ದಾವಣಗೆರೆ ಜೂ.12 ; ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಕೇವಲ ಸರ್ಕಾರ, ಇಲಾಖೆಗಳ ಜೊತೆಗೆ ಸಾರ್ವಜನಿಕರು ಮತ್ತು ಪೋಷಕರು ಸಹ ಸ್ವಯಂ ಪ್ರೇರಣೆಯಿಂದ ನಿರ್ಮೂಲನೆಗೆ ಬದ್ದರಾಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನಾ ಯೋಜನಾ ಸೊಸೈಟಿ ಅಧ್ಯಕ್ಷರಾದ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು
ನಗರದ ಎಸ್.ಪಿ.ಎಸ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ , ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕಾರ್ಮಿಕತೆ ಮಕ್ಕಳ ಬಾಲ್ಯ ಅವರ ಸಾಮಥ್ರ್ಯ, ಘನತೆಯನ್ನು ಕಸಿದುಕೊಳ್ಳುವ ಮತ್ತು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಾಮಾಜಿಕವಾಗಿ ಅಥವಾ ನೈತಿಕವಾಗಿ ಹಾನಿಕಾರಕವಾಗಿದೆ. ಆದ್ದರಿಂದ ಮಕ್ಕಳು ಬಾಲ್ಯದಲ್ಲಿಯೇ ಶಾಲೆಗೆ ಬಂದು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಆದರೆ ವಿವಿಧ ಕಾರಣಗಳಿಗಾಗಿ ಪಾಲಕರು ಅವರನ್ನು ಶಾಲೆ ಬಿಡಿಸಿ ಚಿಕ್ಕ ವಯಸ್ಸಿನಲ್ಲಿ ಯಾವುದಾದರೂ ದುಡಿಮೆಗೆ ಸೇರಿಸುತ್ತಾರೆ, ಇದು ತಪ್ಪಬೇಕಿದೆ.
ಸಂವಿಧಾನ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಹಕ್ಕು ನೀಡಿದೆ, ಆದ್ದರಿಂದ ಎಲ್ಲಿಯಾದರೂ ಮಕ್ಕಳು ಕೆಲಸ ಮಾಡುವುದು ಕಂಡು ಬಂದರೆ ಅವರನ್ನು ಕೆಲಸದಿಂದ ಬಿಡಿಸಿ ಶಾಲೆಗೆ ಕಳಿಸಬೇಕು. ಇದನ್ನು ಸರ್ಕಾರಿ ಇಲಾಖೆ ಅಧಿಕಾರಿಗಳು ಮಾತ್ರವೇ ಮಾಡಬೇಕೆಂದು ಜನತೆ ಸುಮ್ಮನಿರಬಾರದು, ಸಾರ್ವಜನಿಕರು ಸಹ ಅಭಿವೃದ್ಧಿಗೆ ಮುಂದಾಗಿ 18 ವರ್ಷದೊಳಗಿನ ಮಕ್ಕಳ ಶೋಷಣೆ ದೌರ್ಜನ್ಯ, ದಬ್ಬಾಳಿಕೆ, ಲೈಂಗಿಕ ಕಿರುಕುಳ ಅವರ ಅಭಿಪ್ರಾಯ ಮತ್ತು ಸ್ವಾತಂತ್ರ್ಯಕ್ಕೆ ಒತ್ತಡ ಇರುವುದು ಬಲತ್ಕಾರ ಮತ್ತು ಇಚ್ಛಾಶಕ್ತಿ ವಿರುದ್ಧ ಒತ್ತಡ ನಿಷೇಧಿಸಿ 18 ವರ್ಷದ ತನಕ ಮಕ್ಕಳನ್ನು ಮಕ್ಕಳು ಎಂದು ಪರಿಗಣಿಸಿ ಅವರಿಗೆ ಪ್ರೀತಿ, ವಾತ್ಸಲ್ಯ, ಬಾಲ್ಯ,ಶಿಕ್ಷಣ ಮತ್ತು ರಕ್ಷಣೆ ನೀಡಿ ಮಕ್ಕಳ ಕಾನೂನುಗಳನ್ನು ಗೌರವಿಸಿ ಅವರ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ತಿಳಿಸಿದರು.
ಪಾಲಕರು ಮಕ್ಕಳನ್ನು ದುಡಿಮೆಗೆ ಕಳುಹಿಸಿದೆ ಶಿಕ್ಷಣದ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಮತ್ತು ಅವರಿಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿ ತಮ್ಮ ಮಕ್ಕಳು ಸಹ ಮುಂದೆ ಬರುವಂತೆ ಮಾಡಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಮಾ.ಕೆರೆಣ್ಣನವರು ಉದ್ಘಾಟಿಸಿ ಮಾತನಾಡಿ, ಬಾಲಕಾರ್ಮಿಕ ಪದ್ದತಿ ತಡೆಯಲು ವಿಶ್ವದೆಲ್ಲೆಡೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಸ್ವಾರ್ಥ, ದುರಾಸೆ ಹಾಗೂ ದುರುದ್ದೇಶದಿಂದ ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಗೆ ದೂಡಲಾಗುತ್ತಿದೆ, ಇದು ಅಪರಾಧ ಎಂದರು.
ಬಾಲಕಾರ್ಮಿಕ ಪದ್ದತಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 1986ರಲ್ಲಿ ಕಾಯ್ದೆ ಜಾರಿಗೊಳಿಸಿದೆ. ಕಾರ್ಖಾನೆ ಹಾಗೂ ಸ್ಫೋಟಕ ವಸ್ತುಗಳ ತಯಾರಿಕಾ ಉದ್ದಿಮೆಗಳಲ್ಲಿ ಮಕ್ಕಳನ್ನು ತೊಡಗಿಸಿಕೋಳ್ಳುವುದು ಕಾನೂನು ಅಪರಾಧವಾಗಿದೆ. ಆದ್ದರಿಂದ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಮಕ್ಕಳಿಂದ ಬಲವಂತವಾಗಿ ಕಿತ್ತುಕೊಳ್ಳದೆ, ಅವರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಒದಗಿಸಬೇಕು. ಅವರಿಗೆ ಪುನರ್ವಸತಿ ಕಲ್ಪಿಸಿ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್ ಸ್ವಾಗತಿಸಿದರು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೊಟ್ರೇಶ್ ಜಿ. ಬಾಲ ಕಾರ್ಮಿಕ ಪದ್ದತಿ ವಿರೋಧಿ ಪ್ರತಿಜ್ಞೆ ಭೋದಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಕೆ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ರಾಮನಾಯ್ಕ, ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ಎಸ್.ಆರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್. ಅರುಣಕುಮಾರ್, ಮಂಡಕ್ಕಿ ಭಟ್ಟಿ ಮಾಲೀಕರ ಸಂಘದ ಅಧ್ಯಕ್ಷರು ಅಕ್ಟರ್ ಆಲಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಈ.ಎನ್. ಪ್ರಸನ್ನಕುಮಾರ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲು ಬಾಲ ಕಾರ್ಮಿಕ ಪದ್ದತಿ ವಿರೋಧಿಸಿ ಶಾಲಾ ಮಕ್ಕಳಿಂದ ಜಾಥಾ ನೆಡೆಯಿತು.