ಈ ಹಿಂದೆಯೂ ಗಣಿಗಾರಿಕೆ ಇರಲೇ ಇಲ್ಲ ಅಂತೇನಿಲ್ಲ. ಕೇವಲ ‘ಎ’ ಮತ್ತು ‘ಬಿ’ ವರ್ಗದ ಗಣಿಗಾರಿಕೆಯಿತ್ತು. ಕೆಲವೇ ಕೆಲವು ಕಂಪೆನಿಗಳ ಓನರ್ ಗಳು ಮಾತ್ರ ಮೈನಿಂಗ್ ನಡೆಸುತ್ತಿದ್ದರು. ಯಾವಾಗ ಗಣಿಗಾರಿಕೆಯ ಕಲ್ಲಿನ ಜೊತೆಗೆ ಮಣ್ಣಿಗೂ ಬೆಲೆ ಸಿಗಲು ಪ್ರಾರಂಭವಾಯಿತೋ ಆಗ ರಾಜಕಾರಣಿಗಳೇ ಕಾನೂನುಗಳ ಮೂಗುದಾಣಗಳನ್ನು ಸಡಿಲಿಸುತ್ತಾ ಹೋದರು.
ರಾಜಕಾರಣದ ಬಣ್ಣ ಕೂಡಾ ಬದಲಾಯಿತು
ಸಾವಿರಾರು ಹೆಕ್ಟೇರುಗಳಷ್ಟು ಉದ್ದದ ಮೈನಿಂಗ್ ಡಿಪ್ಪಿಂಗುಗಳೆಲ್ಲ ರಾಜಕಾರಣಿಗಳದೇ ಆಗಿಹೋದವು.ಅಪರಿಮಿತ ಗಣಿಗಾರಿಕೆಯ ಪರಿಣಾಮದಿಂದಾಗಿ ಜನಸಾಮಾನ್ಯರ ಬದುಕು ಅಸಹನೀಯವಾಗಿಬಿಟ್ಟಿತು. ಅಲ್ಲಿಯವರೆಗೂ ಇದ್ದಂತಹ ರಾಜಕಾರಣದ ಬಣ್ಣ ಕೂಡಾ ಬದಲಾಗಿಹೋಯಿತು.
ಈ ಹಿಂದೆ ಊರ ಜನರಿಂದ ಆಯ್ಕೆಯಾಗಿ ಹೋದ ಎಮ್ಮೆಲ್ಲೆ ಹತ್ರ ಯಾರಾದರೂ ಹೋಗಿ,ತಮ್ಮ ಊರಿಗೆ ಶಾಲೆ, ರಸ್ತೆ ರಿಪೇರಿಗೋ, ಕುಡಿಯುವ ನೀರಿಗಾಗಿಯೋ ಬೇಡಿಕೆಯಿಡುವ ಜನರಿದ್ದರು.
ಆಗ ” ಮೀಕೇಮಿ ಕೆಲ್ಸಮುಲೇದಾ..? ಮೀದೊಕ್ಕಟೆ ಊರೇಮಿ ನಾಕಿ..?ಪೋ..ಪೋ…ಪೋರ್ರಾ “(ನಿಮಗೆ ಕೆಲಸವಿಲ್ಲವೇನು? ನಿಮ್ಮದೊಂದೆ ಊರಂದ್ಕಡಿದೀರೇನು ನನಗೆ?…ಹೋಗ್..ಹೋಗ್ರಯ್ಯ..) ಎಂದು ಅರ್ಧ ಕನ್ನಡ ಇನ್ನರ್ಧ ತೆಲುಗು ಮಿಶ್ರಿತ ಭಾಷೆಯಲ್ಲಿ ಗದರಿಸಿ ಕಳುಹಿಸುತಿದ್ದ. ಆತ ಒಂದು ಕಪ್ ಟೀ ಕೂಡ ಕೊಡುತ್ತಿರಲಿಲ್ಲ. ಬಂದ ಜನ ಕೂಡ ಬೈಸಿಕೊಂಡು “ಗಪ್ಪವಾರು”(ದೊಡ್ಡೋರು) ಅಂತಂದು ಸುಮ್ಮನೆ ಊರ ದಾರಿ ಹಿಡಿಯುತ್ತಿದ್ದರು. ಆದರೆ…
ಪ್ರಜಾಪ್ರಭುತ್ವ ಎಚ್ಚರದಪ್ಪಿ ಬಿದ್ದಿರುವ ಹಾಗೆ ತೋರುತ್ತಿತ್ತು
