Violence is the integral part of Hindutva Ideology ಎಂದ ಎಂ.ಎಸ್.ಗೊಲ್ವಾಲ್ಕರ್
“violence should be used as surgeon’s knife,…..to cure the society”! ಎಂದೂ ಸಹ ಹೇಳಿದ.
ಇಂದಿನ ಕ್ರೂರ ವರ್ತಮಾನಕ್ಕೆ ಕಾರಣವಾದ ಸಂಘ ಪರಿವಾರ ಮತ್ತದರ ಅಂಗಸಂಸ್ಥೆಗಳು ನಿರಾಳವಾಗಿ ಅಧಿಕಾರ ಅನುಭವಿಸುತ್ತಿರುವ ಹೊತ್ತಿನಲ್ಲಿ ಇಂದಿನ ಪ್ರಜಾವಾಣಿ ಯಲ್ಲಿನ ದೇವನೂರು ಮಹಾದೇವರ ನಾಜೂಕಿನ ಬರೆಹ ಓದಿ ಬಹಳ ನಿರಾಸೆಯಾಯಿತು.
1968ರ ನ್ಯಾಷನಲ್ ಇಂಟಿಗ್ರೇಷನ್ ಕೌನ್ಸಿಲ್ ವರದಿಯಲ್ಲಿ ,”1954ರಿಂದ 1960ನೇ ಇಸವಿಯ ಅವಧಿಯವರೆಗೆ ಇಡೀ ದೇಶದಲ್ಲಿ ಕೇವಲ 26 ಕೋಮುಗಲಭೆಗಳು ಸಂಭ ವಿಸಿದ್ದವು” ಅಂದರೆ ಸ್ವಾತಂತ್ರ್ಯೋತ್ತರ ಭಾರತದ ಆ ಕಾಲಘಟ್ಟ ಶಾಂತಿಯುತವಾಗಿತ್ತು.
ಇದು1961ರಷ್ಟೊತ್ತಿಗೆ ಪರಿಸ್ಥಿತಿ ಉಲ್ಟಾ ಆಯಿತು!
ಯಾವಾಗ ಜಬ್ಬಲ್ಪುರದಲ್ಲಿ ಗಲಭೆಗಳು ಭುಗಿಲೆದ್ದವೋ ಇಂದಿನ ಅಧಿಕಾರರೂಢ ಪಕ್ಷದ ಮೂಲ ಸಂಸ್ಥೆ ಜನಸಂಘ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 1998ರಲ್ಲಿ ಈ ಪರಿ ವಾರ ನೇತೃತ್ವದ ಸರ್ಕಾರ ಬಂದ ಮೇಲಂತೂ ದೇಶದ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ನಿರಂತರವಾದವು. ವಿ.ಹೆಚ್.ಪಿ (VHP), ಬಜರಂಗದಳಗಳು(BJD) ಮತ್ತು ಹಿಂದೂ ಜಾಗರಣ ಮಂಚ್ (HJM) ಮುಂತಾದ ಸಂಘ ಪರಿವಾರದ ಅಂಗಸಂಸ್ಥೆಗಳು ಕಾನೂನನ್ನೆ ತಮ್ಮ ಕೈಗೆ ತೆಗೆದುಕೊಂಡುಬಿಟ್ಟವು.
ದೆಹಲಿಯ ಆರ್ಚ್ ಬಿಷಪ್ ಆಲನ್ ಡಿ ಲಾಸ್ಟಿಕ್ ಪ್ರಕಾರ,”ಯಾವಾಗ ಇವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೋ ಆಗಿನಿಂದ ಕ್ರಿಶ್ಚಿಯನ್ನರ ಮೇಲೆ ಮತ್ತವರ ಮಿಷನರಿಗಳು ಮೇಲೆ ದಾಳಿಗಳು ಹೆಚ್ಚಾದವು”
ಬಾಬ್ರಿ ಮಸೀದಿ ಧ್ವಂಸ,ಇಂದೋರಿನ ರಾಣಿ ಮೈರಾಳನ್ನು ಕೊಚ್ಚಿ ಕೊಂದ ಪ್ರಕರಣವಾಗಲಿ, ದುಮ್ಕಾದಲ್ಲಿ ಚರ್ಚಿನ ಪಾದ್ರಿಯನ್ನು ಬೆತ್ತಲೆಗೊಳಿಸಿದ್ದು, ಪ್ರಾರ್ಥನಾ ಮಂದಿರ ಗಳ ಮೇಲೆ ದಾಳಿ ನಡೆಸಿದ್ದು, ಗುಜರಾತಿನಲ್ಲಿ ಬೈಬಲ್ ಗ್ರಂಥಗಳನ್ನು ಸುಟ್ಟುಹಾಕಿದ್ದು, ಕಿಯಾಂಜಿಹರೋದಲ್ಲಿ ರೆವರೆಂಡ್ ಸ್ಟೇನ್ಸ್ ಮತ್ತವರ ಇಬ್ಬರು ಮಕ್ಕಳ ಜೀವಂತ ದಹನ, ಫಾದರ್ ಆರುಲ್ ದಾಸ್ ರ ಹತ್ಯೆ, ಮತ್ತು ಇದೇ ರೀತಿಯ ದಾಳಿಗಳು ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳಾದವು.
