ದಾವಣಗೆರೆ: ಕನ್ನಡ ನಾಡಿನಲ್ಲಿ ಇಂಗ್ಲಿಷ್ ನಂತರ ಹಿಂದಿಯ ವಸಾಹತೀಕರಣದ ಪ್ರಭಾವ ಮತ್ತು ಒತ್ತಡ ಹೆಚ್ಚಾಗುತ್ತಿದೆ. ಬುದ್ಧಿಪೂರ್ವಕವಾಗಿ ಚಿಂತನೆಯ ಮೂಲಕ ಕನ್ನಡದ ಮಕ್ಕಳು ಅಭಿಮಾನಪಡುವಂತೆ ಭಾಷೆ ಕಟ್ಟಬೇಕು. ವಸಾಹತೀಕರಣವು ಕನ್ನಡ ನಾಡು, ನುಡಿ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಸೃಷ್ಟಿಸಲಿದೆ ಎಂದು ಪೂರ್ವವಲಯ ಐಜಿಪಿ ಮತ್ತು ಸಾಹಿತಿ ಡಾ.ಬಿ.ಆರ್.ರವಿಕಾಂತೇಗೌಡ ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಪೀಠದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣದ ಪರಿಣಾಮದಿಂದ ನಾಡಿನಲ್ಲಿ ಅನ್ಯಭಾಷೆಗಳ ದಾಳಿ ಹೆಚ್ಚಾಗಿ, ಕನ್ನಡಕ್ಕೆ ಅಪಾಯ ಬಂದೊದಗಿದೆ. ಪರಿವರ್ತನೆಗೆ ಕಾಲ ಸನ್ನಿಹಿತವಾಗಿದೆ. ಕನ್ನಡಿಗರು ಕನ್ನಡ ಬಳಸದಿದ್ದರೆ ಬೇರೆಯವರು ಹೇಗೆ ಬಳಸಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿಗದಿತ ಸಂದಿಗ್ದ ಸಮಯದಲ್ಲಿ ಕನ್ನಡವನ್ನು ಪ್ರಜ್ಞಾಪೂರ್ವಕವಾಗಿ ಉಳಿಸದಿದ್ದರೆ ಕಿಲುಬಾಗಿ ಹೋಗುತ್ತದೆ ಎಂದರು.
ಸಹನೆ, ಸಹಭಾಗಿತ್ವ ಮತ್ತು ಸಮದೃಷ್ಟಿಗಳು ಕನ್ನಡದಲ್ಲಿ, ಕನ್ನಡಿಗರ ಮನೆ, ಮನದಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಈ ಸಹನೆ, ವಿವೇಕಗಳು ಆಧುನಿಕತೆಯ ವ್ಯಾಮೋಹದಡಿ ಸಿಲುಕಿ ದೂರವಾಗುತ್ತಿವೆ. ಅಸಹನೆ, ಘರ್ಷಣೆಯನ್ನು ಬಿಟ್ಟು ಮತ್ತೆ ವಿವೇಕ ಕನ್ನಡವನ್ನು ಕಟ್ಟಬೇಕಾಗಿದೆ. ಗುಲಾಮಗಿರಿಯ ಮನೋಭಾವದ ವಿರುದ್ಧ ನಿಲ್ಲಬೇಕಾಗಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು.
ನಾಡಿನಲ್ಲಿ ಭಾಷೆಯ ಜೊತೆಗೆ ಪರಿಸರವೂ ಹಾಳಾಗುತ್ತಿದೆ. ಕಾಡು ದಿನದಿನಕ್ಕೂ ಕಡಿಮೆಯಾಗುತ್ತಿದೆ. ಪರಿಸರ ಇಲ್ಲದಿದ್ದರೆ ಕನ್ನಡವೂ ಇಲ್ಲ, ಕನ್ನಡ ನಾಡೂ ಉಳಿಯಲ್ಲ. ಆದ್ದರಿಂದ ಕನ್ನಡದ ಜೊತೆಗೆ ಪರಿಸರದ ಸಂರಕ್ಷಣೆಯೂ ಅತಿ ತುರ್ತಾದ ಕೆಲಸವಾಗಿದೆ. ಇಲ್ಲವಾದರೆ ಇನ್ನೊಬ್ಬರ ಸೆರಗಿನಲ್ಲಿ ಬದುಕಬೇಕಾಗುತ್ತದೆ ಎಂದು ತಿಳಿಸಿದರು.
ಕನ್ನಡದ ಮನಸ್ಸುಗಳು ಒಂದಾಗಿ, ಇಚ್ಛಾಶಕ್ತಿಯಿಂದ ಕನ್ನಡವನ್ನು ಬಳಸಬೇಕು. ಯಂತ್ರಾಂಶ, ತಂತ್ರಾಂಶಗಳಲ್ಲಿ ಕನ್ನಡವನ್ನೇ ಬಳಸಬೇಕು. ಸರ್ಕಾರ, ವಿಶ್ವವಿದ್ಯಾಲಯಗಳು, ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಕನ್ನಡ ಭಾಷೆಗೆ, ಭಾಷಿಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಆಳುವವರು ಮಾಡಬೇಕು. ಅದರ ಜೊತೆಗೆ ಪ್ರತಿಯೊಬ್ಬ ಕನ್ನಡಿಗನೂ ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಎಂಬುದು ಕೇವಲ ಭಾಷೆ, ಕರ್ನಾಟಕ ಎಂಬುದು ನೆಲವಲ್ಲ, ಅದೊಂದು ವಿವೇಕ, ಅಭಿಮಾನ, ಸಾಹಿತ್ಯ, ಸಂಗೀತ, ಮನಸ್ಸು, ಭಾವನೆ ಮತ್ತು ಅಂತಃಸತ್ವ ಅದರೊಳಗೆ ಅಡಗಿದೆ. ಕನ್ನಡಿಗರ ಹೆಮ್ಮೆಯ ಸಂಕೇತವೂ ಆಗಿದೆ ಎಂದು ಅವರು ಹೇಳಿದರು.
Read also : ಆರೋಗ್ಯಕ್ಕಿಂತ ಸಂಪತ್ತು ಮತ್ತೊಂದಿಲ್ಲ’: ಡಾ.ಮೂಗನಗೌಡ ಪಾಟೀಲ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಕನ್ನಡ ಉಳಿಸಲು ಸ್ವಾಭಿಮಾನದ ಮನಸ್ಸು ಅತ್ಯಗತ್ಯ. ಆದರೆ ಅನ್ಯಭಾಷೆಗಳ ಬಗೆಗಿನ ಅತಿಯಾದ ಆಸಕ್ತಿಗೆ ಕನ್ನಡವನ್ನು ಕನ್ನಡಿಗರನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಬೇರೆ ಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡಿ, ಅವರೂ ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಿದಾಗ ಭಾಷೆ ಉಜ್ವಲವಾಗಿ ಬೆಳೆಯುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಆವರಣದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಕನ್ನಡ ಹಾಡು, ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಟ್ಟೂರಿನ ಪದ್ಮಣ್ಣ ಹಿರೇಗಿಡ್ಡಪ್ಪನವರ್ ವಿಶೇಷ ಉಪನ್ಯಾಸ ನೀಡಿದರು.
ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ ಮಾತನಾಡಿದರು. ಕನ್ನಡ ವಿಭಾಗದ ಅಧ್ಯಕ್ಷ ಪ್ರೊ.ವಿ.ಜಯರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
