ಬಾಬಾ
ಎಂದು ಕರೆದೆ
ಬಾಪೂ ಬಂದರು, ತಲೆ ಸವರಿದರು
ಬಾಪೂ
ಎಂದು ಕರೆದೆ
ಬಾಬಾ ನಸುನಕ್ಕರು
ನನಗೀಗ
ಮತ್ತಿಬ್ಬರು ತಾಯಂದಿರು!
ಕ್ಯಾರವಾನ್
ನಟ್ಟ ನಡುರಸ್ತೆಯಲ್ಲೇ
ನಿಂತುಬಿಟ್ಟಿದೆ
ನೀವು ಹತ್ತಿ ಇಳಿದ ಕ್ಯಾರವಾನ್
ಮುಂದೆ ಎಳೆಯಲು
ಅವರು ಬಿಡುತ್ತಿಲ್ಲ
ಗೆಳೆಯರು
ಎಳೆಯುತ್ತಲೇ ಇದ್ದಾರೆ
ಕನಿಷ್ಟ
ಹಿಂದೆ ಚಲಿಸೀತೆಂಬ ಭಯದಿ
ಚಕ್ರಗಳಡಿಯಲ್ಲಿ
ನಾನು
ಮಲಗಿದ್ದೇನೆ.
ಗಾಂಧಿಯಜ್ಜನಿಗೆ..
ಅಜ್ಜಾ….
ನೀವು ಡಾಕ್ಟರ್ ಸಾಹೇಬರ ತಂದೆಯಾಗಬೇಕಿತ್ತು
ನಾವೂ…
ನಿನ್ನ ಮೊಮ್ಮಕ್ಕಳಾಗುತ್ತಿದ್ದೆವು.
Read also : ಡಿಸೆಂಬರ್ ಆರು(ನಾಲ್ಕು ಕಣ್ಣ ಹನಿಗಳು): ಬಿ.ಶ್ರೀನಿವಾಸ
ದಾರಿ
ಎರಡು ಹೆಜ್ಜೆ ಬಾಪೂವಿನೊಂದಿಗೆ
ನಾಲ್ಕು ಹೆಜ್ಜೆ ಬಾಬಾರೊಂದಿಗೆ
ನಡೆದರೆ
ಸಿಕ್ಕೇ ಸಿಗುವುದು
ಬುದ್ಧನ ನಗು
ಬಿ.ಶ್ರೀನಿವಾಸ
