ದಾವಣಗೆರೆ:
ರೈತರಿಗೆ ಕಳಪೆ ಗುಣಮಟ್ಟದ ಉಪಕರಣ ವಿತರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ವಾಪಾಸ್ ಕಳುಹಿಸಿದ ಘಟನೆ ನಡೆಯಿತು.
ತಾಲೂಕಿನ ಆನಗೋಡು ಗ್ರಾಮದ ಮರಳುಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಡಾ. ಬಿ. ಆರ್ .ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಬವ ಅಭಿವೃದ್ಧಿ ನಿಗಮದಡಿ 2020-2022 ನೇ ಸಾಲಿನಲ್ಲಿ ಕೊರೆದಿದ್ದ ಬೋರ್ ವೆಲ್ ಗಳ 32 ಫಲಾನುಭವಿ ರೈತರಿಗೆ ಅಧಿಕಾರಿಗಳು ಪಂಪ್ ಸೆಟ್ ಮೋಟಾರು, ಪೈಪ್ ಗಳು ಮತ್ತು ಉಪಕರಣಗಳನ್ನು ವಿತರಿಸಿದರು.
ಕಳಪೆ ಉಪಕರಣ ನೀಡಿದರೆ ಗಮನಕ್ಕೆ ತನ್ನಿ
ಆದರೆ ಕಳಪೆ ಗುಣಮಟ್ಟದ ಉಪಕರಣಗಳನ್ನು ವಿತರಿಸಿರುವುದನ್ನು ಗಮನಿಸಿದ ರೈತರು ಕೂಡಲೇ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿತರಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಪಂಪ್ ಸೆಟ್ ಮೋಟಾರು, ಪೈಪ್ ಗಳು, ಉಪಪಕರಣಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬೆಂಗಳೂರಿನ ಯೂನಿಟೆಡ್ ಇಂಜಿನಿಯರ್ ಏಜೆನ್ಸಿಯಿಂದ ವಿತರಿಸಲು ತಂದಿದ್ದ ಐಎಸ್ ಐ ಮಾರ್ಕ್ ಇಲ್ಲದ ಪಂಪ್ ಸೆಟ್ ಮೋಟಾರು, ಪೈಪ್ ಗಳು, ಉಪಕರಣಗಳನ್ನು ಕಂಡ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೋರ್ ವೆಲ್ ಕೊರೆಯುವುದು, ಪಂಪ್ ಸೆಟ್ ಮೋಟಾರು, ಪೈಪ್, ಉಪಕರಣಗಳ ಒಟ್ಟು ಸೌಲಭ್ಯ ಕಲ್ಪಿಸಲು ಸರ್ಕಾರ ಒಬ್ಬ ರೈತ ಫಲಾನುಭವಿಗೆ 5 ಲಕ್ಷ ರೂ. ಕೊಡುತ್ತದೆ. ಆದರೆ ಇಲ್ಲಿ ಕಳಪೆ ಗುಣಮಟ್ಟದ ಪಂಪ್ ಸೆಟ್ ಮೋಟಾರು, ಪೈಪ್, ಉಪಕರಣ ವಿತರಿಸುತ್ತಿದ್ದಿರಿ. ಈ ಉಪಕರಣಗಳನ್ನು ಖರೀದಿಸಿದ ಸರಿಯಾದ ಬಿಲ್ ಇಲ್ಲ. ಐಎಸ್ಐ ಮಾರ್ಕ್ ಇಲ್ಲ. ಒಬ್ಬ ರೈತನಿಗೆ ಐದು ಪೈಪ್, ಇನ್ನೊಬ್ಬ ರೈತನಿಗೆ ಮೂರು ಪೈಪ್ ಕೊಡುತ್ತಿದ್ದಿರಿ. ರೈತರಿಗೆ ಎಷ್ಟೆಷ್ಟು ಪೈಪ್ ಕೊಡಬೇಕೆಂಬ ಮಾಹಿತಿ ಇಲ್ಲ ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಮಾನತು ಮಾಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸು
ರೈತರು ಗುಣಮಟ್ಟದ ಉಪಕರಣಗಳನ್ನು ವಿತರಿಸಿದರೆ ಮಾತ್ರ ಪಡೆಯಬೇಕು. ಇಲ್ಲದಿದ್ದರೆ, ನನ್ನ ಗಮನಕ್ಕೆ ತಂದರೆ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ. ಅಲ್ಲದೇ ಅಂಬೇಡ್ಕರ್, ಆದಿ ಜಾಂಬವ, ವೀರಶೈವ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಡಿ ಈ ಹಿಂದೆ ಇಂತಹ ಕಳಪೆ ಗುಣಮಟ್ಟದ ಉಪಕರಣಗಳನ್ನು ವಿತರಿಸಿರುವ ಬಗ್ಗೆ ನನ್ನ ಗಮನಕ್ಕೆ ತಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ರೈತರಿಗೆ ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಡಿಎಂ ಬಸವರಾಜಪ್ಪ, ಫೀಲ್ಡ್ ಆಫೀಸರ್ ಮರಿಸ್ವಾಮಿ, ಕರಿಬಸಪ್ಪ, ಬಸವರಾಜ್, ನಸರುಲ್ಲಾ, ಗ್ರಾಪಂ ಸದಸ್ಯರಾದ ದೇವಣ್ಣ, ಬಸಣ್ಣ, 32 ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.