ಕಳೆದ ವಾರ ದಿಲ್ಲಿಯಲ್ಲಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಅವರು ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಅವರು ವಿವರಿಸಿದ್ದಾರೆ.
‘ಸರ್, ಕರ್ನಾಟಕದಲ್ಲಿ ಪಕ್ಷ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಒಂದು ಸುತ್ತಿನ ಚರ್ಚೆ ನಡೆಸಿ ಬಂದಿದ್ದೇನೆ. ಅದನ್ನು ಸರಿಪಡಿಸಬೇಕೆಂದರೆ ತುರ್ತಾಗಿ ಕೆಲ ಬದಲಾವಣೆಗಳನ್ನು ಮಾಡಬೇಕು ಮತ್ತು ನಾಯಕರಲ್ಲಿರುವ ಪ್ರತಿಷ್ಟೆಗೆ ಬ್ರೇಕ್ ಹಾಕಬೇಕು’ ಅಂತ ಅಗರ್ವಾಲ್ ವಿವರಿಸಿದಾಗ ಅಮಿತ್ ಷಾ ತಣ್ಣಗೆ ಕೇಳಿಸಿಕೊಂಡರಂತೆ.
ಈ ಸಂದರ್ಭದಲ್ಲಿ ಮಾತು ಮುಂದುವರಿಸಿದ ಅಗರ್ವಾಲ್,’ಕರ್ನಾಟಕದಲ್ಲಿ ಪಕ್ಷದ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸರಿ ಇಲ್ಲ.ಇದಕ್ಕೆ ಭವಿಷ್ಯದ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿ ಕಾರಣ.ಇವತ್ತಲ್ಲ ನಾಳೆ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಕಾರಣಕ್ಕಾಗಿ ಹಲವರು ತೆರೆಯ ಹಿಂದೆ ಹೋರಾಟ ನಡೆಸಿದ್ದಾರೆ.
ಇವತ್ತು ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಂಘರ್ಷದ ಮೂಲ ಇದು. ಪಕ್ಷದಲ್ಲಿ ಇವತ್ತು ನಡೆಯುತ್ತಿರುವ ಸಂಘರ್ಷಗಳಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತೆಗೆದುಕೊಂಡ ಕೆಲ ತೀರ್ಮಾನಗಳು ಕಾರಣ ಅನ್ನಿಸಬಹುದಾದರೂ ಆಳದಲ್ಲಿರುವುದು ಮಾತ್ರ ನಾಯಕತ್ವಕ್ಕಾಗಿನ ಪೈಪೋಟಿ. ಹೀಗಾಗಿ ಅಲ್ಲಿ ಉದ್ಭವಿಸಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರವೆಂದರೆ ಪಕ್ಷಕ್ಕೆ ಸರ್ಜರಿ ನಡೆಯಬೇಕು. ಪದಾಧಿಕಾರಿಗಳ ಪಟ್ಟಿಯಿಂದ ಹತ್ತೋ ಹನ್ನೆರಡು ಮಂದಿಯನ್ನು ತೆಗೆದುಹಾಕಿ ಹಿರಿಯರಿಗೆ, ಸಂಘಟನಾ ಶಕ್ತಿ ಇರುವವರಿಗೆ ಆದ್ಯತೆ ನೀಡಬೇಕು ಮತ್ತು ಇದೇ ಕಾಲಕ್ಕೆ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಅವರನ್ನು ಬಹಿರಂಗವಾಗಿ ಟೀಕಿಸದಂತೆ ಯತ್ನಾಳ್ ಮತ್ತಿತರರಿಗೆ ಸೂಚನೆ ನೀಡಬೇಕು.
ಈ ಕೆಲಸ ಬೇಗ ನಡೆದರೆ ಕರ್ನಾಟಕದ ಬಿಜೆಪಿ ಘಟಕ ನಿಯಂತ್ರಣಕ್ಕೆ ಬರುತ್ತದೆ.ಮುಂದೆ ಎಲ್ಲರನ್ನೂ ಕೂರಿಸಿ ಭವಿಷ್ಯದ ಮುಖ್ಯಮಂತ್ರಿ ಯಾರು ಅಂತ ಅಧಿಕಾರಕ್ಕೆ ಬಂದಾಗ ಪಕ್ಷ ನಿರ್ಧರಿಸುತ್ತದೆ.ಅಲ್ಲಿಯವರೆಗೆ ಯಾರೂ ಈ ವಿಷಯದಲ್ಲಿ ಅನಗತ್ಯ ಮೆಸೇಜು ಪಾಸು ಮಾಡಬಾರದು ಅಂತ ಕಟ್ಟು ನಿಟ್ಟಾಗಿ ಹೇಳಬೇಕು’ ಅಂತ ರಾಧಾಮೋಹನದಾಸ್ ಅಗರ್ವಾಲ್ ವಿವರಿಸಿದ್ದಾರೆ.
