ಹರಿಹರ: ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್ ಉದ್ಯಮದ ಕಾರ್ಯಶೈಲಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಲಿದೆ ಎಂದು ಕರ್ಣಾಟಕ ಬ್ಯಾಂಕ್ ಎಜಿಎಂ ನಾಗರಾಜ ಅಡಿಗ ಹೇಳಿದರು.
ನಗರದ ಕರ್ಣಾಟಕ ಬ್ಯಾಂಕಿನಲ್ಲಿ ನಡೆದ ಬ್ಯಾಂಕಿನ ಹರಿಹರ ಶಾಖೆಯ 60ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ಯಾಂಕಿಂಗ್ ಉದ್ಯಮ ಸಾಕಷ್ಟು ಬದಲಾವಣೆ ಕಂಡಿದೆ, ಗಣಕ ಯಂತ್ರ ಬಳಕೆಯಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುತ್ತಿದ್ದು, ಮೊಬೈಲ್ ಬ್ಯಾಂಕಿಂಗ್ ಕ್ರಾಂತಿ ಉಂಟು ಮಾಡಿದೆ, ಕಡಿಮೆ ಸಿಬ್ಬಂದಿ ಬಳಸಿ ಕೆಲಸ ಮಾಡುವ ದಿನಗಳು ದೂರವಿಲ್ಲ ಎಂದರು.
22 ರಾಜ್ಯ, 2 ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 915 ಶಾಖೆಗಳು, 1.30 ಕೋಟಿ ಗ್ರಾಹಕರು, 8652 ಸಿಬ್ಬಂದಿ, 2.35 ಲಕ್ಷ ಶೇರುದಾರರನ್ನು ಹೊಂದಿ ದೇಶಾದ್ಯಂತ ಬ್ಯಾಂಕಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗ್ರಾಹಕ ಕೇಂದ್ರಿತವಾಗಿ ಅಭಿವೃದ್ಧಿ ಹೊಂದುವ ಗುರಿಯೊಂದಿಗೆ ಎ ದರ್ಜೆಯ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಕನ್ನಡ ಭಾಷೆ ಬಲ್ಲ ಸಿಬ್ಬಂದಿ ಹೊಂದಿ ದೇಶಾದ್ಯಂತ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲೆ ಸೇವೆ ನೀಡುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.
ಬ್ಯಾಂಕಿನ ಹರಿಹರ ಶಾಖೆ ವ್ಯವಸ್ಥಾಪಕ ಪಲ್ಲೆ ಮುದ್ದುಕೃಷ್ಣ, ಸಿಬ್ಬಂದಿ, ಗ್ರಾಹಕರು ಪಾಲ್ಗೊಂಡಿದ್ದರು.