ದಾವಣಗೆರೆ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೊಡಗನೂರು ಗ್ರಾಮದಲ್ಲಿ ಭಾನುವಾರ ಮಾಯಕೊಂಡ ಶ್ರೀಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ಗ್ರಾಮ ರಾಜ್ಯದ ಪರಿಕಲ್ಪನೆಯ ಕನಸಿನ ಕೂಸು ರಾಷ್ಟ್ರೀಯ ಸೇವಾ ಯೋಜನೆ. ಇದು ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದರ ಮೂಲಕ ಕಾಲೇಜು ವಿದ್ಯಾರ್ಥಿಗಳಲ್ಲಿ ಶ್ರಮ, ಸಮಯಪ್ರಜ್ಞೆ, ಸೇವಾ ಮನೋಭಾವ ಮೂಡುತ್ತದೆ. ಇಲ್ಲಿನ ಅನುಭವಗಳನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸರ್ಕಾರದ ಗುರಿ ಸಾರ್ಥಕವಾಗುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿದ್ದು, ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಆನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಕೊಡುವ ಕಾರ್ಯವನ್ನೂ ಈ ಶಿಬಿರಗಳು ಮಾಡುತ್ತವೆ. ವಿದ್ಯಾರ್ಥಿಗಳು ಎನ್‍ಎಸ್‍ಎಸ್‍ನಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಯಕೊಂಡ ಶ್ರೀಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ತ್ರಿವೇಣಿ, ದಾವಣಗೆರೆ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಅಶೋಕ್‍ಕುಮಾರ್, ಗ್ರಾಪಂ ಅಧ್ಯಕ್ಷರಾದ ಕಾಳಿಬಾಯಿ, ಅಶೋಕ, ಲಕ್ಷ್ಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಣ್ಣ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ತಿಪ್ಪಣ್ಣ, ಸೈಯದ್ ನೌಶಾದ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.