ಹೀಗೆ ಅವರು ಹೇಳಿದ್ದನ್ನು ಕೇಳಿಸಿಕೊಂಡ ಅಮಿತ್ ಷಾ,’ನೀವು ಹೇಳಿದ್ದು ಸರಿಯಾಗಿದೆ’ ಎಂದರಂತೆ. ಯಾವಾಗ ಅಗರ್ವಾಲ್ ಅವರು ಅಮಿತ್ ಷಾ ಅವರಿಗೆ ಈ ವಿವರ ನೀಡಿದರೋ? ಇದಾದ ನಂತರ ದಿಲ್ಲಿಯ ನಾಯಕರು ರಾಜ್ಯ ಬಿಜೆಪಿಯ ಉಭಯ ಬಣಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅದರ ಪ್ರಕಾರ ರಾಜ್ಯ ಬಿಜೆಪಿಗೆ ಮುಂದಿನ ತಿಂಗಳು ಸರ್ಜರಿ ನಡೆಯಲಿದೆ ಮತ್ತು ಪದೇ ಪದೇ ಯಡಿಯೂರಪ್ಪ, ವಿಜಯೇಂದ್ರ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ಯತ್ನಾಳ್ ಗ್ಯಾಂಗು ಮೌನವಾಗಿರಲಿದೆ. ಮೂಲಗಳ ಪ್ರಕಾರ,ಜನವರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ತಾನಕ್ಕೆ ಹೊಸಬರು ಬರಲಿದ್ದು ಇದಾದ ನಂತರ ವಿಜಯೇಂದ್ರ ಗ್ಯಾಂಗಿಗೆ ಸರ್ಜರಿ ನಡೆಯಲಿದೆ.
ಈ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಯಾರು ಬರಲಿದ್ದಾರೆ ಅಂತ ರಾಜ್ಯ ಬಿಜೆಪಿಯ ಉಭಯ ಬಣಗಳು ಕಾತರದಿಂದ ಕಾಯುತ್ತಿದ್ದು ಅನುರಾಗ್ ಸಿಂಗ್ ಠಾಕೂರ್ ಇಲ್ಲವೇ ಭೂಪೇಂದ್ರ ಯಾದವ್ ಬಂದು ಕುಳಿತರೆ ತಮಗೆ ಪ್ಲಸ್ ಆಗುತ್ತದೆ ಅಂತ ಯತ್ನಾಳ್ ಅಂಡ್ ಗ್ಯಾಂಗು ನಿರೀಕ್ಷಿಸುತ್ತಿದೆ.
ವಿಜಯೇಂದ್ರ ಏಕೆ ಹಿಂದೆ ಸರಿದರು? (Political analysis)
ಅಂದ ಹಾಗೆ ರಾಜ್ಯ ಬಿಜೆಪಿಯ ಸಧ್ಯದ ಸಂಘರ್ಷವನ್ನು ನಿಯಂತ್ರಣಕ್ಕೆ ತರಲು ವರಿಷ್ಟರು ಸರ್ಜರಿ ಮಾಡುವುದು,ಯತ್ನಾಳ್ ಅಂಡ್ ಗ್ಯಾಂಗಿನ ಬಾಯಿಗೆ ಬೀಗ ಹಾಕುವುದೇನೋ ಸರಿ. ಆದರೆ ಅಷ್ಟಾದ ನಂತರವೂ ಸಮಸ್ಯೆ ಪರಿಹಾರವಾಗುತ್ತದೆ ಅಂತಲ್ಲ.ಹೆಚ್ಚೆಂದರೆ ಸ್ವಲ್ಪ ದಿನಗಳ ಕಾಲ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಇರಬಹುದು ಅಷ್ಟೇ.
