Kannada News | Dinamaana.com | 21-05-2024
ದಾವಣಗೆರೆ, ಮೇ.21 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಈ ವರ್ಷ ಜಿಲ್ಲೆಯಲ್ಲಿನ 20 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿಕ್ಷಣ ಫೌಂಡೇಷನ್ ಸಿ.ಇ.ಓ. ಲೆಪ್ಟಿನೆಂಟ್ ಕಮಾಂಡರ್ ಸುನಿಲ್.ಎನ್ ರವರು ಮತ್ತು ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ 6000 ಸಾವಿರ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ 4000 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಡಿಜಿಟಲೀಕರಣ ಮಾಡುವ ಕಾರ್ಯ ಮುಂದುವರೆದಿದೆ. ಈ ವರ್ಷ ರಾಜ್ಯದ 1000 ಗ್ರಂಥಾಲಯಗಳಿಗೆ ಡಿಜಿಟಲೀಕರಣ ಅಳವಡಿಕೆ ಹಾಗೂ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷ 61 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲಿಕರಣದ ಮೂಲಕ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಜೊತೆಗೆ ಈ ವರ್ಷ 20 ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಈ ಕಾರ್ಯಕ್ರಮವನ್ನುಅನುಷ್ಠಾನ ಮಾಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲಗಳನ್ನು ಅಭಿವೃದ್ಧಿಪಡಿಸುವುದು, ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಲ್ಯಾಪ್‍ಟಾಪ್, ಆಂಡ್ರಾಯ್ಡ್ ಮೊಬೈಲ್. ಮಾನಿಟರ್, ಟಿವಿ, ಇಂಟರ್‍ನೆಟ್ ಸಂಪರ್ಕ ಸೇರಿ ಮೂಲ ತಾಂತ್ರಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಶಿಕ್ಷಣ ಫೌಂಡೇಷನ್ ಸಿ.ಇ.ಓ. ಲೆಪ್ಟಿನೆಂಟ್ ಕಮಾಂಡರ್ ಸುನಿಲ್.ಎನ್ ಮಾತನಾಡಿ, ಶಿಕ್ಷಣ ಪೀಡಿಯಾ ಆಪ್ ಮೂಲಕ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಾಠ, ನೋಟ್ಸ್, ಸಂಬಂಧಿಸಿದ ವಿಡಿಯೋ, ಚಿತ್ರಗಳನ್ನು ಒದಗಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಿವೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಣ್ಣ ಕಥೆಗಳಿವೆ. ಅಲ್ಲದೇ ಯುವಕರು ಡಿಜಿಟಲ್ ಕೌಶಲಗಳನ್ನು ಬೆಳೆಸಿಕೊಳ್ಳಲು ಬೇಕಾದ ವ್ಯವಸ್ಥೆಯಿದೆ.
ವಿದ್ಯಾರ್ಥಿಗಳು ತಮ್ಮ ಸದಸ್ಯತ್ವ ಸಂಖ್ಯೆಯನ್ನು ನಮೂದಿಸುವ ಮೂಲಕ ಈ ಆಪ್‍ನ ಪ್ರಯೋಜನ ಪಡೆಯಬಹುದಾಗಿದೆ. ಜತೆಗೆ ಆನ್‍ಲೈನ್ ಸೇವೆಗಳು, ಅರ್ಜಿ ಸಲ್ಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲಿ ಲಭ್ಯ ಹಾಗೂ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ಡಿಜಿಟಲ್ ಸ್ಕಿಲ್ಸ್ ಗೆ ಸಂಬಂಧಿಸಿದ ಮಾಹಿತಿ ಅಧಿವೇಶನವನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ಯುವಕರಿಗೆ ಕೃತಕ ಬುದ್ದಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕುರಿತು ಈ ವರ್ಷ ಮಾಹಿತಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಫೌಂಡೇಶನ್ ಆಯ್ಕೆಮಾಡಿಕೊಂಡ ಎಲ್ಲಾ ಗ್ರಾಮ ಪಂಚಾಯತ್‍ನ ಗ್ರಂಥಾಲಯಗಳಲ್ಲಿ ಡಿಜಿಟಲ್ ಸ್ಕಿಲ್ಸ್, ಶೈಕ್ಷಣಿಕ ವರ್ಷದ ಪಠ್ಯಪುಸ್ತಕದ ತರಗತಿಗಳು ಹಾಗೂ ಪಠ್ಯಾಂಶಗಳು, ವೃತ್ತಿ ಮಾರ್ಗದರ್ಶನ ವಿಷಯಗಳ ಕುರಿತು ಆನ್‍ಲೈನ್, ಆಫ್‍ಲೈನ್ ತರಬೇತಿಗಳ ಅಧಿವೇಶನಗಳನ್ನು ನಡೆಸುತ್ತಿದೆ. ಈ ತರಬೇತಿ ಅವಧಿಗಳು ಆಫ್‍ಲೈನ್ ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತವೆ, ಇದನ್ನು ಯುವಕರು ಮತ್ತು ಮಕ್ಕಳು ಯಾವುದೇ ಸ್ಮಾರ್ಟ್ ಪೋನ್‌ನಲ್ಲಿ ನೋಡಬಹುದಾಗಿದೆ.
ಫೌಂಡೇಶನ್ ಹೆಚ್ಚುವರಿಯಾಗಿ ಆಂಡ್ರಾಯ್ಡ್ ಆಧಾರಿತ ಸಾಪ್ಟ್‍ವೇರ್ ಅನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಪ್ರತಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ನಡೆಯುತ್ತಿರುವ ಕೆಲಸವನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಶಿಕ್ಷಣ ಫೌಂಡೇಷನ್ ಸಂಸ್ಥೆಯ ಶಂಭುಲಿಂಗ, ಗುರುಪಾದಪ್ಪ, ಸುರೇಶ್ ನಾಯ್ಕ ಹಾಗೂ ಇನ್ನಿತರರು ಭಾವಹಿಸಿದ್ದರು.