
ಗಣಿಗಾರಿಕೆಯನ್ನೆ ನಂಬಿ ಬದುಕಿದ್ದ ಕುಟುಂಬಗಳು ಒಂದು ಕಡೆಯಾದರೆ ಅಂತಹ ಕುಟುಂಬಗಳನ್ನೆ ಅವಲಂಬಿಸಿ ಬದುಕುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬಗಳೂ ಇದ್ದವು. ಇವರನ್ನೆ ನಂಬಿ ಬದುಕುತ್ತಿದ್ದ ಕರಡಿ ಆಡಿಸುವವರು, ಯಾವುದೋ ವೇಷ ಧರಿಸಿ ಬರುವ ಹಗಲುವೇಷ ಗಾರರು, ಸುಡುಗಾಡು ಸಿದ್ಧರು, ಕುರ್ರಮಾಮುಡುಗಾರು, ಮೈಗೆ ಚಾಟಿ ಬೀಸಿಕೊಳ್ಳುವ ದುರುಗ ಮುರಿಗಿಯವರು ಗಂಗಿ ಬಾರೆ.. ಗೌರಿ ಬಾರೆ ಎಂದು ಶಿವನ ಪಾಡನು ಮನೆಮನೆಗೆ ತಲುಪಿಸುವವರು..,ಇಂತಹ ಇನ್ನೂ ಎಷ್ಟೋ ಸಮುದಾಯಗಳಿದ್ದವು.
ಇವರೆಲ್ಲರು ಇಷ್ಟುದಿನ ಎಲ್ಲಿದ್ದರೋ ಏನೋ…ಗಣಿಗದ್ದಲದಲ್ಲಿ ಇವರ ವೇಷ ಭೂಷಣಗಳು, ಶಂಖ, ಜಾಗಟೆಗಳು,ಉರುಮಿಯಂತಹ ಉಪಕರಣಗಳ ಧೂಳು ಮತ್ತೆ ಒರೆಸುವಂತಾಯಿತು.ಹಳೆಯ ನೆನಪುಗಳಿಗೆ ಜಾರುವಂತಾಯಿತು.
ಕೊತ್ತಪ್ಯಾಟಿಗೆ ಪೋತೆ ಕೊಂಚಮು ಕಾಸನ್ನ ವಸ್ತುಂದನ್ನ..(ಹೊಸಪೇಟೆಗೆ ಹೋದರೆ ಸ್ವಲ್ಪ ರೊಕ್ಕ ಸಿಗುತ್ತೆ,) ಈಗ ಮನೆ ಮನೆಗೆ ಹೋದರೆ ನಾಯಿ ಅಟ್ಟಿಸಿಕೊಂಡು ಬರ್ತವೆ. ಧಣಿಗಳು ನೋಡಿಯೂ ನಾಯಿಗಳಿಗೆ ಗದರುವುದಿಲ್ಲ ಎಂದು ತುಂಬು ಬೇಜಾರಿನಿಂದ ನುಡಿದ. ಹೊಸಪೇಟೆಯಲ್ಲಿ ಮತ್ತೆ ನಿಮಗೆ ಹೆಂಗೆ ರೊಕ್ಕ ಸಿಗುತ್ತದೆ? ಎಂದು ಕೇಳಿದೆ.
“ಅಲ್ಲೇನಿಲ್ಲ ಸೋಮಿ, ಟೀವಿ ಅಂಗಡಿ ಓಪನಿಂಗ್ ಐತಂತೆ, ಅಲ್ಲಿ ನಾವು ಸಾಲಕ ನಿಂತ್ಕೊಂಡು ಎಲ್ಲರನ್ನು ಸ್ವಾಗತಿಸಬಕು. ಕಹಳೆಯವನು ಕಹಳೆ ಊದುತ್ತಾನೆ. ದಾಸಪ್ಪನು ಜಾಗಟೆ ಬಾರಿಸುವನು, ಹಿಂಗೆ, ಹೊಟ್ಟೆಪಾಡಿಗೆ ನಮ್ಮ ದೇವರ ಕೆಲಸಗಳೆಲ್ಲ ಹೀಗೆ ಬದಲಾಗಿವೆ.ಅದಕ್ಕೆ ಬೇಜಾರಾಗಿದೆ. ಏನ್ಮಾಡೋದು? ಹೊಟ್ಟೆ ಕೇಳ್ಬೇಕಲ್ಲ ,?” ಎಂದ ಶ್ರೀ ರಾಮಚಂದ್ರ ಹೆಗಲಿಗೆ ಬಿಲ್ಲೇರಿಸಿ ಸೀತಾಮಾತೆಯೊಂದಿಗೆ ಹೊರಟೇಬಿಟ್ಟ! ಸಣ್ಣ ಮಗ ಆಂಜನೇಯನ ವೇಷಧಾರಿ ಉದುರುವ ಬಾಲಕ್ಕೆ ಉಡುದಾರ ಸಿಕ್ಕಿಸಿಕೊಳ್ಳುತ್ತಲೇ ಅವರ ಹಿಂದೆಯೇ ಓಡಿದ.
ಹೀಗೆ ಹೋಗುವಾಗ, “ನಾವು ಗಣಿಗಾರಿಕೆಯ ಮತ್ತಿನಲ್ಲಿ ಕಸುಬು ಪೂರ್ತಿ ಬಿಟ್ಟಿದ್ದೆವು ನೋಡಿ ಸೋಮಿ… ಈಗ ಅದೇ ಕೈ ಹಿಡೀತು. ಆದರೆ ಏನ್ಮಾಡುದು, ನಾವು ಮಹಾಭಾರತದ್ದೋ , ರಾಮಾಯಣದ್ದೋ ಡೈಲಾಗ್ ಹೊಡೀತೀವಿ. ಆದರೆ ಭಾಳ ಕಡೆ, ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ದೃಶ್ಯವನ್ನೆ ಕೇಳುತಾರೆ ಸೋಮಿ.”
“………..”
“ಬಜಾರಿನಲ್ಲಿ ಎಲ್ಲರೆದುರಿಗೇ ನನ್ನ ಹೆಂಡತಿ ಸೀರೆನ ಸೆಳೀಬೇಕಲ್ಲ ಅಂತ ಬೇಸರ ಆಗ್ತದೆ. ಆದ್ರೇನ್ಮಾಡೋದು ಹೊಟ್ಟೆಪಾಡಲ್ಲವೆ?” ಎಂದು ಹೇಳಿ ವಿಲಕ್ಷಣ ನಗೆ ಬೀರಿದ.
ಬಿ.ಶ್ರೀನಿವಾಸ