Kannada News | Dinamaana.com | 24-05-2024
ಇಲ್ಲಿನ ಗಣಿ ಬಾಧಿತ ಪ್ರದೇಶಗಳ ಬಹುತೇಕ ಊರುಗಳೆಲ್ಲ ಹಳ್ಳಿಗಾಡಿನ ಊರುಗಳೆ ಆಗಿವೆ.ಇಲ್ಲಿನ ಜನರಿಗೆ ಭೂಮಿ ಎನ್ನುವುದು ಕೇವಲ ನೆಲವಲ್ಲ.ಅದು ಅವರ ಸ್ವ ಜಗತ್ತಿನ ಲೋಕ, ಅವರಿಗದು ಸ್ಮೃತಿ . ಈ ನೆಲದ ಮೇಲೆ ಅವರ ಮನೆಗಳಿವೆ. ಹೊಲಗಳಿದ್ದವು, ಗಿಡ, ಮರ, ಹೂ ಬಳ್ಳಿಗಳು ಇದ್ದವು.
ಇಲ್ಲಿನ ದಾರಿಗಳು ಅವರಿಗೆ ಚೆನ್ನಾಗಿಯೇ ಗೊತ್ತು. ಹಿರೇರ ಕಥೆ-ವ್ಯಥೆಗಳೂ ಕೂಡ ಈ ನೆಲದೊಂದಿಗೆ ಬೆಸೆದುಕೊಂಡಿವೆ. ಇಲ್ಲಿರುವ ದೇವರುಗಳಾದ ಗಂಡಿ ನರಸಿಂಹ, ಕುಮಾರಸ್ವಾಮಿ, ಗಾಳೆಮ್ಮ, ಮಾರೆಮ್ಮರಿಗೂ ಇವರ ಪರಿಚಯವಿದೆ.
ಮೌನವಾಗಿ ರೋದಿಸಿದರೆ ಸಂತೈಸುವವರಾದರೂ
ಇವಾವುಗಳೂ ಇಲ್ಲದೆ ಬದುಕುವುದು ಎಂದರೆ ದಿಕ್ಕುತಪ್ಪಿ ಬೇರೆಯವರ ಆಸರೆಗೆ ಹಂಗಿಗೆ ಬೀಳುವುದು ಎಂದರ್ಥವಲ್ಲವೆ? ಇವೆಲ್ಲವೂ ಕೂಡ ಸಾವಿನಷ್ಟೇ ದುಃಖ ತರಿಸಬಲ್ಲ ಸಂಗತಿಗಳು.ಅದಕ್ಕಾಗಿಯೋ ಏನೋ ಮುದುಕರು ಈಗೀಗ ಏನೂ ಮಾತನಾಡುವುದಿಲ್ಲ.ಮೌನವಾಗಿರುತ್ತಾರೆ. ಮೌನವಾಗಿ ರೋದಿಸಿದರೆ ಸಂತೈಸುವವರಾದರೂ ಯಾರಿದ್ದಾರೆ?
ದುಡ್ಡು ನೀರಿಗಿಂತಲೂ ತುಸು ವೇಗವಾಗಿ ಖರ್ಚಾಯಿತು
ಗಣಿಗಾರಿಕೆಯ ಉತ್ತುಂಗದ ದಿನಗಳಲ್ಲಿ ಇಲ್ಲಿ ದುಡ್ಡು ಎನ್ನುವುದು ಬಳ್ಳಾರಿ, ಹೊಸಪೇಟೆ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಲ್ಲಿ ನೀರಿಗಿಂತಲೂ ತುಸು ವೇಗವಾಗಿ ಖರ್ಚಾಯಿತು. ಗಣಿ ಪ್ರದೇಶಗಳ ಲೋಲುಪತೆಗೆ ರಾಜಧಾನಿಯಂತಿರುವ ಹೊಸಪೇಟೆ ಎಂಬ ನಗರವಂತೂ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆಗೆ ಕೊರಗುತ್ತಿರುವ ಶ್ರೀಮಂತ ಮನೆಯ ಸೊಸೆಯಂತೆ ನಿತ್ಯವೂ ನರಳುತ್ತಿರುವ ಹಾಗೆ ಕಾಣಿಸುತ್ತಿದೆ.
