ಕಳೆದ ವಾರ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ ಕರ್ನಾಟಕದಲ್ಲಿ ಸಿಎಂ ಹುದ್ದೆಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರೆ, ಸಿಎಂ ಸಿದ್ದರಾಮಯ್ಯ ಕನಲಿ ಕುಂತಿದ್ದಾರೆ.ಇವರಿಬ್ಬರ ನಡುವಣ ಸಂಘರ್ಷಕ್ಕೆ ಈಗ ಜಾತಿ ಸೈನ್ಯಗಳು ಧುಮುಕಿರುವುದು ವೇಣುಗೋಪಾಲ್ ಅವರ ಆತಂಕಕ್ಕೆ ಕಾರಣ.
ಯಾಕೆಂದರೆ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಒಕ್ಕಲಿಗ ಪ್ರಮುಖರು ಧ್ವನಿ ಎತ್ತಿದ್ದರೆ,ಸಿದ್ದರಾಮಯ್ಯ ಅವರ ಪರವಾಗಿ ಅಹಿಂದ ವರ್ಗಗಳ ಪ್ರಮುಖರು ಕೂಗು ಹಾಕಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ವರಿಷ್ಟರು ರವಾನಿಸುವ ಸಣ್ಣ ಸಿಗ್ನಲ್ಲು ಕೂಡಾ ಪಕ್ಷಕ್ಕೆ ದುಬಾರಿಯಾಗುತ್ತದೆ.
ಹಾಗಾಗಬಾರದು ಎಂದರೆ ಇವತ್ತು ಕರ್ನಾಟಕದಲ್ಲಿ ಸಿಎಂ-ಡಿಸಿಎಂ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂಬುದು ಕೆ.ಸಿ.ವೇಣುಗೋಪಾಲ್ ಅವರ ಪ್ರಪೋಸಲ್ಲು. ಯಾವಾಗ ಅವರು ಈ ಪ್ರಪೋಸಲ್ಲು ಮುಂದಿಟ್ಟರೋ? ಅಗ ದೂಸರಾ ಮಾತನಾಡದ ರಾಹುಲ್ ಗಾಂಧಿ ಅವರು ‘ಕ್ಯಾರಿ ಆನ್’ ಎಂದಿದ್ದಾರೆ.
ಹೀಗೆ ಅವರಿಂದ ಸೂಚನೆ ಸಿಕ್ಕಿದ್ದೇ ತಡ, ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ‘ಸಿದ್ರಾಮಯ್ಯಾಜೀ. ಇವತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಹೀಗಾಗಿ ನೀವು ಡಿ.ಕೆ.ಶಿವಕುಮಾರ್ ಅವರನ್ನು ಉಪಾಹಾರಕ್ಕೆ ಕರೆಯಿರಿ. ಹೀಗೆ ಇಬ್ಬರೂ ಸೇರಿದರೆ ಒಂದು ಪಾಸಿಟಿವ್ ಸಂದೇಶ ರವಾನೆಯಾಗುತ್ತದೆ. ಆ ಮೂಲಕ ಸರ್ಕಾರದಲ್ಲಿ ಗೊಂದಲವಿಲ್ಲ ಎಂಬ ಭಾವನೆ ಮೂಡುತ್ತದೆ'” ಎಂದಿದ್ದಾರೆ.
ಯಾವಾಗ ಕೆ.ಸಿ.ವೇಣುಗೋಪಾಲ್ ಈ ಸೂಚನೆ ಕೊಟ್ಟರೋ? ಇದಾದ ನಂತರ ಕಳೆದ ಶನಿವಾರ ಸಿಎಂ ಸಿದ್ಧರಾಮಯ್ಯ ಮತ್ಗು ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟಿಗೆ ತಿಂಡಿ ತಿಂದು ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಅದರೆ, ಇಂತಹ ಉಪಾಹಾರ ಕೂಟದ ನಂತರ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪು ಒಂದು ಕತೆ ಹೇಳುತ್ತಿದ್ದರೆ, ಸಿದ್ಧರಾಮಯ್ಯ ಅವರ ಕ್ಯಾಂಪು ಮತ್ತೊಂದು ಕತೆ ಹೇಳುತ್ತಿದೆ.
