ದಾವಣಗೆರೆ (Davanagere) : ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು ಏಪ್ರಿಲ್ ನಿಂದ ಆಗಸ್ಟ್‍ವರೆಗೆ ಜಿಲ್ಲೆಯಲ್ಲಿ 35 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಶಾಲೆ ಬಿಟ್ಟ ಮಕ್ಕಳ ವಿವರ ಸಂಗ್ರಹಿಸಿ, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ನಿಯಂತ್ರಣ ಸಾಧ್ಯವಾಗಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ.ಕೊಳ್ಳಾ ತಿಳಿಸಿದರು.
ಶನಿವಾರ ವಿವಿಧ ಅಂಗನವಾಡಿ ಕೇಂದ್ರಗಳು, ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಈ ಅವಧಿಯಲ್ಲಿ 35 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಮಕ್ಕಳ ರಕ್ಷಣಾ ಘಟಕದಿಂದ 32 ವಿವಾಹಗಳನ್ನು ತಡೆಗಟ್ಟಲಾಗಿದೆ. ಇದರಲ್ಲಿ 2 ಕ್ಕೆ ತಡೆ ತರಲಾಗಿದ್ದು 3 ಬಾಲ್ಯ ವಿವಾಹಗಳು ನಡೆದಿದ್ದು ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಸದಸ್ಯರು ಮಾತನಾಡಿ, ಬಾಲ್ಯ ವಿವಾಹಗಳು ನಡೆಯದಂತೆ ನೋಡಿಕೊಳ್ಳಬೇಕು, ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಿಖರವಾದ ಅಂಕಿ ಅಂಶಗಳಿದ್ದಲ್ಲಿ ಇವೆಲ್ಲವನ್ನು ತಡೆಗಟ್ಟಬಹುದಾಗಿದ್ದು ಶಿಕ್ಷಣ ಇಲಾಖೆಯಲ್ಲಿ ನಿಖರವಾದ ಮಾಹಿತಿ ಲಬ್ಯವಾಗಬೇಕು. ಶಾಲೆ ಬಿಟ್ಟ ಮಕ್ಕಳ ವಿವರವನ್ನು ವರದಿ ಮಾಡದ ಅಂತಹ ಶಾಲಾ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲು ಮಾಡುವ ಎಚ್ಚರಿಕೆಯನ್ನು ನೀಡಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜೊತೆಗೆ ಇತರೆ 10 ಇಲಾಖೆಗಳ ಪಾತ್ರ ಇದ್ದು ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಾಗುತ್ತದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕು, ಬಾಲ ಕಾರ್ಮಿಕ ಪದ್ದತಿ ನಿಷೇಧ, ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟಬೇಕಾಗಿದೆ. ಇದರಿಂದ ಮಕ್ಕಳ ಭವಿಷ್ಯ ಉತ್ತಮವಾಗಲಿದೆ ಎಂದರು.
ಆರ್.ಸಿ.ಹೆಚ್.ಪೋರ್ಟಲ್ ಅನ್ವಯ ಹದಿಹರೆಯದ ಗರ್ಭಿಣಿಯರ ವಿವರದನ್ವಯ ಜಿಲ್ಲೆಯಲ್ಲಿ 254 ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಮನೆ ಸಮೀಕ್ಷೆಯ ನಂತರ ಸಂಖ್ಯೆ 231 ಕ್ಕೆ ಇಳಿಕೆಯಾಗಿದ್ದು ಇದರಲ್ಲಿ 23 ತಾಯಂದಿರು 18 ವರ್ಷ ದಾಟಿದ್ದಾರೆ ಎಂದಾಗ ವಯಸ್ಸನ್ನು ತಿಳಿಯಲು ಆಧಾರ್ ಪರಿಗಣಿಸದೇ ಅವರ ಜನನ ಪ್ರಮಾಣ ಪತ್ರ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ವೈದ್ಯಕೀಯ ತಪಾಸಣೆ ಮಾಡಲು ತಿಳಿಸಿ ಇಲ್ಲಿ ಪೋಷಕರೇ ಹೇಳಿದರೂ ಸಹ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹದಿಹರೆಯದವರು ಗರ್ಭಿಣಿಯಾಗದಂತೆ ತಡೆಗಟ್ಟಬೇಕಾಗಿದ್ದು ಇದಕ್ಕೆ ಬೇಕಾದ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.