ಆದರೆ ವಾಸ್ತವವಾಗಿ ಈ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ಫ್ಲೆಕ್ಸಿಬಲ್ ಆಗಬೇಕು. ಅರ್ಥಾತ್, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮನ:ಸ್ಥಿತಿಗೆ ಬರಬೇಕು. ಹಾಗೆಂಬ ಯೋಚನೆಯಿಮದಲೇ ಪಕ್ಷದ ಪ್ರಮುಖರೊಬ್ಬರು ನಾಲ್ಕು ತಿಂಗಳ ಹಿಂದೆ ಸಂಧಾನ ಯತ್ನವನ್ನು ಆರಂಭಿಸಿದ್ದರಂತೆ. ಇದರ ಭಾಗವಾಗಿ ವಿಜಯೇಂದ್ರ ಅವರನ್ನು ಸಂಪರ್ಕಿಸಿದ ಈ ನಾಯಕರು: ಪಕ್ಷದಲ್ಲಿನ ಗೊಂದಲ ಮುಂದುವರಿಯುವುದು ಬೇಡ. ಹೀಗಾಗಿ ನಿಮ್ಮ ವಿರುದ್ದ ತಿರುಗಿ ಬಿದ್ದಿರುವ ಯತ್ನಾಳ್, ಅರವಿಂದ ಲಿಂಬಾವಳಿ ಮತ್ತು ರಮೇಶ ಜಾರಕಿಹೊಳಿ ಅವರ ಜತೆ ಮುಕ್ತ ಮಾತುಕತೆ ನಡೆಸಿ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಹೀಗೆ ವಿಜಯೇಂದ್ರ ಅವರ ಜತೆ ಮಾತನಾಡಿದ ಈ ಮಧ್ಯವರ್ತಿ ನಾಯಕರು ತದನಂತರ ರಮೇಶ್ ಜಾರಕಿಹೊಳಿ ಜತೆಗೂ ಮಾತನಾಡಿ:ಇಂತಹ ದಿನ ನೀವು ಬೆಂಗಳೂರಿನಲ್ಲಿರಿ. ವಿಜಯೇಂದ್ರ ನಿಮ್ಮನ್ನು ಭೇಟಿ ಮಾಡುತ್ತಾರೆ.ನೀವು ಮೂವರೂ ಸ್ನೇಹಿತರು ಫ್ಲೆಕ್ಸಿಬಲ್ ಆಗಿರಿ ಎಂದಿದ್ದಾರೆ.
ಸರಿ,ಇದಾದ ನಂತರ ನಿಗದಿತ ದಿನದಂದು ರಮೇಶ್ ಜಾರಕಿಹೊಳಿ ಅವರನ್ನು ವಿಜಯೇಂದ್ರ ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಫ್ಲೆಕ್ಸಿಬಲ್ ಆಗಿಯೇ ಮಾತನಾಡಿದ ವಿಜಯೇಂದ್ರ ಅವರು:ಎಲ್ಲವನ್ನೂ ಮರೆತುಬಿಡಿ. ಒಟ್ಟಿಗೆ ಪಕ್ಷ ಕಟ್ಟೋಣ ಅಂತ ಹೇಳಿದ್ದಾರೆ. ಆಗೆಲ್ಲ ಪ್ರತಿಯುತ್ತರಿಸಿದ ರಮೇಶ್ ಜಾರಕಿಹೊಳಿ:ನೋಡಿ ವಿಜಯೇಂದ್ರ, ನನಗೆ ನಿಮ್ಮ ಬಗ್ಗೆ,ನಿಮ್ಮ ತಂದೆ ಯಡಿಯೂರಪ್ಪನವರ ಬಗ್ಗೆ ಸಿಟ್ಟಿದೆ.