Read also : Political analysis|ಕೂಲ್ ಆಗಿರ್ರೀ ಡಿಕೆ ಅಂದ್ರಾ ಖರ್ಗೆ?
ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನ ಪ್ರಕಾರ: ‘ಡಿಸೆಂಬರ್ 8 ರಂದು ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ನಂತರ ವರಿಷ್ಟರು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸುತ್ತಾರೆ. ಅಧಿಕಾರ ತ್ಯಾಗ ಮಾಡುವಂತೆ ಅವರ ಮನವೊಲಿಸುತ್ತಾರೆ. ಹೀಗಾಗಿ ಹೊಸ ವರ್ಷದ ಶುರುವಿನಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ಗ್ಯಾರಂಟಿ.
ಆದರೆ ಸಿಎಂ ಸಿದ್ದರಾಮಯ್ಯ ಅವರ ಕ್ಯಾಂಪು ಇದನ್ನು ಒಪ್ಪುವುದಿಲ್ಲ. ಬದಲಿಗೆ ತನ್ನದೇ ವಾದ ಮುಂದಿಡುತ್ತದೆ. ಅದರ ಪ್ರಕಾರ,’ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ರಾಹುಲ್ ಗಾಂಧಿ ತಯಾರಿಲ್ಲ.ಯಾಕೆಂದರೆ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ನಿಂತಿರುವ ಅಹಿಂದ ವರ್ಗಗಳು ಚೆಲ್ಲಾಪಿಲ್ಲಿಯಾಗುತ್ತವೆ.
ಆ ಮೂಲಕ 1983 ಮತ್ತು 1994 ರಲ್ಲಾದಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ನೆಲ ಕಚ್ಚುತ್ತದೆ. ಅಂದ ಹಾಗೆ ರಾಹುಲ್ ಗಾಂಧಿ ಅವರಿಗೆ ಇದು ಸ್ಪಷ್ಟವಾಗಿ ಗೊತ್ತು.ಅದೇ ರೀತಿ ಕರ್ನಾಟಕದಲ್ಲಿ ಸರ್ಕಾರ ಅಲುಗಾಡಿದರೆ ದೇಶದಲ್ಲಿ ಕಾಂಗ್ರೆಸ್ ಕತೆ ಅಯೋಮಯವಾಗುತ್ತದೆ ಅಂತ ಗೊತ್ತು.ಹೀಗಾಗಿ ಅವರು ಕರ್ನಾಟಕದಲ್ಲಿ ಯಥಾಸ್ಥಿತಿ ಮುಂದುವರಿಯಲಿ ಅಂತ ಬಯಸುತ್ತಿದ್ದಾರೆ.
ಹಾಗೊಂದು ವೇಳೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಅವರು ಮುಂದಾದರೂ ಆ ಸಂದರ್ಭದಲ್ಲಿ ದಲಿತ ನಾಯಕರೊಬ್ಬರು ಸಿಎಂ ಆಗಬಹುದೇ ಹೊರತು ಮತ್ತೊಬ್ಬರಲ್ಲ.
ಅರ್ಥಾತ್,ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಬಣಗಳ ಮಧ್ಯೆ ಶುರುವಾದ ಕಾದಾಟ ಏನಿದೆ? ಇದು ಸಧ್ಯಕ್ಕೆ ಮುಗಿಯುವ ಯಾವ ಲಕ್ಷಣವೂ ಇಲ್ಲ.ಹೀಗಾಗಿ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಅಂತ ಡಿಕೆಶಿ,ಆಗಿಲ್ಲ ಅಂತ ಸಿದ್ಧರಾಮಯ್ಯ ಕ್ಯಾಂಪುಗಳ ಎರಡನೇ ಹಂತದ ಹೋರಾಟ ವಿಧಾನ ಮಂಡಲ ಅಧಿವೇಶನದ ನಂತರ ಮತ್ತೆ ಶುರುವಾಗಲಿದೆ.