ಇಲಾಖೆಯಿಂದ ಮತ್ತು ಆಯೋಗದಿಂದ ಮಕ್ಕಳ ಬಾಲ್ಯ ವಿವಾಹ ತಡೆ, ಪೋಕ್ಸೋ ಕಾಯಿದೆ, ಬಾಲ ಕಾರ್ಮಿಕ ಪದ್ದತಿ ನಿಷೇಧದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲು ತರಬೇತಿ ಕಾರ್ಯಗಾರಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಕಾಗಿರುವುದು ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮಗಳ ಮೂಲಕ ಅನುಷ್ಠಾನವಾಗಬೇಕಾಗಿದೆ. ಕೆಲವು ಕೋಚಿಂಗ್ ಸೆಂಟರ್ ಮತ್ತು ಹಾಸ್ಟೆಲ್‍ಗಳು, ಮಕ್ಕಳ ಪಾಲನೆ ಬಗ್ಗೆ ಅನುಮತಿ ಪಡೆಯದೇ ಅನಧಿಕೃವಾಗಿ ನಡೆಯುತ್ತಿರುವ ಸಂಸ್ಥೆಗಳ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪೋಕ್ಸೋ ಕಾಯ್ದೆಯಡಿ 2013 ರಿಂದ 2024 ರವರೆಗೆ 731 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 86 ರಲ್ಲಿ ಶಿಕ್ಷೆಯಾಗಿದ್ದು 368 ಖುಲಾಸೆಯಾಗಿವೆ. 14 ಪ್ರಕರಣಗಳು ವರ್ಗಾವಣೆಗೊಂಡಿದ್ದು 11 ಸುಳ್ಳು ಪ್ರಕರಣಗಳಾಗಿವೆ. 252 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಬಾಲ ನ್ಯಾಯ ಮಂಡಳಿಯಲ್ಲಿ 2024 ರ ಏಪ್ರಿಲ್ ನಿಂದ ಜುಲೈವರೆಗೆ 60 ಬಾಕಿ ಸೇರಿ 8 ಹೊಸದಾಗಿ ಸೇರಿದಂತೆ 68 ಪ್ರಕರಣಗಳಿವೆ. ಇದರಲ್ಲಿ 15 ಇತ್ಯರ್ಥವಾಗಿದ್ದು 1 ವರ್ಷ ಮೇಲ್ಪಟ್ಟ 7 ಗಂಭೀರ ಹಾಗೂ 9 ಘೋರ ಪ್ರಕರಣಗಳಿವೆ. ವರ್ಷದೊಳಗೆ 7 ಸಣ್ಣ ಸ್ವರೂಪ, 4 ಗಂಭೀರ, 26 ಘೋರ ಸೇರಿ ಒಟ್ಟು 53 ಪ್ರಕರಣಗಳಿವೆ. ಬಾಲ ನ್ಯಾಯ ಮಂಡಳಿಯಲ್ಲಿ ಇದೇ ಅವಧಿಯಲ್ಲಿ ಬಾಕಿ 10 ಹಾಗೂ 5 ಹೊಸ ಪ್ರಕರಣ ಸೇರಿ 15 ಇದ್ದು ಇತ್ಯರ್ಥವಾಗಬೇಕಾಗಿದೆ. ಈ ವೇಳೆ ಸದಸ್ಯರು ಮಾತನಾಡಿ ಪ್ರಕರಣಗಳಲ್ಲಿ ತಪ್ಪಿತಸ್ಥರು ಖುಲಾಸೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು.
ಆರೋಗ್ಯ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸೂಚನೆ; ಹಾಸ್ಟೆಲ್‍ನಲ್ಲಿ ಮಕ್ಕಳಿಗೆ ಬೇಕಾದ ಸೋಪ್ ಕಿಟ್, ನ್ಯಾಪ್‍ಕಿನ್ ಸೇರಿದಂತೆ ಗುಣಮಟ್ಟದ ಆಹಾರ ಒದಗಿಸಬೇಕು ಮತ್ತು ತರಕಾರಿ, ಗುಣಮಟ್ಟದ ಬೇಳೆಕಾಳು ಒದಗಿಸಬೇಕು. ಭೇಟಿ ನೀಡಿದ ಕೆಲವು ಹಾಸ್ಟೆಲ್ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕೆಲವು ನ್ಯೂನ್ಯತೆಗಳು ಕಂಡು ಬಂದಿದ್ದು ಮಕ್ಕಳ ಆರೋಗ್ಯದ ಕಾರ್ಡ್ ಸರಿಯಾಗಿ ದಾಖಲು ಮಾಡಬೇಕು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹಾಸ್ಟೆಲ್, ಅಂಗನವಾಡಿಯಲ್ಲಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಎಲ್ಲಾ ವಿವರ ದಾಖಲು ಮಾಡಬೇಕು. ಹಾಸ್ಟೆಲ್, ಅಂಗನವಾಡಿಗಳಿಗೆ ವೈದ್ಯರು ಭೇಟಿ ನೀಡಿದ ಬಗ್ಗೆ ಸಹಿ ಮಾಡಲಾಗಿದೆ, ಆದರೆ ತಪಾಸಣೆ ಮಾಡಿದ ವಿವರಗಳ ದಾಖಲು ಮಾಡಿರುವುದಿಲ್ಲ. ಆರೋಗ್ಯ ಇಲಾಖೆಯಿಂದ ಎಬಿಆರ್‍ಕೆಯಡಿ 300 ಶಾಲೆಗಳ ಭೇಟಿ ಇದೆ, ಶಿಕ್ಷಣ ಇಲಾಖೆ ಅಂಕಿ ಅಂಶದಡಿ 2015 ಶಾಲೆಗಳಿದ್ದು ಒಂದೊಕ್ಕೊಂದು ತಾಳೆಯಾಗುತ್ತಿಲ್ಲ. ಇದಾಗದಂತೆ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ತಿಳಿಸಿ ಹಾಸ್ಟೆಲ್‍ಗಳಲ್ಲಿನ ಮಕ್ಕಳ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕೆಂದಿದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ ಅವರು ಮಾತನಾಡಿ, ಕೆಲವು ಶಾಲೆಗಳಲ್ಲಿ ಮಕ್ಕಳ ಟಿ.ಸಿ.ಕೊಡಲು ಸತಾಯಿಸುತ್ತಿದ್ದಾರೆ ಎಂಬ ದೂರುಗಳು ಪ್ರಾಧಿಕಾರಕ್ಕೆ ಬಂದಿವೆ, ಆನಗೋಡು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಕ್ಕೆ ಮಕ್ಕಳು ಶಾಲೆಗೆ ಹೋಗುವ ಹಾಗೂ ಬರುವ ಸಮಯಕ್ಕೆ ಕೆಎಸ್‍ಆರ್‍ಟಿಸಿ ಯಿಂದ ಬಸ್ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.