ನಿಮ್ಮಿಂದ ನನಗಾದ ನೋವುಗಳು ಒಂದೆರಡಲ್ಲ.ಪಾರ್ಲಿಮೆಂಟ್ ಚುನಾವಣೆಯಲ್ಲಿ ಬೆಳಗಾವಿ,ರಾಯಚೂರು ಕ್ಷೇತ್ರಗಳ ಟಿಕೆಟನ್ನು ನಮ್ಮವರಿಗೆ ಉದ್ದೇಶಪೂರ್ವಕವಾಗಿ ತಪ್ಪಿಸಿದಿರಿ. ಹೀಗೆ ಹೇಳಲು ಹೋದರೆ ಒಂದೆರಡಲ್ಲ.ಅದರೆ ಇವತ್ತು ನೀವು ನಮ್ಮನೆಗೆ ಬಂದಿದ್ದೀರಿ. ಹೀಗಾಗಿ ನಾನು ನಿಮ್ಮ ಮಾತುಗಳನ್ನು ತಿರಸ್ಕರಿಸುವುದಿಲ್ಲ.ಆದರೆ ಇದೇ ರೀತಿ ನೀವು ಯತ್ನಾಳ್ ಮತ್ತು ಲಿಂಬಾವಳಿ ಅವರ ಜತೆಗೂ ಮಾತನಾಡಿ ಎಂದರಂತೆ.
ಆದರೆ ರಮೇಶ್ ಜಾರಕಿಹೊಳೊಯವರ ಮನೆಯಿಂದ ವಾಪಸ್ಸಾದ ಮೇಲೆ ವಿಜಯೇಂದ್ರ ಅವರು ಯತ್ನಾಳ್,ಲಿಂಬಾವಳಿ ಅವರನ್ನು ಭೇಟಿ ಮಾಡುವ ಗೋಜಿಗೇ ಹೋಗಿಲ್ಲ.ಕಾರಣ? ರಮೇಶ್ ಜಾರಕಿಹೊಳಿ ಅವರಾದರೆ ಈ ಹಿಂದೆ 2019 ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರು.ಅವತ್ತು ಅವರು ಕಾಂಗ್ರೆಸ್ ಪಕ್ಷದಿಂದ ದೊಡ್ಡ ಸಂಖ್ಯೆಯ ಶಾಸಕರನ್ನು ಕರೆದುಕೊಂಡು ಬಂದಿದ್ದಕ್ಕಾಗಿ ತಮ್ಮ ತಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು.
ಹೀಗಾಗಿ ಅವರನ್ನು ಸಮಾಧಾನಿಸುವುದೇನೋ ಸರಿ,ಆದರೆ ಯತ್ನಾಳ್ ಮತ್ತು ಲಿಂಬಾವಳಿ ಅವರನ್ನು ಸಮಾಧಾನಿಸುವ ಅಗತ್ಯವೇನಿದೆ? ಎಂಬ ಯೋಚನೆಯಿಂದ ವಿಜಯೇಂದ್ರ ಹೀಗೆ ಮಾಡಿದರು ಎಂಬುದು ಮೂಲಗಳ ವಾದ. ಅದೇನೇ ಇದ್ದರೂ ಪಕ್ಷದೊಳಗಿನ ಭಿನ್ನಮತಕ್ಕೆ ಬ್ರೇಕ್ ಹಾಕುವ ಅವಕಾಶವನ್ನು ವಿಜಯೇಂದ್ರ ಕಳೆದುಕೊಂಡರು.ಮತ್ತು ಭಿನ್ನರನ್ನು ನಿಯಂತ್ರಿಸಲು ವರಿಷ್ಟರ ಮೊರೆ ಹೋಗುವ ಸ್ಥಿತಿ ತಂದುಕೊಂಡರು ಎಂಬುದು ಬಿಜೆಪಿ ಮೂಲಗಳ ಮಾತು.
ಕೆಪಿಸಿಸಿ ಪಟ್ಟಕ್ಕೆ ಜಾರ್ಕಿ v/s ಡಿಕೆಸು?(Political analysis)
ಇನ್ನು ಕೆಲ ಕಾಲ ನಿಂತಿದ್ದ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸು ಪುನ: ಆರಂಭವಾಗಿದ್ದು,ಈ ಬಾರಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿಕೆಶಿ ಅವರ ಸಹೋದರ ಡಿ.ಕೆ.ಸುರೇಶ್ ಹೆಸರು ರೇಸಿನಲ್ಲಿ ಕಾಣಿಸಿಕೊಂಡಿವೆ.
ಈ ಮಧ್ಯೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ರೇಸಿನಲ್ಲಿ ಕಾಣಿಸಿಕೊಂಡಿದ್ದರೂ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಸುರೇಶ್ ನಡುವಣ ಫೈಟು ಟಫ್ ಆಗಿದೆ.