ಅಧಿಕಾರ ಹಂಚಿಕೆ ಎಂಬ ಕಥನ…(Political analysis)
ಅಂದ ಹಾಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಣ ಖುರ್ಚಿ ಕಾಳಗಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿತಲ್ಲ? ಇದಾದ ನಂತರ ಅಧಿಕಾರ ಹಂಚಿಕೆ ಎಂಬ ಕಥನಕ್ಕೆ ರೋಚಕ ಟ್ವಿಸ್ಟುಗಳು ಸಿಗುತ್ತಿವೆ….
ಡಿಕೆಶಿ ಕ್ಯಾಂಪಿನ ಪ್ರಕಾರ, ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿಎಂ ಹುದ್ದೆಗೆ ಫೈಟು ನಡೆಯಿತಲ್ಲ? ಈ ಹಂತದಲ್ಲಿ ಮಲ್ಲಿಕಾರ್ಜುನ ಖರ್ಗೆ,ಕೆ.ಸಿ.ವೇಣುಗೋಪಾಲ್,ರಣದೀಪ್ ಸಿಂಗ್ ಸುರ್ಜೇವಾಲಾ,ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಇದ್ದಾಗ ಒಂದು ಮಾತುಕತೆ ನಡೆಯಿತು. ಅದರ ಪ್ರಕಾರ,ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಲಿ,ನಂತರದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತ ಸುರ್ಜೇವಾಲಾ ಹೇಳಿದಾಗ ಸಿದ್ಧರಾಮಯ್ಯ ಅದನ್ನೊಪ್ಪಿದ್ದರು. ಅಷ್ಟೇ ಅಲ್ಲ, ಒಂದು ವಾರ ಮುಂಚೆಯೇ ಖುರ್ಚಿ ಬಿಟ್ಟು ಕೊಡುವುದಾಗಿ ಹೇಳಿದ್ದರು.
ಆದರೆ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಿಂದ ತೇಲಿ ಬರುತ್ತಿರುವ ಈ ಮಾತುಗಳನ್ನು ಸಿದ್ದರಾಮಯ್ಯ ಕ್ಯಾಂಪು ಬಿಲ್ ಕುಲ್ ಒಪ್ಪುವುದಿಲ್ಲ. ಅದರ ಪ್ರಕಾರ,ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ನಡೆದಿದ್ದು ನಿಜವಾದರೂ ಅದಕ್ಕೆ ಒಪ್ಪಂದದ ರೂಪವೇ ಸಿಕ್ಕಿರಲಿಲ್ಲ. ಕಾರಣ? ಅವತ್ತು ಖರ್ಗೆ,ವೇಣುಗೋಪಾಲ್, ಸುರ್ಜೇವಾಲ,ಸಿದ್ದರಾಮಯ್ಯ,ಡಿಕೆಶಿ ಮತ್ತು ಡಿ.ಕೆ.ಸುರೇಶ್ ಇದ್ದ ಸಂದರ್ಭದಲ್ಲಿ ಆಗಿದ್ದೇ ಬೇರೆ.
ಅದು ಹೇಗೆಂದರೆ:ಅವತ್ತು ಸುರ್ಜೇವಾಲ ಅವರು ಅಧಿಕಾರ ಹಂಚಿಕೆಯ ಬಗ್ಗೆ ಪ್ರಸ್ತಾಪಿಸಿದರು.ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಲಿ,ಆನಂತರ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿ ಅಂತ ಅವರು ಹೇಳಿದಾಗ ಸಿದ್ದರಾಮಯ್ಯ ಕೂಡಾ ಅದನ್ನೊಪ್ಪಿದರು.ಆದರೆ, ಇದು ಸಾಧ್ಯವಾಗಬೇಕೆಂದರೆ ಒಂದು ಷರತ್ತಿದೆ ಎಂದರು.
