ದಾವಣಗೆರೆ (Davanagere): ‘ಅಧಿಕಾರ, ಆಸ್ತಿ, ಐಶ್ವರ್ಯಕ್ಕಿಂತ ಪ್ರಾಮಾಣಿಕತೆ, ಸೇವೆ, ತ್ಯಾಗದಿಂದ ಶಾಶ್ವತವಾದ ಜನಮನ್ನಣೆ ಗಳಿಸಬಹುದು ಎಂಬುದನ್ನು ಜಗತ್ತಿಗೆ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ’ ಎಂದು ನಿವೃತ್ತ ಪ್ರಾಚಾರ್ಯ, ಚಿಂತಕ ಪ್ರೊ.ಎಚ್. ಲಿಂಗಣ್ಣ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ದೇಶದ ಜನರು ಬಡತನದಿಂದ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಸಂದರ್ಭದಲ್ಲಿ ಹಸಿರು ಕ್ರಾಂತಿ ಮೂಲಕ ಹಸಿವಿನ ಹಂಗು ತೊರೆಯುವಂತೆ ಮಾಡಿದರು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮಾನತೆಯ ಮೂಲಕ ಸಮಸಮಾಜ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದರು.
‘ಸಮಾಜ ಸುಧಾರಣೆ ಮೂಲಕ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಳದುಡಿಯುವ ವರ್ಗದ ಏಳಿಗೆಯನ್ನು ಸದಾ ಬಯಸುತ್ತಿದ್ದರು ಎಂದು ತಿಳಿಸಿದರು.
‘ಬಾಬೂಜಿ ಅವರಂತಹ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ‘ಬಾಬು ಜಗಜೀವನರಾಂ ಅವರು ದೇಶ ಕಂಡ ದಕ್ಷ ಆಡಳಿತಗಾರರಾಗಿದ್ದರು. ಹಸಿರು ಕ್ರಾಂತಿಯ ಹರಿಕಾರರಾಗಿ ಜನಸಾಮಾನ್ಯರು ಎಂದಿಗೂ ಮರೆಯದ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದರು ಎಂದು ಹೇಳಿದರು.
ಕುಲಸಚಿವ ಶಬ್ಬೀರ್ ಬಾಷಾ ಗಂಟಿ, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ ಉಪಸ್ಥಿತರಿದ್ದರು.
Read also : ಅಪಘಾತ : ಬೆಳಗಾವಿ ಮೂಲದ ಮೂವರು ಸಾವು
ಬಾಬು ಜಗಜೀವನ ರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ರಾಮಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರವೀಣ ಟಿ.ಎಲ್ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಬಡಿಗೇರ ವಂದಿಸಿದರು.