ಕಳೆದ ಹತ್ತು ಹದಿನೈದು ವರುಷಗಳಿಂದ ಈಚೆಗೆ ಗಣಿಧಣಿಗಳೇ ಶಾಸಕರಾಗುತ್ತಿದ್ದಾರೆ.ಜನ ಅವರನ್ನು ಎಲೆಕ್ಷನ್ ಸಮಯದಲ್ಲಿ ನೋಡಿದ್ದು ಬಿಟ್ಟರೆ ಮತ್ತೆ ನೋಡುವುದು ಮತ್ತೊಂದು ಎಲೆಕ್ಷನ್ ಬಂದಾಗಲೆ. ಎಲೆಕ್ಷನ್ನಲ್ಲಿ ಹಬ್ಬವೋ ಹಬ್ಬ. ಅದುವರೆಗೂ ಜನ ಸಾಮಾನ್ಯರೆಂದೂ ನೋಡಿರದ ಸ್ಟೀಲ್ ಸಾಮಾನುಗಳನ್ನು , ತರಹೇವಾರಿ ಟಿಫನ್ನು ಕ್ಯಾರಿಯರಗಳನ್ನು,ಪಾತ್ರೆಗಳನ್ನು ಮನೆ ಮನೆಗೆ ಹಂಚಲಾಯಿತು.ಜೊತೆಗೆ ಒಂದು ಓಟಿಗೆ ಎರಡು ಸಾವಿರ ರೂಪಾಯಿಗಳು! ಕುಡಿಯುವವರಿಗೆ , ತಿನ್ನುವವರಿಗೆ ನಿರಂತರ ವ್ಯವಸ್ಥೆಗಳನ್ನು ಅತ್ಯಂತ ಕಾಳಜಿಯಿಂದಲೇ ಪ್ರತಿ ಹಳ್ಳಿಗಳಲ್ಲೂ ಮಾಡಲಾಯಿತು. ಅಲ್ಲಿಗೆ ಪ್ರಜಾಪ್ರಭುತ್ವ ಎಚ್ಚರದಪ್ಪಿ ಬಿದ್ದಿರುವ ಹಾಗೆ ತೋರುತ್ತಿತ್ತು.
ಹೀಗೆ ಗೆದ್ದು ಬಂದ ಆತನ ಹತ್ತಿರ ಸಮಸ್ಯೆಗಳನ್ನು ಹೊತ್ತು ಹೋಗಬೇಕೆಂದರೆ ಬೆಂಗಳೂರಿಗೇ ಹೋಗಬೇಕಿತ್ತು.ಗಣಿಧಣಿಗಳಿಗೇನು ರಾಜಕಾರಣದಿಂದ ಹಣ ಮಾಡುವ ಇರಾದೆಯೇನು ಇರಲಿಲ್ಲ.ಆದರೆ, ಅಕ್ರಮ ಗಣಿಗಾರಿಕೆ ನಿಲ್ಲಿಸದಂತೆ ಕಾಪಾಡುವ ಅಧಿಕಾರ ಬೇಕಿತ್ತು.ಗಣಿಧಣಿಗಳ ರಾಜಕಾರಣಕ್ಕಿಂತಲೂ ಗಣಿ ಬಿಜಿನೆಸ್ಸು ಅಪಾರವಾದ ಶ್ರೀಮಂತಿಕೆಯನ್ನು ತಂದು ಕೊಡುತ್ತಿದ್ದುದು ಸುಳ್ಳೇನಲ್ಲ. ಹೀಗೆ ಗಳಿಸಿದ ಹಣ ಬೆಂಗಳೂರಿನ ಲಾಡ್ಜುಗಳನ್ನು,ಬಾರ್ ಗಳನ್ನು,ಹೋಟೆಲುಗಳನ್ನು ಹೊಂದಲು ಅವರಿಗೆ ಸಹಾಯವಾದವು.
ಭವ್ಯ ಬಂಗಲೆಗಳಲ್ಲಿ ವಾಸಿಸುತ್ತಿದ್ಧ ತಮ್ಮದೇ ಊರಿನ ಎಮ್ಮೆಲ್ಲೆ ಎಂಬ ಮನುಷ್ಯನ ಹತ್ತಿರ ಊರಿನ ಗೋಳು ಹೇಳಿಕೊಳ್ಳಲು ಹೀಗೆ ಕ್ಷೇತ್ರದ ಜನರು ತಮ್ಮ ಪ್ರತಿನಿಧಿಯನ್ನು ಕಂಡು , ತಮ್ಮ ಊರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಹದಾಸೆಯಿಂದ ಬೆಂಗಳೂರೆಂಬ ಮಾಯಾನಗರಿಗೆ ಬರುತ್ತಿದ್ದರು.