ಅವತ್ತು ಈ ಎಲ್ಲಾ ನಾಯಕರೆದುರು ಸಿದ್ದರಾಮಯ್ಯ ಅವರು ಮಂಡಿಸಿದ ಷರತ್ತೆಂದರೆ: ಮೊದಲ ಎರಡೂವರೆ ವರ್ಷಗಳ ಕಾಲ ಸರ್ಕಾರ ನಾನು ಬಯಸಿದ ರೂಪದಲ್ಲಿರಬೇಕು. ಅರ್ಥಾತ್, ಸರ್ಕಾರದಲ್ಲಿ ನಾನು ಸಿಎಂ ಆದರೆ ಒಕ್ಕಲಿಗ, ಲಿಂಗಾಯತ, ದಲಿತ ಮತ್ತು ಮುಸ್ಲಿಂ ಸಮುದಾಯದ ಒಬ್ಬೊಬ್ಬ ನಾಯಕರು ಉಪಮುಖ್ಯಮಂತ್ರಿಗಳಾಗಿರಬೇಕು ಮತ್ತು ಈ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಇರಬಾರದು. ಮುಂದೆ ಎರಡೂವರೆ ವರ್ಷಗಳ ನಂತರ ನಾನು ಸಿಎಂ ಹುದ್ದೆ ಬಿಟ್ಟು ಕೊಡುತ್ತೇನೆ. ಮತ್ತು ಡಿ.ಕೆ.ಶಿವಕುಮಾರ್ ಅವರು ಬಯಸಿದ ರೀತಿಯಲ್ಲಿ ಸರ್ಕಾರ ರಚಿಸಲಿ.ನಾನು ಅವರ ಬೆನ್ನಿಗಿರುತ್ತೇನೆ ಎಂಬುದು ಅವತ್ತು ಸಿದ್ಧರಾಮಯ್ಯ ಅವರು ಮಂಡಿಸಿದ ಷರತ್ತು.
ಆದರೆ ಅವರ ಆ ಷರತ್ತಿನ ಪ್ರಕಾರ ಸರ್ಕಾರ ರಚನೆಯಾಗಲಿಲ್ಲ.ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಸೆಟ್ಲಾದರು.ಯಾವ ಕಾರಣಕ್ಕೂ ಅವರ ಕೈಗೆ ಬೆಂಗಳೂರು ಕೊಡುವುದಿಲ್ಲ ಅಂತ ಸಿದ್ಧರಾಮಯ್ಯ ಪಟ್ಟು ಹಿಡಿದು ರಾದ್ದಾಂತ ಮಾಡಿದರೂ ಕೆ.ಸಿ.ವೇಣುಗೋಪಾಲ್ ಮತ್ತು ಅವರಿಗೆ ಕ್ಲೋಜ್ ಆಗಿರುವ ಜಮೀರ್ ಅಹ್ಮದ್ ಅವರಿಂದಾಗಿ ಆಟ ಬದಲಾಯಿತು.ಅರ್ಥಾತ್ ಸಿದ್ದರಾಮಯ್ಯ ಬಯಸಿದಂತೆ ಆಟ ನಡೆಯಲಿಲ್ಲ.
ಇಷ್ಟಾದ ಮೇಲೆ ಅಧಿಕಾರ ಹಂಚಿಕೆಯ ಮಾತೆಲ್ಲಿಂದ ಬಂತು?ಚರ್ಚೆಯ ಹಂತದಲ್ಲೇ ಗರ್ಭಪಾತವಾದ ವಿಷಯ ಒಪ್ಪಂದದ ರೂಪ ಪಡೆದಿದ್ದು ಯಾವಾಗ?ಎಂಬುದು ಸಿದ್ದರಾಮಯ್ಯ ಕ್ಯಾಂಪಿನ ಪ್ರಶ್ನೆ. ಹೀಗೆ ಪ್ರಶ್ನೆ ಹಾಕುವ ಸಿದ್ಧರಾಮಯ್ಯ ಕ್ಯಾಂಪು ಮತ್ತೊಂದು ಕುತೂಹಲಕಾರಿ ಕತೆಯನ್ನು ಬಿಚ್ಚಿಡುತ್ತದೆ.