ನೂರಾರು ಎನ್.ಜಿ.ಒ.ಗಳ ಸತ್ಯಶೋಧನಾ ವರದಿಗಳು, ಸರ್ಕಾರಿ ಸಂಸ್ಥೆಯ ವರದಿಗಳು ಕೈ ತೋರಿದ್ದು ಯಾರ ಕಡೆಗೆ? ಇಷ್ಟೆಲ್ಲಾ ಹಿಂಸೆಗಳು,ದಾಳಿಗಳು ನಡೆದಿದ್ದಾರೂ ಯಾಕೆ? ದಾಳಿಗಳು ನಡೆದಿರುವುದು ಯಾರ ಮೇಲೆ? ಯೋಚಿಸಿ ನೋಡಿದರೆ, ಮೊದಲಿಗೆ ಕ್ರಿಶ್ಚಿಯನ್ನರ ಮೇಲೆ, ಆಮೇಲೆ ಮುಸಲ್ಮಾನರ ಮೇಲೆ…ನಂತರ ದಲಿತರ ಮೇಲೆ. ಈಗೀಗ ಭಾರತ ಸಂವಿಧಾನ ಬದಲಾಯಿಸಿ, ಹಿಂದುಳಿದ ವರ್ಗಗಳ ಶೂದ್ರರ ಮೇಲೆ! ಹೀಗೆ ದಾಳಿಗಳು ನಿರಂತರವಾಗಿವೆ.
ಅಸಲಿಗೆ, ಇಂಡಿಯಾದಲ್ಲಿ ನಡೆದ , ನಡೆಯುತ್ತಿರುವ ಈ ದಮನ, ದಾಳಿ,ಹಿಂಸೆಗಳಿಗೆ ಕಾರಣಗಳು ಕೇವಲ ಮೂರೇ ಮೂರು ಕಾರಣಗಳು. ಒಂದು, Culture ಇನ್ನೊಂದು, Nation ಮತ್ತೊಂದು Conversion ಕಾರಣಗಳಿಗಾಗಿ!. ಇದಕ್ಕೆ ಕಾರಣ ಯಾವ ಪರಿವಾರ?
ದೇಮ….
ಇಷ್ಟನ್ನು ಅರ್ಥ ಮಾಡಿಕೊಂಡಿರಲಾರರು ಎಂದು ನಾನು ಹೇಳಲಾರೆ. ಹೋಗಲಿ,ಈ ದೇಶದ ಸಂಘಟನೆಯೊಂದರ ನೂರು ವರ್ಷಗಳ ಇತಿಹಾಸದಲ್ಲಿ ಅದೆಷ್ಟು ಕಂಬಾಲಪಲ್ಲಿ, ಬದನವಾಳು,ಕಲಕೇರಿ ಪ್ರಕರಣಗಳು ನಡೆದು ಹೋಗಿರಬಹುದು? ನೂರು ವರ್ಷಗಳಲ್ಲಿ ಎಂದಾದರೂ ಒಂದೇ ಒಂದು ಹತ್ತಿ ಉರಿದ ಕೊಟ್ಟಿಗೆಯನ್ನು ಈ ಪರಿವಾರ ನಂದಿಸಲು ಪ್ರಯತ್ನಿಸಿದೆಯಾ? ಹುಟ್ಟು ಕರಕಲಾದ ದೇಹಗಳಿಗಾಗಿ ಮಿಡಿದಿದೆಯಾ?
ದೇವನೂರು ಮಹಾದೇವರೇಕೆ ಹೀಗೆ ದೃಷ್ಟಿಹೀನರಾದರು? ನನ್ನ ಆತಂಕ ಇರುವುದು ದೇಮರ ಆರೋಗ್ಯದ ಮೇಲೆ. ಅವರ ಎದೆಗೆ ಗಾಂಧಿ ಬಿದ್ದಂತೆ ಬಾಬಾಸಾಹೇಬರೂ ಸಹ ಎದೆಗೆ ಬೀಳಲಿ ಎಂದು ಆಶಿಸುವೆ.
ಬಿ.ಶ್ರೀನಿವಾಸ