ಮಹಾತ್ಮರು ದೇವರನ್ನು ಮಾನವರಲ್ಲಿ ಕಾಣಿರಿ ಎಂದು ಹೇಳಿದ್ದಾರೆ. ಮಾನವರನ್ನು ದೇವರ ರೂಪದಲ್ಲಿ ಕಂಡಾಗ ಜಗತ್ತಿನಲ್ಲಿ ಯುದ್ಧ, ಜಗಳ, ಗಲಭೆಗಳು ನಡೆಯಲು ಸಾಧ್ಯವಿಲ್ಲ.
ನಾವೂ ಕೂಡಾ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಕ್ರಿಯಾಶೀಲರಾಗಬೇಕು ಎಂದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವುಗಳು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಮುಂದೆ ಗುರಿ, ಛಲ ಇರಬೇಕು, ಹಿಂದೆ ಗುರು ಇರಬೇಕು, ಇಚ್ಛಾಶಕ್ತಿ ಇರಬೇಕು. ಸಾಹಸ ತರಬೇತುದಾರ ಎನ್.ಕೆ.ಕೊಟ್ರೇಶ್ ನಿಮ್ಮ ಶಾಲೆಯಲ್ಲಿ ಸಾಹಸ ಕ್ರೀಡೆ, ಸಾಹಸ ಚಟುವಟಿಕೆಗಳನ್ನು ತಿಳಿಸಿ ಕೊಡುವ ಘಟಕವನ್ನು ನಿಮ್ಮ ಶಾಲೆಯಲ್ಲಿ ಮಾಡುತ್ತಿದ್ದಾರೆ ಎಂದರು.
Read also : ದಾವಣಗೆರೆ | ಹೃದಯಘಾತಕ್ಕೆ ಉದ್ಯಮಿ ಬಲಿ
ನಾನು, ನಮ್ಮ ಮನೆ, ನಮ್ಮ ಕುಟುಂಬ ಚೆನ್ನಾಗಿರಬೇಕು ಎಂಬ ಸ್ವಾರ್ಥದ ಪ್ರಪಂಚದಲ್ಲಿ ಇಡೀ ಪ್ರಪಂಚವೇ ಚೆನ್ನಾಗಿರಬೇಕು ಎಂದು ಬಯಸುವಂತಹ ಸಂಸ್ಕಾರ, ಸಂಸ್ಕೃತಿ ಇರುವ ದೇಶ ಎಂದರೆ ಅದು ನಮ್ಮ ಭಾರತ. ಇಡೀ ಪ್ರಪಂಚಕ್ಕೆ ನಮ್ಮ ಭಾರತ ದೇಶ ವಿಶ್ವಗುರು ಎನಿಸಿಕೊಂಡಿದೆ ಎಂದು ಹೇಳಿದರು.
ಅಕಾಡೆಮಿ ಕಾರ್ಯದರ್ಶಿ, ಸಾಹಸ ತರಬೇತುದಾರ ಎನ್.ಕೆ.ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಓದಿನ ಜೊತೆಗೆ ಸಾಹಸ ಕ್ರೀಡಗಳ ಬಗ್ಗೆ ಅರಿವು ಅಗತ್ಯವಾಗಿದೆ. ಸಾಹಸ ಕ್ರೀಡೆಗಳ ಬಗ್ಗೆ ತಿಳಿದಿದ್ದರೆ ತುರ್ತು ಸಂದರ್ಭದಲ್ಲಿ ರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಕಾಡೆಮಿಯಿಂದ ಡಾ.ಬಸವಪ್ರಭು ಸ್ವಾಮೀಜಿಯವರಿಗೆ ಸನ್ಮಾನಿಸಿ ಅಭಿನಂದನಾ ಪತ್ರವನ್ನು ನೀಡಿ ಗುರುವಂದನೆ ಸಲ್ಲಿಸಲಾಯಿತು.
ಶುಭಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಉಪನ್ಯಾಸಕ ಓ.ಅಜ್ಜಯ್ಯ ಸ್ವಾಗತಿಸಿದರು. ಎಸ್‌ಜೆಎಂ ಪಪೂ ಕಾಲೇಜಿನ ಪ್ರಾಚಾರ್ಯ ರೋಷನ್ ಜಮೀರ್ ವಂದಿಸಿದರು.
ಅಕಾಡೆಮಿ ಅಧ್ಯಕ್ಷ ರಾಜಶೇಖರ ಕೊಂಡಜ್ಜಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಯೋಗಾಶ್ರಮ ಟ್ರಸ್ಟಿನ ಟಿ.ಎಂ. ವೀರೇಂದ್ರ, ಚಂದ್ರಮೌಳಿ, ಕಾಶೀನಾಥ್, ಬೇತೂರು ಪ್ರಕಾಶ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.