ದಾವಣಗೆರೆ (Davanagere ) : ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಮುನ್ನ ಶಿಕ್ಷಕರು ಮೌಲ್ಯಗಳನ್ನು ಆಚರಿಸುತ್ತಿರಬೇಕು. ಬಾಲ್ಯದಲ್ಲಿಯೇ ಅಳಿಸಲಾಗದ ಮೌಲ್ಯಗಳನ್ನು ಬಿತ್ತಿದರೆ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಎಚ್.ಕೆ.ಲಿಂಗರಾಜು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶ್ರೀಸತ್ಯಸಾಯಿ ಸಭಾಂಗಣದಲ್ಲಿ ಶನಿವಾರ ಈಶ್ವರಮ್ಮ ಶಾಲೆ, ಜ್ಞಾನಜ್ಯೋತಿ ಶಿಕ್ಷಕಿಯರ ವೇದಿಕೆ, ವನಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ 100 ಜನ ಶಿಕ್ಷಕರಿಗೆ ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮೌಲ್ಯಗಳು ಎಷ್ಟರ ಮಟ್ಟಿಗೆ ಜನಜನಿತವಾಗಿದ್ದವು ಎಂದರೆ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ, ಆತ್ಮಶಕ್ತಿ, ಆತ್ಮವಿಶ್ವಾಸ, ಕೆಚ್ಚು, ದೃಢ ಸಂಕಲ್ಪ ಮೊದಲಾದ ಸಾವಿರಾರು ಮೌಲ್ಯಗಳನ್ನು ಅಳವಡಿಸಿಕೊಂಡ ಅನೇಕ ದೇಶಭಕ್ತರನ್ನು ಕಾಣುತ್ತೇವೆ. 84 ಮೌಲ್ಯಗಳನ್ನು 1 ರಿಂದ 10ನೇ ತರಗತಿಯ ಪಠ್ಯದಲ್ಲಿ ಅಳವಡಿಸಲಾಗಿದೆ. ಮೌಲ್ಯಗಳನ್ನು ಆಳವಾಗಿ ಬಿತ್ತಬೇಕು. ತಾಯಿ ಬೇರು ಆಳವಾಗಿದ್ದರೆ ಮರ ಎತ್ತರವಾಗಿರುತ್ತದೆ. ಮರ ಎತ್ತರವಾಗಿ, ಹೆಮ್ಮರವಾಗಿ ಬೆಳೆದಿರುವುದೋ ಅಷ್ಟು ಆಳವಾದ ಬೇರುಗಳನ್ನು ಬಿಟ್ಟಿರುತ್ತದೆ. ಆಳವಾದ ಜ್ಞಾನ ಸಶಕ್ತ ನಾಗರಿಕರನ್ನು ನಿರ್ಮಿಸುತ್ತದೆ ಎಂದರು.
ಮೌಲ್ಯಗಳಿಲ್ಲದ ಬದುಕು ಪ್ರಾಣಿಗಳಿಗಿಂತಲೂ ಕಡೆಯಾಗುತ್ತದೆ. ಇಂದಿನ ಮಕ್ಕಳಿಗೆ ಮೌಲ್ಯ ಶಿಕ್ಷಣ ಅಗತ್ಯ. ಮಕ್ಕಳ ವಿಕಾಸವಾದಾಗ ಮಾತ್ರ ಅದು ದೇಶದ ವಿಕಾಸ ಸಮಾಜಕ್ಕೆ ಮೌಲ್ಯವರ್ಧನೆಯಾಗುವಂತಹ ಕೆಲಸ ಎಂದರು.
ಈಶ್ವರಮ್ಮ ಶಾಲೆಯ ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಶ್ವರಮ್ಮ ಶಾಲೆ ಸುಮಾರು 42 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದರಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈಶ್ವರಮ್ಮ ಶಾಲೆಯ ಸಂಸ್ಥಾಪಕರಾದ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕøತರಾದ ಬಿ.ಆರ್.ಶಾಂತಕುಮಾರಿಯವರ ಸ್ಮರಣಾರ್ಥವಾಗಿ ಈ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ಪ್ರತಿ ವರ್ಷವೂ ನೂರಾರು ಶಿಕ್ಷಕರಿಗೆ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಆರ್.ಸುಜಾತ ಕೃಷ್ಣ, ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಇಂತಹ ಸಂಸ್ಕøತಿ ಬೆಳೆಸಿಕೊಳ್ಳಬೇಕೆಂದರೆ ಮೌಲ್ಯಗಳನ್ನು ಮೊದಲು ಮಕ್ಕಳಲ್ಲಿ ಬಿತ್ತಬೇಕು. ಪ್ರಪ್ರಥಮವಾಗಿ ಕರ್ನಾಟಕದಲ್ಲಿ ನಾಗಮ್ಮ ಕೇಶವಮೂರ್ತಿಯವರು ಮೌಲ್ಯಶಿಕ್ಷಣ ತರಬೇತಿ ಶಿಬಿರ ನಡೆಸಿದವರು. ಮೌಲ್ಯಗಳೇ ಉಸಿರಾಗಿ ಆದರ್ಶ ಜೀವನ ನಡೆಸಿದ ಶಾಂತಕುಮಾರಿಯವರ ಸ್ಮರಣಾರ್ಥ ಈ ಕಾರ್ಯಾಗಾರ ನಡೆಸುತ್ತಿದ್ದೇವೆ. ಈಶ್ವರಮ್ಮ ಶಾಲೆಯ ಉದ್ದೇಶವೇ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸುವುದಾಗಿದೆ ಎಂದು ತಿಳಿಸಿದರು.
Read also : Davanagere Health Department | ಅರೋಗ್ಯ ಬಗ್ಗೆ ಜಾಗೃತಿ ಮೂಡಿಸಿ : ಡಾ. ಗಂಗಾಧರ್
ವಿಶ್ರಾಂತ ಪ್ರಾಧ್ಯಾಪಕರಾದ ಎಚ್.ಎಸ್.ಮಂಜುನಾಥ್, ‘ಶಿಕ್ಷಣ ಮತ್ತು ಮೌಲ್ಯಗಳು’, ಕನ್ನಡ ಭಾಷಾ ಶಿಕ್ಷಕಿ ಬಿ.ಶ್ರೀದೇವಿ, ವಿಜ್ಞಾನ ಶಿಕ್ಷಕಿ ಸವಿತಾ ಎನ್.ಸ್ವಾಮಿ, ‘ಪಾಠಗಳಲ್ಲಿ ಮೌಲ್ಯಗಳ ಸಮನ್ವಯ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ವಿಶ್ರಾಂತ ಪ್ರಾಚಾರ್ಯರಾದ ಎ.ಪಿ.ಸುಜಾತ, ಮುಖ್ಯ ಶಿಕ್ಷಕಿ ಉಮಾದೇವಿ ಮಾತನಾಡಿದರು.
ಜ್ಞಾನಜ್ಯೋತಿ ವನಿತಾ ಶಿಕ್ಷಕಿಯ ವೇದಿಕೆ ಅಧ್ಯಕ್ಷರಾದ ಜಿ.ಎಸ್.ಶಶಿರೇಖಾ, ಜಯಮ್ಮ ನೀಲಗುಂದ, ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್. ವಿಜಯಾನಂದ್ ಇನ್ನಿತರರಿದ್ದರು.