ಅಂದ ಹಾಗೆ ಮೊನ್ನೆ ಮೊನ್ನೆಯ ತನಕ ಕೂಲ್ ಆಗಿದ್ದ ಕೆಪಿಸಿಸಿ ಸಾರಥ್ಯದ ವಿಷಯ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರಲು ಹಲವು ಕಾರಣಗಳು ಕೇಳಿ ಬರುತ್ತಿವೆಯಾದರೂ ಪಕ್ಷದಲ್ಲಿ ಅದಿಕಾರ ಹಂಚಿಕೆ ಒಪ್ಪಂದದ ಮಾತು ಕೇಳಿ ಬಂದಿದ್ದೇ ಮೂಲ ಎಂಬ ವ್ಯಾಖ್ಯಾನ ಪ್ರಬಲವಾಗಿದೆ.
ಅದೇನೇ ಇದ್ದರೂ ಈಗ ರೇಸಿನಲ್ಲಿ ಕಾಣಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಸುರೇಶ್ ಅವರ ಹಿಂದೆ ಟಾಪ್ ಮೋಸ್ಟ್ ಕೈಗಳ ಒತ್ತಾಸೆ ಇದೆ. ಈ ಪೈಕಿ ಸತೀಶ್ ಜಾರಕಿಹೊಳಿ ಹಿಂದಿರುವವರು:ಕರ್ನಾಟಕದಲ್ಲಿ ಅಹಿಂದ ಮತಗಳನ್ನು ಕನ್ ಸಾಲಿಡೇಟ್ ಮಾಡಲು ಸಿದ್ದರಾಮಯ್ಯ ಅವರಿಗೆ ಜಾರಕಿಹೊಳಿ ಪ್ಲಸ್ ಆಗಲಿದ್ದಾರೆ ಎಂದು ವಾದಿಸುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಮೊನ್ನೆ ನಡೆದ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಯ ಗೆಲುವನ್ನು ಅವರು ಉಲ್ಲೇಖಿಸುತ್ತಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾದರೂ ಕ್ಷೇತ್ರದಲ್ಲಿ ಪಕ್ಷದ ಉಸ್ತುವಾರಿ ಹೊತ್ತ ಸತೀಶ್ ಜಾರಕಿಹೊಳಿ ಗೇಮ್ ಚೇಂಜ್ ಮಾಡಿದರು.ಅರ್ಥಾತ್,ಅಹಿಂದ ವರ್ಗಗಳ ಮತ ಸಾಲಿಡ್ಡಾಗಿ ಕನ್ ಸಾಲಿಡೇಟ್ ಮಾಡಿದ ಜಾರ್ಕಿಹೊಳಿ ಅದೇ ಕಾಲಕ್ಕೆ ಲಿಂಗಾಯತ ಮತ ಬ್ಯಾಂಕಿನ ಷೇರು ದಕ್ಕುವಂತೆ ಮಾಡಿದರು.
ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಈ ಕಾಂಬಿನೇಶನ್ ವರ್ಕ್ ಔಟ್ ಆಗಬೇಕೆಂದರೆ ಪಕ್ಷದ ಸಾರಥ್ಯ ಸತೀಶ್ ಜಾರಕಿಹೊಳಿ ಕೈಲಿರಬೇಕು ಎಂಬುದು ಅವರ ವಾದ. ಆದರೆ ಕೆಪಿಸಿಸಿ ಪಟ್ಟಕ್ಕೆ ಡಿ.ಕೆ.ಸುರೇಶ್ ಹೆಸರನ್ನು ಮುಂದೆ ಮಾಡುತ್ತಿರುವವರು ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಕಡೆ ಬೊಟ್ಟು ಮಾಡುತ್ತಾರೆ.
ಅವರ ಪ್ರಕಾರ,ಜೆಡಿಎಸ್ ಭದ್ರಕೊಟೆಯಾಗಿದ್ದ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಲು ಡಿಕೆಸು ಟೆಕ್ನಿಕ್ ಕಾರಣ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪವರ್ ಫುಲ್ಲಾಗಿದ್ದರೂ ಅವರ ಗೆಲುವಿಗೆ ಅಗತ್ಯವಾದ ಮತ್ತು ಅದಕ್ಕೂ ಹೆಚ್ಚಿನ ಮತಗಳನ್ನು ಸೆಳೆತಂದವರು ಡಿಕೆಸು.