ಹಳ್ಳಿಗಳಿಂದ ತಾಲೂಕು ಕೇಂದ್ರಕ್ಕೆ ಬಂದು ,ಕೆ.ಎಸ್.ಆರ್.ಟಿ.ಸಿ. ಬಸ್ಸು ಹತ್ತಿ ಕುಳಿತರೆ ಬೆಳಗಾಮುಂಜಾನೆ ಬೆಂಗಳೂರಿಗೆ ಇಳಿದವರ ಅನುಭವ ವಿವರಿಸುವೆ.
ಭವ್ಯ ಬಂಗಲೆ!
ಜನರು ಬಂಗಲೆಯ ಹತ್ತಿರ ಹೋದ ತಕ್ಷಣ ವೋಟಿನ ಕಾರ್ಡು,ಆಧಾರಕಾರ್ಡುಗಳನ್ನು ಚೆಕ್ ಮಾಡಲಾಗುತ್ತದೆ.ತಮ್ಮದೇ ಕ್ಷೇತ್ರದ ಜನ ಎಂದು ಗೊತ್ತಾದ ಮೇಲೇಯೇ ಅವರಿಗೆಲ್ಲ ಸ್ನಾನ,ನಿತ್ಯಕರ್ಮಾದಿಗಳಿಗೆ ರೂಮುಗಳನ್ನು ತೋರಿಸುತ್ತಾರೆ. ಭರ್ಜರಿ ತಿಂಡಿ ತಿಂದು ನಂತರ ನಿಂತಿದ್ದ ವೋಲ್ವೋ ಬಸ್ ಹತ್ತಬೇಕು. ಯಂತ್ರ ಮಾನವರಂತೆ ಜನರು ಹತ್ತಿ ಕುಳಿತು ಬೆಂಗಳೂರೆಂಬ ಮಾಯಾನಗರಿಯನ್ನು ಬೆರಗಿನಿಂದ ನೋಡುತಾರೆ. ಇಂತದೂ ಒಂದು ಲೋಕ ಇದೆಯಾ,? ಎಂದು ಬಂದ ಭಾಗ್ಯಕ್ಕೆ ಖುಷಿಪಡುತ್ತಾರೆ. ಮಧ್ಯಾಹ್ನ ಕೂಡ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಬೆಂಗಳೂರು ಎಂಬ ಊರು ನೋಡಿಯಾದ ಮೇಲೆ ಮತ್ತೆ ರಾತ್ರಿ ಭೂರಿ ಭೋಜನದ ವ್ಯವಸ್ಥೆ. ವಾಪಾಸು ಊರಿಗೆ ಹೊರಟು ನಿಂತವರ ಕೈಗೆ ಸಾವಿರ,ಐನೂರರ ಗಾಂಧಿ ನೋಟು !ಕೊಡಲಾಗುತ್ತಿತ್ತು. ಖುಷಿಯಿಂದ ಜನರು ಊರಿಗೆ ಮರಳುತ್ತಾರೆ. ತಾವು ಕೇಳಲೆಂದು ಹೋದ ಅದೇ ಮುರಿದು ಬೀಳುವ ಹಂತದ ಶಾಲೆ,ತಗ್ಗು ಗುಂಡಿಗಳ ರಸ್ತೆ,ತುಂಬು ಗರ್ಭಿಣಿಯರು ಒಂದು ಕೊಡ ನೀರಿಗಾಗಿ ಮೈಲುಗಟ್ಟಲೆ ಕ್ಯೂ ನಿಂತ ಚಿತ್ರಗಳು ಮತ್ತೆ ಊರಿಗೆ ಮರಳಿದಾಗಲೇ ಕಾಡ ತೊಡಗುತ್ತವೆ.