ಇಲ್ಲಿ ಒಂದಲ್ಲ ಎರಡಲ್ಲ…ಕಳೆದ ಎರಡು ದಶಕಗಳಲ್ಲಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಕೈಗಾರಿಕೆಗಳು ಪ್ರತಿಷ್ಟಾಪಿಸಲ್ಪಟ್ಟಿವೆ. ಕಂಪೆನಿಗಳ ಹೆಸರು ನೋಡಬೇಕೆಂದರೆ ರಸ್ತೆಬದಿಯಲ್ಲಿ ಇಲ್ಲವೇ ರಸ್ತೆ ವಿಭಜಕಗಳ ಮಧ್ಯೆ ನೆಟ್ಟ ಗಿಡಗಳಿಗಿಂತಲೂ ದೊಡ್ಡದಾಗಿ ಬರೆದ ಹೆಸರುಗಳಿವೆ.ಮನೆಯ ಗೋಡೆಗಳ ಮೇಲೂ ಸಹ ಜಾಹೀರಾತು. ಧರಿಸಿದ ಅಂಗಿ,ಟೀ ಷರಟುಗಳ ಮೇಲೂ ಸಹ ಅವರದೇ ಚಿತ್ರ.
ಹಸಿವು ಆತ್ಮಗೌರವವನ್ನು ಕೂಡ ಕೊಂದು ಹಾಕುತ್ತಿದೆ
ಹಳ್ಳಿಗಳಲ್ಲಿ ತಾಂಡವವಾಡುತ್ತಿರುವ ಹಸಿವು ಮನುಷ್ಯನನ್ನು ಮಾತ್ರ ಕೊಲ್ಲುವುದಿಲ್ಲ.ಆತ್ಮಗೌರವವನ್ನು ಕೂಡ ಕೊಂದು ಹಾಕುತ್ತಿದೆ. ತಮ್ಮದೇ ನೆಲದಲ್ಲಿ, ತಮ್ಮದೇ ಭೂಮಿಯಲ್ಲಿ ಅನಾದಿಕಾಲದಿಂದಲೂ ಕೆಲಸ ಮಾಡುತ್ತಿರುವವರು,ಈ ನೆಲದಲ್ಲಿ ವಾಸ ಮಾಡುವವರು ಆಕ್ರಮಣಕಾರರಂತೆ ಕಾಣಿಸುತ್ತಿದ್ದಾರೆ.
ತಮ್ಮದೇ ಊರಿನ ಪರಿಸರದಲ್ಲಿ ಅನಾಮಿಕರಂತೆ ಜೀವನ
ಇದೊಂದು ಕೇವಲ ಸ್ಥಾನಪಲ್ಲಟವಾಗಿರದೆ ಜನರ ಬದುಕಿನ ಅಸ್ತಿತ್ವ ಪಲ್ಲಟದ ಬ್ರಹತ್ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.ತಮ್ಮದೇ ಊರುಗಳಲ್ಲಿ ತಾವೇ ಆರಿಸಿ ಕಳುಹಿಸಿದ ಪ್ರಭುತ್ವವನ್ನು ಕೇಳಲಿಕ್ಕಾಗದೆ,ಕಂಪೆನಿಗಳು ನಿರ್ಮಿಸಿದ ಬಸ್ ಸ್ಟ್ಯಾಂಡುಗಳಲ್ಲಿ ಭಿಕಾರಿಗಳಂತೆ ಕಾಯುತ್ತ ನಿಂತಿರುವ ಜನ. ತಮ್ಮದೇ ಊರಿನ ಪರಿಸರದಲ್ಲಿ ಅನಾಮಿಕರಂತೆ ಸಂಬಂಧವಿಲ್ಲದವರ ಹಾಗೆ ಬದುಕುವುದು ಎಂದರೆ ಅದೊಂದು ಸವಾಲೇ ಸರಿ.
Read Also:ಸೊಂಡೂರಿನ ಕಗ್ಗತ್ತಲೆಯ ಕಥನಗಳು-27 ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ…..