ಅಂದ ಹಾಗೆ ಚನ್ನಪಟ್ಟಣದ ಗೆಲುವು ಬರೀ ಒಂದು ಕ್ಷೇತ್ರದ ಗೆಲುವಲ್ಲ.ಬದಲಿಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಿಷ್ಟವಾಗಿ ತಲೆ ಎತ್ತಲಿದೆ ಎಂಬುದರ ಕುರುಹು. ಹೀಗಾಗಿ ಭವಿಷ್ಯದಲ್ಲಿ ಹಳೆ ಮೈಸೂರು ಪಾಕೀಟನ್ನು ವಶಪಡಿಸಿಕೊಳ್ಳಲು ಡಿಕೆಸು ಟೆಕ್ನಿಕ್ ಅತ್ಯಗತ್ಯ.ಹೀಗಾಗಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬುದು ಮತ್ತೊಂದು ಗುಂಪಿನ ವಾದ. ಮುಂದೇನಾಗುತ್ತದೋ ಗೊತ್ತಿಲ್ಲ.ಆದರೆ ಸಧ್ಯಕ್ಕಂತೂ ಕೆಪಿಸಿಸಿ ಅಧ್ತಕ್ಷ ಸ್ಥಾನದ ರೇಸಿನಲ್ಲಿ ಜಾರಕಿಹೊಳಿ ಮತ್ತು ಡಿಕೆಸು ಮುಂದಿದ್ದಾರೆ.
ಲಾಸ್ಟ್ ಸಿಪ್ (Political analysis)
ಅಂದ ಹಾಗೆ ಕರ್ನಾಟಕದ ನೆಲೆಯಲ್ಲಿ ತೃತೀಯ ಶಕ್ತಿ ತಲೆ ಎತ್ತುವುದು ಬಹುತೇಕ ನಿಶ್ಚಿತವಾಗಿದೆ. ಈ ಸಂಬಂಧ ಚರ್ಚಿಸಲು ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಮತ್ತು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು ಡಿಸೆಂಬರ್ 16 ರಂದು ಸಭೆ ಸೇರಲಿದ್ದಾರೆ.
ಅಂದ ಹಾಗೆ ಇಬ್ರಾಹಿಂ ಸೇರಿದಂತೆ ಹಲ ನಾಯಕರು ಕಾಂಗ್ರೆಸ್ ಸೇರುವ ಒಲವು ಹೊಂದಿದ್ದರಾದರೂ ಇದ್ದಕ್ಕಿದ್ದಂತೆ ಹೊಸ ಶಕ್ತಿಯನ್ನು ಕಟ್ಟಲು ಯೋಚಿಸುತ್ತಿರುವುದು ಕುತೂಹಲಕಾರಿಯಾಗಿದೆ.
ಅರ್ಥಾತ್,ಅಧಿಕಾರ ಹಂಚಿಕೆಯ ಮಾತು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಾಳಯವನ್ನು ತಲ್ಲಣಗೊಳಿಸುವ ಸಾಧ್ಯತೆಗಳಿದ್ದು,ಈ ಹಿನ್ನೆಲೆಯಲ್ಲಿ ಈಗಲೇ ಕೈ ಹಿಡಿಯುವುದು ತರವಲ್ಲ ಎಂಬುದು ಸಿ.ಎಂ.ಇಬ್ರಾಹಿಂ ಯೋಚನೆ. ಹೀಗಾಗಿ ಸಧ್ಯಕ್ಕೆ ಹೊಸ ಶಕ್ತಿಯನ್ನು ಅಸ್ತಿತ್ವಕ್ಕೆ ತಂದರೆ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ ಹೆಜ್ಜೆ ಇಡಬಹುದು ಎಂಬುದು ಅವರ ಯೋಚನೆ. ಹೀಗಾಗಿ ರಕ್ಷಣಾ ವೇದಿಕೆ, ಬಹುಜನಸಮಾಜ ಪಕ್ಷ ಸೇರಿದಂತೆ ಹಲವು ಶಕ್ತಿಗಳ ಜತೆ ಸೇರಿ ಹೊಸ ಶಕ್ತಿ ಕಟ್ಟಲು ಅವರು ನಿರ್ಧರಿಸಿದ್ದಾರೆ.
Read also : Political analysis | ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು
ಆರ್.ಟಿ.ವಿಠ್ಠಲಮೂರ್ತಿ