ಈ ಹಿಂದಿನ ಪ್ರತಿನಿಧಿ ಪ್ರಾಮಾಣಿಕ ಅಂತೇನಲ್ಲ.ಆದರೆ ಸಾಮಾನ್ಯ ಕಮೀಷನ್ ಹೊಡೆದೋ ತನ್ನ ಪಾಡಿಗೆ ತಾನು ಸಾಕಷ್ಟು ಗಳಿಸಿಟ್ಟುಕೊಳ್ಳುತ್ತಿದ್ದ. ಆದರೆ ಈಗ ಧಣಿಗಳೇ ಶಾಸಕರು , ಮಂತ್ರಿಗಳೂ ಆಗಿಹೋಗಿದ್ದರೂ ಜನರ ಕೈಗೆ ಸಿಗುವುದಿಲ್ಲ.ಕಾಫಿ, ಟೀ, ತಿಂಡಿ , ತೀರ್ಥಗಳಿಗೇನೂ ಕೊರತೆ ಮಾಡದ ಈ ಅದೃಶ್ಯ ಪ್ರತಿನಿಧಿಗಳು ಗುಡ್ಡ ಬೆಟ್ಟಗಳನ್ನು ಕರಗಿಸುವ ದರೋಡೆಕೋರರೆಂಬುದು ಮುಗ್ಧ ಜನರಿಗೆ ಗೊತ್ತಾಗುವಷ್ಟರಲ್ಲಿ ಮತ್ತೊಂದು ಚುನಾವಣೆ ಬಂದಿರುತ್ತದೆ.
ಸಾದಾ ಪಂಚೆ,ಅಂಗಿಯ ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರೆಂಬ ಹಿರಿಯ ಸಮಾಜವಾದಿಯೊಬ್ಬರು ಈ ಭಾಗದ ಶಾಸಕರಾಗಿದ್ದರು.ಅವರು ಸದಾ ಹಳೆಯ ಸೈಕಲ್ ಮೇಲೆಯೆ ಹಳ್ಳಿ ಹಳ್ಳಿಗಳಿಗೆ ಭೇಟಿಕೊಟ್ಟು ಜನರ ಅಹವಾಲು ಆಲಿಸುತ್ತಿದ್ದರು.ಅವರು ತೀರಿಹೋದ ದಿನ ಅಂತ್ಯಸಂಸ್ಕಾರಕ್ಕೂ ಅವರು ಕುಟುಂಬವರ್ಗ ಹಣವಿಲ್ಲದೆ ಪರದಾಡಿದರೆಂದು ಕೇಳಿದ್ದೆವು.ಇಂತಹ ನಿಸ್ಪೃಹ ಮನುಷ್ಯ ಪಿ.ಯು.ಸಿ ಓದುತ್ತಿದ್ದ ನಮ್ಮಂತವರ ಕಣ್ಣಿಗೆ ಸಾಕ್ಷಾತ್ ಗಾಂಧಿ ತಾತನಂತೆಯೆ ಕಂಡಿದ್ದರು.
ಅವರು ತೀರಿಹೋದ ದಿನ ಅವರ ತೆರೆದ ಕಣ್ಣುಗಳಲ್ಲಿ ,ಹಗರಿಬೊಮ್ಮನಹಳ್ಳಿ,ಕೂಡ್ಲಿಗಿಯಂತಹ ಬಡ ಊರುಗಳ ಜನರ ಉದ್ಧಾರಕ್ಕಾಗಿ ಅದೆಷ್ಟು ಕನಸುಗಳಿದ್ದವೋ ಏನೋ…? ಅವರ ನೆನಪು ಮಾಡಿಕೊಳ್ಳಲು ಸಹ ಜನರಿಗೀಗ ಪುರುಸೊತ್ತು ಇಲ್ಲ. ತೀವ್ರ ಬಡತನ,ಬರಪೀಡಿತ ಪ್ರದೇಶದ ಜನ ಆ ಕ್ಷಣದ ಕೆಲ ಸಂತಸದ ಗಳಿಗೆಗಾಗಿ ಎಲೆಕ್ಷನ್ ನನ್ನು ಕಾತುರದಿಂದ ಕಾಯುತ್ತಾರೆ.ಯಾವುದೋ ಅಮಲಿನಲ್ಲಿ ಧಣಿಗಳು ಮತ್ತೆ ಮತ್ತೆ ಚುನಾಯಿತರಾಗುತ್ತಲೇ ಇರುತ್ತಾರೆ. ಇದು , ಭಾರತದ ರಾಜಕಾರಣ ತಲುಪಿರುವ ಘನಘೋರ ದುರಂತದ ಸಂಕೇತದಂತೆಯೂ ಕಾಣಿಸತೊಡಗುತ್ತದೆ.
ಬಿ.ಶ್ರೀನಿವಾಸ