ದಾವಣಗೆರೆ.ಜೂ.10: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಪೂರಕವಾಗಿ ಕೆಲಸ ಮಾಡಿದಾಗ ರೈತರ ಅಭಿವೃದ್ಧಿ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಜೆ.ಆರ್.ಷಣ್ಮುಖಪ್ಪ ಹೇಳಿದರು.
ಸೋಮವಾರ ದೇವರಹಳ್ಳಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಅಪೆಕ್ಸ್ ಬ್ಯಾಂಕ್ ಅನುದಾನದಡಿಯಲ್ಲಿ ನಿರ್ಮಾಣ ಮಾಡಿರುವ ಗೋದಾಮು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ಕಾಲಮಿತಿಯಲ್ಲಿ ಬೀಜ, ರಸಗೊಬ್ಬರ, ಇತರೆ ಕೃಷಿ ಪರಿಕರಗಳು ಮತ್ತು ಸಾಲ ಸೌಲಭ್ಯ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ಮತ್ತು ಮಧ್ಯಮಾವಧಿ, ದೀರ್ಘಾವಧಿಯ ಸಾಲ ಸೌಲಭ್ಯಗಳನ್ನು ರೈತರು ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿದರೆ ಹೆಚ್ಚು ಅನುಕೂಲವಾಗಲಿದೆ. ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತೇಯೋ ಅದೇ ಉದ್ದೇಶಕ್ಕೆ ಸಾಲ ವಿನಿಯೋಗವಾಗಬೇಕು. ಇಲ್ಲವಾದಲ್ಲಿ ಮರುಪಾವತಿ ಕಷ್ಟವಾಗಲಿದೆಯಲ್ಲದೇ ಸಹಕಾರ ಸಂಘಗಳು ಕೂಡ ನಷ್ಟ ಅನುಭವಿಸ ಬೇಕಾಗುತ್ತದೆ ಎಂದು ಹೇಳಿದರು.
ದಕ್ಷ ಆಡಳಿತ ಮಂಡಳಿ ಇದ್ದರೆ ಯಾವುದೇ ಸಹಕಾರ ಸಂಘಗಳು ಬೆಳೆಯಲು ಸಾಧ್ಯವಾಗಲಿದೆಯಲ್ಲದೇ ಆ ಭಾಗದ ರೈತರ ಅಭಿವೃದ್ಧಿ ಕೂಡ ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ 182 ಸಹಕಾರ ಸಂಘಗಳಿದ್ದು, ಈ ಎಲ್ಲ ಸಂಘಗಳು ರೈತರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರ, ಶಾಸಕರು ಯಾರೇ ಇರಲಿ ಅಭಿವೃದ್ಧಿ ಕಾರ್ಯಗಳು ನಿರಂತವಾಗಿ ನಡೆಯುತ್ತಿರಬೇಕು. ದೇವರಹಳ್ಳಿಯ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದ ಸನ್ನಿಧಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನನ್ನ ಅವಧಿಯಲ್ಲಿ 5 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಶಾಸಕರು ಕೂಡಲೇ ಇದರ ಕೆಲಸ ಆರಂಭಿಸಿ ಅವರೇ ಉದ್ಘಾಟನೆ ಮಾಡಿ ಜನಸೇವೆಗೆ ಸಮರ್ಪಿಸಬೇಕು ಎಂದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ಎನ್.ಸ್ವಾಮಿ, ಇತರರು ಮಾತನಾಡಿದರು. ಟಿನ್.ಶ್ರೀನಿವಾಸ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ದೇವರಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ,ಸ್ಥಳಿಯ ಸಹಕಾರ ಸಂಘದ ನಿರ್ದೇಶಕರಾದ ಎ.ಎಸ್.ಬಸವರಾಜಪ್ಪ, ಇ.ಜಿ.ರಾಮಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎ.ಆರ್.ರಂಗನಾಥ್, ಶ್ರೀಮತಿ ವಿಜಯಲಕ್ಷ್ಮೀ, ಜಿ,ಎಂ.ಗೊರಪ್ಪ, ಲಕ್ಷ್ಮಣ್, ಚನ್ನಗಿರಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿಜಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.