ದಾವಣಗೆರೆ:
ಕೇಳುವ, ಪ್ರಶ್ನಿಸುವ ಮತ್ತು ಚರ್ಚಿಸುವ ಮನೋಭಾವ ಬೆಳಸಿಕೊಂಡಾಗ ಮಾತ್ರ ಪರಿಪೂರ್ಣರಾಗಲು ಸಾಧ್ಯ ಎಂದು ಚಿತ್ರದುರ್ಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಾ.ನಟರಾಜ್ ಸಲಹೆ ನೀಡಿದರು.
ನಗರದ ವಕೀಲರ ಸಾಂಸ್ಕøತಿಕ ಸಮುದಾಯಭವನದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಲಾಗಿದ್ದ ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಉಪನ್ಯಾಸ ಮಾಲಿಕೆ-7 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಒಂದು ವಿಶ್ವವಿದ್ಯಾನಿಲಯ ಮಾಡುವ ಕೆಲಸವನ್ನು ದಾವಣಗೆರೆ ಜಿಲ್ಲಾ ವಕೀಲರ ಸಂಘ ಮಾಡುತ್ತಿದೆ. ಉಪನ್ಯಾಸ ಮಾಲಿಕೆಗಳನ್ನು ಆಯೋಜಿಸುವ ಮೂಲಕ ನ್ಯಾಯವಾದಿಗಳಿಗೆ ಉತ್ತಮ ಮಾಹಿತಿ ನೀಡುತ್ತಿದ್ದು, ಸಂಘದ ಕಾರ್ಯ ಶ್ಲಾಘನೀಯ. ಮೂಲ ಸೌಕರ್ಯ ಅಭಿವೃದ್ದಿ ಆದಂತೆ ವಕೀಲರ ಕೌಶಲ್ಯ ಕೂಡ ಹೆಚ್ಚಾಗಬೇಕು. ಇದಲ್ಲದೇ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ತಮ್ಮ ಜ್ಞಾನಾರ್ಜನೆಯನ್ನು ವೃದ್ದಿಸಿಕೊಳ್ಳಬೇಕೆಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ದಾವಣಗೆರೆ ಜಿಲ್ಲಾ ವಕೀಲರ ಸಂಘದಿಂದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರಿಂದ ಕಿರಿಯ ವಕೀಲರಿಗೆ ಅನುಕೂಲ ಆಗಿದ ಎಂದು ಹೇಳಿದರು.
ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಶ್ರೀಪಾದ ಮಾತನಾಡಿ, ನ್ಯಾಯಾಧೀಶರು, ವಕೀಲರು, ಪೊಲೀಸರು ಮತ್ತು ವೈದ್ಯರಿಗೆ ಇಂತಹ ಉಪನ್ಯಾಸ ಮಾಲಿಕೆಗಳು ಅಗತ್ಯವಾಗಿ ಬೇಕು. ಇಂತಹ ಉಪನ್ಯಾಸಗಳಿಂದ ವಕೀಲರು ತಮ್ಮ ಪ್ರಕರಣಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ವಕೀಲರಿಗೆ ನ್ಯಾಯ ವಿಜ್ಞಾನದ ಅರಿವು ಅಗತ್ಯವಾಗಿದ್ದು, ಕಾಲಕಾಲಕ್ಕೆ ಕಾನೂನು ಜ್ಞಾನವನ್ನು ಹರಿತಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ವಕೀಲರ ಸಂಘ ಆಯೋಜಿಸಲಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ.ಕರೆಣ್ಣವರ್, ಕೆ.ದಶರಥ್, ಶಿವಪ್ಪ ಸಲಗೆರೆ, ಪ್ರವೀಣ್‍ಕುಮಾರ್, ವಕೀಲರ ಸಂಘದ ಎ.ಎಸ್.ಮಂಜುನಾಥ್, ಬಸವರಾಜ್ ಇತರರು ಇದ್ದರು.