ಹಸಿವಿನ ಅನುಭವ,ಕೇವಲ ಶರೀರಕ್ಕೆ ಸಂಬಂಧಿಸಿದ್ದರೆ ನಷ್ಟವೆಂದು ಮೌನಕ್ಕೆ ಶರಣಾಗಬಹುದಿತ್ತು.ಜನರನ್ನು ಗಣಿ ಕಂಪೆನಿಗಳ ಋಣದಲ್ಲಿ ಇರುವಂತೆ ಸೃಷ್ಟಿಸಲಾಗಿದೆ.ಜನರಲ್ಲಿ ಪರಕೀಯತೆಯ, ಪರದೇಸಿತನದ ಭಾವದ ಜೊತೆಗೆ ತೀವ್ರ ಹತಾಶೆ ಮತ್ತು ಅವಮಾನಗಳಿಂದ ಜನರು ಸತತವಾಗಿ ಸೋತು ಹೋಗಿದ್ದಾರೆ.
ಎಡ ಪಕ್ಷದ ಕಾರ್ಯಾಲಯದ ಧ್ವಜಕಟ್ಟೆಯೂ ಗಣಿ ಕಂಪೆನಿಯೊಂದರ ಫಲಶ್ರುತಿ
ಇಷ್ಟೆಲ್ಲವುಗಳ ನಡುವೆ ರೈತರು,ಕಾರ್ಮಿಕ ಹೋರಾಟಗಳೇನೂ ಇಲ್ಲವೆ ?ಎಂಬ ಯೋಚನೆ ಬರಬಹುದು. ಇಲ್ಲವೆಂದೇನಿಲ್ಲ,ಆಗಾಗ ಕೂಗುಗಳು ಸರ್ಕಲ್ಲುಗಳಿಂದ ಡಿ.ಸಿ. ಆಫೀಸಿನ ತನಕ ಮೆಮೆರೊಂಡಮ್ ಕೊಡಲು ಸೀಮಿತವಾಗಿರುವ ಹಾಗೆ ತೋರುತ್ತಿದೆ. ಜೀವಮಾನದುದ್ದಕ್ಕೂ ಬಂಡವಾಳ ಶಾಹಿಗಳನ್ನು ವಿರೋಧಿಸಿಕೊಂಡು ಬಂದ ಎಡಪಕ್ಷವೊಂದರ ಕಾರ್ಯಾಲಯದ ಧ್ವಜಕಟ್ಟೆಯೂ ಸಹ ಗಣಿ ಕಂಪೆನಿಯೊಂದರ ಫಲಶ್ರುತಿಯಾಗಿರುವುದು ಪರಿಸ್ಥಿತಿಯ ವ್ಯಂಗ್ಯವಲ್ಲದೆ ಮತ್ತೇನು ?
ಇಂತಹ ಗಣಿ ಧೂಳಿನ ಮಧ್ಯೆ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಕೃಷಿಯಲ್ಲಿ, ತಮ್ಮನ್ನು ತೊಡಗಿಸಿಕೊಂಡ ಜನರು, ಗಣಿಗಾರಿಕೆಯೆಂಬ ಆಕ್ರಮಣಕಾರರ, ಪ್ರಭುತ್ವದ ಕಣ್ಣಿಗೆ, ಒಂದು ರೀತಿಯಲ್ಲಿ ಮೊಂಡರ ತರಹ ಕಾಣಿಸುತ್ತಾರೆ. ವಯಸ್ಸಾದ ಮುದುಕರನ್ನು ಯಾರಾದರೂ ಮಾತನಾಡಿಸಿದರೆನ್ನಿ,ಅವರು ಸುಮ್ಮನೆ ನೋಡುತ್ತಾರೆ.
ಊರು ನಮ್ಮದಲ್ಲವೋ….ನಾವೇ ಈ ಊರಿನವರಲ್ಲವೋ ಎಂಬ ಅಂತರ್ಮುಖಿತನವನ್ನು ಮತ್ತು ಇಲ್ಲಿನ ಮೂಲನಿವಾಸಿಗಳ ಅಂತರಂಗದ ನೋವು ಆಲಿಸುವವರಾದರೂ ಯಾರು?
- ಬಿ.ಶ್ರೀನಿವಾಸ