ಅದೆಂದರೆ, ಒಪ್ಪಂದದಂತೆ ಡಿ.ಕೆ.ಸಿವಕುಮಾರ್ ಅವರಿಗೆ ಪಟ್ಟ ಬಿಟ್ಟು ಕೊಡಬೇಕು ಅಂತ ವರಿಷ್ಟರನ್ನು ಒತ್ತಾಯಿಸಲು ಕೆಲ ಶಾಸಕರು ದಿಲ್ಲಿಗೆ ಹೋಗಿದ್ದರಲ್ಲ? ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಕಿವಿಗೆ ದಿಲ್ಲಿಯ ಹಿರಿಯ ನಾಯಕರೊಬ್ಬರು ಸಿದ್ದರಾಮಯ್ಯ -ಡಿ.ಕೆ. ಶಿವಕುಮಾರ್ ಅವರ ಮಧ್ಯೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆಯಂತೆ ಎಂದಾಗ,’ನೋ,ನೋ, ಅದೆಲ್ಲಾ ನನಗೆ ಗೊತ್ತಿಲ್ಲ. ರಾಜಸ್ತಾನ,ಛತ್ತೀಸ್ ಘಡದಲ್ಲಿ ಇಂತಹ ಒಪ್ಪಂದಗಳ ಕತೆ ಏನಾಯಿತು? ಅಂತ ಗೊತ್ತಿದ್ದ ಮೇಲೂ ಇದರ ಉಸಾಬರಿಗೆ ನಾನು ಹೋಗುತ್ತೇನಾ?”ಎಂದರಂತೆ.
ಹೀಗೆ ರಾಹುಲ್ ಗಾಂಧಿಯವರಿಗೆ ಗೊತ್ತಿಲ್ಲದ ಅಧಿಕಾರ ಹಂಚಿಕೆಯ ಕಥನ ಊರ್ಜಿತವಾಗಲು ಸಾಧ್ಯವೇ? ಇದು ಸಿದ್ದರಾಮಯ್ಯ ಕ್ಯಾಂಪು ಹೇಳುವ ಹೊಸ ಕತೆ.
ರಾಹುಲ್ ಕಿವಿಗೆ ‘ವೇಣು’ನಾದ…..(Political analysis)
ಅಂದ ಹಾಗೆ ದಿಲ್ಲಿ ಮೂಲಗಳ ಪ್ರಕಾರ, ಕರ್ನಾಟಕದ ಬೆಳವಣಿಗೆಗಳ ಬಗ್ಗೆ , ರಾಹುಲ್ ಗಾಂಧಿ ಚಿಂತಿತರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಆಗುವ ಡ್ಯಾಮೇಜ್ ಏನು? ಅಂತ ಅವರು ಲೆಕ್ಕ ಹಾಕುತ್ತಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಕೆ.ಸಿ.ವೇಣುಗೋಪಾಲ್ ಕೊಟ್ಟಿರುವ ಫೀಡ್ ಬ್ಯಾಕ್ ಪ್ರಕಾರ: ಕೋಮುವಾದಿ ಶಕ್ತಿಗಳ ವಿರುದ್ಧ ಅಗ್ರೆಸಿವ್ ಆಗಿ ಮಾತನಾಡುವ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಮತ Consolidate ಆಗುವಂತೆ ಮಾಡಿದ್ದಾರೆ.
ಇಂತಹ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ದೇಶದ ಅಹಿಂದ ವರ್ಗಗಳಿಗೆ ನಾವು ಕೊಡುವ ಸಂದೇಶವೇನು? ಗಮನಿಸಬೇಕಾದ ಸಂಗತಿಯೆಂದರೆ ಇನ್ನು ಕೆಲವೇ ತಿಂಗಳಲ್ಲಿ ಕೇರಳ, ತಮಿಳುನಾಡು, ಅಸ್ಸಾಂ,ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲೆಲ್ಲ ಅಹಿಂದ ವರ್ಗಗಳ ಮತದಾರರ ಸಂಖ್ಯೆ ಹೆಚ್ಚೇ ಹೊರತು ಬಲಿಷ್ಠ ವರ್ಗಗಳದಲ್ಲ. ಹೀಗಿರುವಾಗ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಿದರೆ ಅಹಿಂದ ವರ್ಗಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.ಆದ್ದರಿಂದ ಸಿದ್ದರಾಮಯ್ಯ ಅವರನ್ನು ಇಳಿಸುವುದು ಸೇಫ್ ಅಲ್ಲ ಎಂಬುದು ವೇಣುಗೋಪಾಲ್ ಫೀಡ್ ಬ್ಯಾಕು.
ಹೀಗಾಗಿ ಇವತ್ತು ಕರ್ನಾಟಕದ ವಿಷಯ ಬಂದರೆ ರಾಹುಲ್ ಕಿವಿಯಲ್ಲಿ ವೇಣುನಾದ ಮೊರೆಯುತ್ತಿದೆ. ಆದ್ದರಿಂದ ಸಧ್ಯದ ಬಿಕ್ಕಟ್ಟಿಗೆ ಮದ್ದೆರೆಯಲು ಅವರು ಟೈಮು ತೆಗೆದುಕೊಂಡಿದ್ದಾರೆ.ಅಷ್ಟೇ ಅಲ್ಲ,ಮುಂದಿಡಬೇಕಾದ ಹೆಜ್ಜೆ ಹೇಗಿರಬೇಕು ಅಂತ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೇಳಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.
ಇದೇ ರೀತಿ ಇವತ್ತು ಸಿಎಂ-ಡಿಸಿಎಂ ಕದನಕ್ಕೆ ಸೋನಿಯಾಗಾಂಧಿ ಮದ್ದು ಕೊಡುತ್ತಾರೆ ಎಂಬ ಮಾತಿದ್ದರೂ, ಮೇಡಂ ಗಾಂಧಿ ಈ ವಿಷಯದಲ್ಲಿ ಉತ್ಸುಕರಾಗಿಲ್ಲ. ಶಿಮ್ಲಾ ಸಮೀಪದ ಪರ್ವತಗಳ ತಪ್ಪಲಲ್ಲಿರುವ ಮಶ್ರೋಬಾ ಎಂಬ ಪಟ್ಟಣದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು ಕರ್ನಾಟಕದ ವಿಷಯದಲ್ಲಿ ಖರ್ಗೆಯವರ ಅಭಿಪ್ರಾಯ ಕೇಳಿ ಹೆಜ್ಜೆ ಇಡುವಂತೆ ರಾಹುಲ್ ಗಾಂಧಿಯವರಿಗೆ ಸೂಚಿಸಿದ್ದಾರಂತೆ. ಮುಂದೇನಾಗುತ್ತದೋ ಕಾದು ನೋಡಬೇಕು.
ಲಾಸ್ಟ್ ಸಿಪ್…(Political analysis)
ಅಂದ ಹಾಗೆ ಅಪ್ಪ-ಅಮ್ಮ ಜಗಳದಲಿ ಕೂಸು ಬಡವಾಯ್ತು ಎಂಬಂತೆ ಸಿದ್ದು-ಡಿಕೆಶಿ ಕದನದ ಮಧ್ಯೆ ರಾಜ್ಯ ಕಾಂಗ್ರೆಸ್ ನ ಮಂತ್ರಿ ಪದವಿ ಆಕಾಂಕ್ಷಿಗಳು ಬಡವಾಗಿದ್ದಾರೆ.
ಮೂಲಗಳ ಪ್ರಕಾರ,ನವೆಂಬರ್ ಮೂವತ್ತರ ಭಾನುವಾರ ಸಂಪುಟ ಪುನರ್ರಚನೆ ಮಾಡಿ ಅಂತ ಕೆಲ ದಿನಗಳ ಹಿಂದೆ ವರಿಷ್ಟರು ಸಿದ್ಧರಾಮಯ್ಯ ಅವರಿಗೆ ಸೂಚಿಸಿದ್ದರು.ಅದರೆ ಅವರ ಸೂಚನೆಯ ಬೆನ್ನಲ್ಲೇ ಡಿಕೆಶಿ ಕಾಳಗ ಸುರುವಾದ್ದರಿಂದ ಪುನರ್ರಚನೆ ಪ್ರಕ್ರಿಯೆಗೆ ಬ್ರೇಕ್ ಬಿತ್ತು.
ಅರ್.ಟಿ.ವಿಠ್ಠಲಮೂರ್ತಿ
